ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ನಾಮಕರಣ ಕಾರ್ಯಕ್ರಮ| ’ಅಭಿನಂದನ್’ ನಾಮಕರಣಕ್ಕೆ ಜೈಲಿನಲ್ಲಿ ರಂಗೋಲಿ, ಮನೆ ಮಾಡಿದ ಸಡಗರ| ಜಿಲ್ಲಾ ನ್ಯಾಯಾಧೀಶ ಸಂಜೀವ ಕುಲಕರ್ಣಿ ನೇತೃತ್ವದಲ್ಲಿ ನಾಮಕರಣ ಕಾರ್ಯಕ್ರಮ
ಕೊಪ್ಪಳ[ಮಾ.16]: ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಇಲ್ಲಿನ ಅಧಿಕಾರಿಗಳು ಇತರ ಖೈದಿಗಳೇ ಸೇರಿ ಮಹಿಳಾ ವಿಚಾರಣಾ ಬಂಧಿಯ ಮಗುವಿನ ನಾಮಕರಣ ಹಾಗೂ ಹುಟ್ಟುಹಬ್ಬದ ಕಾರ್ಯಕ್ರಮ ನಡೆಸಿದ್ದಾರೆ.
ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣಾಧೀನ ಖೈದಿಯಾಗಿರುವ ಆಂಧ್ರ ಮೂಲದ ತಾಯಿ ಜ್ಯೋತಿಗೆ ವರ್ಷದ ಹಿಂದೆ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಇಂದು ಮಾ. 16ರಂದು ಜಿಲ್ಲಾ ಕಾರಾಗೃಹದಲ್ಲೇ ಶಾಸ್ತ್ರೋಕ್ತವಾಗಿ, ಪೂಜಾ ವಿಧಿ- ವಿಧಾನ, ಮಂತ್ರ ಘೋಷಗಳೊಂದಿಗೆ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಲಾಗಿದೆ.
ಜ್ಯೋತಿಯವರಿಗೆ ತನ್ನ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡುವ ಆಸೆಯಿತ್ತು. ಹೀಗಾಗಿ ತಾಯಿಯ ಇಚ್ಛೆಯಂತೆ ಮಗುವಿಗೆ 'ಅಭಿನಂದನ್' ಎಂದು ಹೆಸರಿಡಲಾಗಿದೆ. ಜಿಲ್ಲಾ ನ್ಯಾಯಾಧೀಶ ಸಂಜೀವ ಕುಲಕರ್ಣಿ ನೇತೃತ್ವದಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಹಿಳಾ ಬಂಧಿಗಳು ಗ್ರಾಮೀಣ ಸೊಗಡಿನ ಜೋಗುಳ ಹಾಡಿದ್ದಾರೆ.