
ನವದೆಹಲಿ(ಜುಲೈ 01): ಜಿಎಸ್'ಟಿ - ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್. ಸ್ವತಂತ್ರ ಭಾರತದಲ್ಲಿ ನಡೆದ ಅತೀದೊಡ್ಡ ತೆರಿಗೆ ಸುಧಾರಣೆ ಕ್ರಮವೆಂದು ಜಿಎಸ್'ಟಿಯನ್ನು ಬಣ್ಣಿಸಲಾಗುತ್ತಿದೆ. ಅಮೆರಿಕಕ್ಕೆ ಸಾಧ್ಯವಾಗದ್ದನ್ನ ಭಾರತ ಸಾಧಿಸಿ ತೋರಿಸಿದೆ ಎನ್ನುತ್ತಾರೆ. ವಿಪರೀತ ಸಂಕೀರ್ಣತೆಯ ಹಿಂದಿನ ಪರೋಕ್ಷ ಮತ್ತು ನೇರ ತೆರಿಗೆ ಪದ್ಧತಿಗೆ ಹೋಲಿಸಿದರೆ ಜಿಎಸ್'ಟಿ ಒಂದು ಸರಳ ತೆರಿಗೆ ವ್ಯವಸ್ಥೆಯಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ಜಿಎಸ್'ಟಿ ಪದ್ಧತಿ ಜಾರಿಯಲ್ಲಿದೆ. ಭಾರತದಲ್ಲಿ 17 ವರ್ಷಗಳ ಹಿಂದೆ ಇದರ ಜಾರಿಗೆ ಪ್ರಯತ್ನ ಆರಂಭವಾಯಿತು. ಈ ಹಂತದಲ್ಲಿ ಜಿಎಸ್'ಟಿ ಜಾರಿಗೊಳ್ಳಲು ವಿವಿಧ ಹಂತಗಳಲ್ಲಿ ನಾಲ್ವರು ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಲ್ಲಿ ಕಮ್ಯೂನಿಸ್ಟರು, ಕಾಂಗ್ರೆಸ್ಸಿಗರೂ ಇದ್ದಾರೆ.
1) ಅಸೀಮ್ ದಾಸ್'ಗುಪ್ತ:
2000ನೇ ಇಸವಿಯಲ್ಲಿ ಕೇಂದ್ರದ ವಾಜಪೇಯಿ ಸರಕಾರವು ಜಿಎಸ್'ಟಿ ಕುರಿತು ಚರ್ಚೆ, ಸಮಾಲೋಚನೆ ನಡೆಸಲು ತಜ್ಞರ ಸಮಿತಿಯೊಂದನ್ನ ರಚಿಸಿತು. ಆಗಿನ ಪಶ್ಚಿಮ ಬಂಗಾಳದ ಕಮ್ಯೂನಿಸ್ಟ್ ಸರಕಾರದ ಹಣಕಾಸು ಸಚಿವ ಅಸೀಮ್ ದಾಸ್'ಗುಪ್ತ ಅವರಿಗೆ ಈ ಸಮಿತಿಯ ನೇತೃತ್ವ ವಹಿಸಲಾಯಿತು. ಹಲವು ಮಹತ್ವದ ಅಂಶಗಳನ್ನು ಈ ಸಮಿತಿ ಸಂಗ್ರಹಿಸಿತು. ಆ ಬಳಿಕ ಅಸೀಮ್'ದಾಸ್ ಗುಪ್ತ ಅವರು ವಿವಿಧ ರಾಜ್ಯಗಳ ಹಣಕಾಸು ಸಚಿವರ ಸಮಿತಿಯ ನೇತೃತ್ವ ವಹಿಸಿದರು. ವಿವಿಧ ರಾಜ್ಯಗಳು, ಔದ್ಯಮಿಕ ಸಂಸ್ಥೆಗಳು ಮೊದಲಾದವೊಂದಿಗೆ ಸುದೀರ್ಘ ಚರ್ಚೆ ನಡೆಸಿ ಜಿಎಸ್'ಟಿ ಮಾದರಿಯನ್ನು ರಚಿಸಿದರು. ಇದು ಅಸೀಮ್ ದಾಸ್'ಗುಪ್ತ ಭಾರತದಲ್ಲಿ ಜಿಎಸ್'ಟಿಗೆ ಒಂದು ಬುನಾದಿಯನ್ನು ಹಾಕಿಕೊಟ್ಟಂತಾಯಿತು.
