
ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಚನೆಯಾದ ಕೆ.ಬಿ. ಕೋಳಿವಾಡ ನೇತೃತ್ವದ ಸದನ ಸಮಿತಿ ರಚನೆಯಾಗಿ ಎರಡು ವರ್ಷ ಕಳೆದರೂ ಸರ್ಕಾರಕ್ಕೆ ವರದಿ ಮಾತ್ರ ಸಲ್ಲಿಕೆಯಾಗಿಲ್ಲ.
ಸಮಿತಿ ರಚನೆಯಾದ ಆರು ತಿಂಗಳೊಳಗೆ ವರದಿ ನೀಡಬೇಕಿತ್ತು. ಆದರೂ ವರದಿ ನೀಡುವ ಅವಧಿಯನ್ನು ವಿಸ್ತರಣೆ ಮಾಡುತ್ತಲೇ ಬರುತ್ತಿದೆ. ಕನಿಷ್ಠ 5ರಿಂದ 6 ಬಾರಿ ಅವಧಿ ವಿಸ್ತರಣೆಯಾಗಿದೆ. ಆದರೂ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಮಯ ಇನ್ನೂ ನಿಗದಿಯಾಗಿಲ್ಲ.
ಸಮಿತಿ ರಚನೆಯಾದ ಆರಂಭದಲ್ಲಿ ಇಂದಿಷ್ಟು ಕ್ರಮ ಕೈಗೊಳ್ಳುವ ದಿಟ್ಟತನ ತೋರಿದ್ರೂ ಅದು ಹೆಚ್ಚಿನ ದಿನ ಮುಂದುವರಿಯಲಿಲ್ಲ. ಅದರಲ್ಲೂ ಕೋಳಿವಾಡ ಅವರು ವಿಧಾನಸಭಾಧ್ಯಕ್ಷರಾದ ಬಳಿಕ ಸಮಿತಿ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ವರದಿ ಸಿದ್ಧಗೊಂಡಿದ್ದರೂ ಸರ್ಕಾರಕ್ಕೆ ಸಲ್ಲಿಸುವ ಮನಸ್ಸು ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ 1545 ಕೆರೆಗಳಿದ್ದು, ಇದರಲ್ಲಿ 1421 ಕೆರೆಗಳು ಒತ್ತುವರಿಯಾಗಿರುವ ಬಗ್ಗೆ ಕೋಳಿವಾಡ ಸಮಿತಿ ನೀಡಿರುವ ಪ್ರಾಥಮಿಕ ವರದಿಯಲ್ಲಿಯೇ ಪತ್ತೆಯಾಗಿದೆ.
ಒಟ್ಟಾರೆ 57,576.17 ಎಕರೆ ಕೆರೆ ಪ್ರದೇಶದ ಪೈಕಿ 10,472 ಎಕರೆ ಒತ್ತುವರಿಯಾಗಿದೆ. ನಗರ ಜಿಲ್ಲೆಯಲ್ಲಿ 835 ಕೆರೆಗಳ ಪೈಕಿ 4,277 ಎಕರೆ ಒತ್ತುವರಿ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ 710 ಕೆರೆಗಳ ಪೈಕಿ 6,195 ಎಕರೆ ಕೆರೆಯಂಗಳದ ಒತ್ತುವರಿಯಾಗಿದೆ ಎಂಬುದನ್ನು ಸ್ವತಃ ಸಮಿತಿಯೇ ಒಪ್ಪಿಕೊಂಡಿದ್ದರೂ ಅಂತಿಮ ವರದಿಯನ್ನು ನೀಡುವ ನಿರ್ಣಯ ಮಾತ್ರ ಕೈಗೊಂಡಿಲ್ಲ.
ಪ್ರಭಾವಿಗಳ ಒತ್ತಡ?: ಸಾಮಾನ್ಯವಾಗಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿರುವ ಹೆಚ್ಚಿನ ಕೆರೆಗಳನ್ನು ಪ್ರತಿಷ್ಠಿತ ಬಿಲ್ಡರ್‌ಗಳು, ರಾಜಕೀಯ ಜನಪ್ರತಿನಿಧಿಗಳು ಹಾಗೂ ಪ್ರಭಾವಿ ವ್ಯಕ್ತಿಗಳೇ ಒತ್ತುವರಿ ಮಾಡಿದ್ದಾರೆಂಬ ಮಾಹಿತಿ ಇದೆ. ಹೀಗಾಗಿ, ಭೂ ಮಾಫಿಯಾಗೆ ಮಣಿದಿರುವ ಸಮಿತಿಯು, ಸರ್ಕಾರಕ್ಕೆ ವರದಿ ಸಲ್ಲಿಸಲು ಹಿಂದೇಟು ಹಾಕುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಈ ನಡುವೆಯೇ ಬೆಳ್ಳಂದೂರು ಕೆರೆ ಸಂರಕ್ಷಣೆ ಬಗ್ಗೆ ನಿರಾಸಕ್ತಿ ಹೊಂದಿರುವ ಸ್ಥಳೀಯ ಪ್ರಾಧಿಕಾರಗಳು ಹಾಗೂ ಅಧಿಕಾರಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಛಾಟಿ ಬೀಸಿದೆ. ಹೀಗಿದ್ದರೂ ಸಹ ಸದನ ಸಮಿತಿ ಮಾತ್ರ ಎಚ್ಚೆತ್ತುಕೊಳ್ಳದೆ, ವಿಳಂಬನೀತಿ ಅನುಸರಿಸುತ್ತಿದೆ. ಕೆರೆಗಳನ್ನು ಉಳಿಸುವುದಕ್ಕಾಗಿ ಸಕ್ರಿಯವಾಗಿ ನಿಯಮಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿಲ್ಲ.
ವಿಳಂಬನೀತಿ ಖಂಡಿಸಿ ರಾಜಿನಾಮೆ ನೀಡಿದೆ
ಸದನ ಸಮಿತಿ ಪದೇ ಪದೇ ವರದಿ ನೀಡುವ ಅವಧಿಯನ್ನು ವಿಸ್ತರಿಸುತ್ತಲೇ ಇದ್ದರಿಂದ ಬೇಸತ್ತು ಸಮಿತಿ ಸದಸ್ಯ ಸ್ಥಾನಕ್ಕೆ ಕಳೆದ ನವೆಂಬರ್ ತಿಂಗಳಿನಲ್ಲಿ ರಾಜಿನಾಮೆ ನೀಡಿದೆ ಎಂದು ಬಿಜೆಪಿ ಶಾಸಕ ಸುರೇಶ್‌ಕುಮಾರ್ ತಿಳಿಸಿದರು. ನಿಗದಿತ ಅವಧಿಯನ್ನು ಮುಂದೂಡುತ್ತಲೇ ಇದೆ. ರಾಜಿನಾಮೆ ನೀಡಿದ ಬಳಿಕ ಜನವರಿ ಅಧಿವೇಶನದಲ್ಲಿ ವರದಿ ಮಂಡಿಸಲಾಗುವುದು ಎಂದರು. ಮಾರ್ಚ್ ಅಧಿವೇಶನ ಭರವಸೆ ನೀಡಿದ್ರು ಇಂದಿಗೂ ವರದಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.