2) ವಿಜಯ್ ಕೇಲ್ಕರ್:
ದೇಶದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲೊಬ್ಬರೆನಿಸಿರುವ ವಿಜಯ್ ಕೇಲ್ಕರ್ ಅವರು ಪರೋಕ್ಷ ತೆರಿಗೆಯಿಂದ ಆಗುವ ಸಮಸ್ಯೆಗಳನ್ನು ಎತ್ತಿತೋರಿಸಿದ್ದರು. ಮೌಲ್ಯ ವರ್ಧಿತ ತೆರಿಗೆ ಸಿದ್ಧಾಂತದ ಮೇಲೆ ಜಿಎಸ್'ಟಿ ವ್ಯವಸ್ಥೆ ಜಾರಿಯಾಗಬೇಕೆಂಬುದು ಅವರ ಬಲವಾದ ವಾದವಾಗಿತ್ತು. 13ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಅವರು ರಾಷ್ಟ್ರೀಯ ಜಿಎಸ್'ಟಿ ಕೌನ್ಸಿಲ್'ನ ರಚನೆಗೆ ಪ್ರಸ್ತಾವ ಸಲ್ಲಿಸಿದ್ದು ಗಮನಾರ್ಹ.
3) ಪಿ.ಚಿದಂಬರಮ್:
2006ರಲ್ಲಿ ಪಿ.ಚಿದಂಬರಮ್ ಅವರು ವಿತ್ತ ಸಚಿವರಾಗಿ ತಮ್ಮ ಬಜೆಟ್'ನಲ್ಲಿ ಪರೋಕ್ಷ ತೆರಿಗೆ ಸುಧಾರಣೆಯ ಪ್ರಸ್ತಾವನೆ ಮಾಡಿದ್ದರು. 2012ರಲ್ಲಿ ಅವರು ಅನೇಕ ಸಮಿತಿ, ಉಪ-ಸಮಿತಿಗಳನ್ನು ರಚಿಸಿ ಎಲ್ಲಾ ರಾಜ್ಯಗಳ ಸಮಸ್ಯೆ, ಆತಂಕಗಳನ್ನ ಆಲಿಸಿ ಎಲ್ಲಕ್ಕೂ ಪರಿಹಾರ ಹುಡುಕುವ ಪ್ರಯತ್ನ ಮಾಡಿದರು. ಆದರೆ, 2014ರ ಲೋಕಸಭೆ ಚುನಾವಣೆಗೆ ಮುಂಚೆ ಜಿಎಸ್'ಟಿಗೆ ಅಂತಿಮ ರೂಪ ನೀಡಲು ಅವರಿಗೆ ಸಾಧ್ಯವಾಗಲಿಲ್ಲ.
4) ಅರುಣ್ ಜೇಟ್ಲಿ:
ಜಿಎಸ್'ಟಿಗೆ ಅಂತಿಮ ರೂಪು ಕೊಟ್ಟು ಅದನ್ನು ಕಾರ್ಯರೂಪದ ಮಟ್ಟಕ್ಕೆ ತಂದ ಶ್ರೇಯಸ್ಸು ಈಗಿನ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಸಲ್ಲಬೇಕು. 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅರುಣ್ ಜೇಟ್ಲಿಯವರು ಎಡೆಬಿಡದೇ ಜಿಎಸ್'ಟಿ ಅನುಷ್ಠಾನಕ್ಕೆ ಅವಿರತ ಶ್ರಮ ವಹಿಸಿದ್ದಾರೆ. ರಾಜಕೀಯ ವಿರೋಧಿಗಳ ಆಕ್ಷೇಪಗಳನ್ನ ಸಹನೆಯಿಂದ ಕೇಳಿ ಅವರಿಂದಲೂ ಸಮ್ಮತಿ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.