
ಬೆಂಗಳೂರು (ಜ. 30): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪುಟ್ಟಬಾಲಕನೊಬ್ಬ ಅಣಕಿಸಿದ್ದಾನೆ ಎಂಬರ್ಥದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ರಾಹುಲ್ ಗಾಂಧಿ ಪುಟ್ಟಮಗುವೊಂದರ ಬಳಿ ಹೂವು ನೀಡಿ ಮಾತನಾಡಲು ಪ್ರಯತ್ನಿಸುತ್ತಾರೆ.
ಆಗ ಆ ಮಗು ‘ಮೋದಿ, ಮೋದಿ’ ಎನ್ನುವ ಮೂಲಕ ತಂದೆಯೆಡೆಗೆ ಮುಖ ಮಾಡುವ ದೃಶ್ಯವಿದೆ. ಆಮ್ ಪ್ರೆಸ್ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಈ ವಿಡಿಯೋವನ್ನು ಜನವರಿ 25ರಂದು ಪೋಸ್ಟ್ ಮಾಡಿ, ‘ಇಂತಹ ಘಟನೆಗೆ ಸಾಕ್ಷಿಯಾಗುವುದಕ್ಕೂ ಮೊದಲು ನಾನೇಕೆ ಸಾಯಬಾರದು. ಬಿಜೆಪಿಯನ್ನು ಬೆಂಬಲಿಸುವ ಪುಟ್ಟಬಾಲಕ ಕೂಡ ರಾಹುಲ್ ಅನ್ನು ಅಣಕಿಸುತ್ತಾನೆ’ ಎಂದು ಹಿಂದಿಯಲ್ಲಿ ಒಕ್ಕಣೆ ಬರೆದಿದೆ. ಸದ್ಯ ಈ ಪೋಸ್ಟ್ 70,000 ವೀಕ್ಷಣೆ ಪಡೆದಿದ್ದು, 600 ಬಾರಿ ಶೇರ್ ಆಗಿದೆ. ಇದೇ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಪುಟ್ಟಬಾಲಕ ರಾಹುಲ್ ಗಾಂಧಿಯನ್ನು ಹೀಗೆ ಅಣಕಿಸಿದ್ದು ನಿಜವೇ ಎಂದು ಬೂಮ್‌ಲೈವ್ ಸುದ್ದಿ ಸಂಸ್ಥೆ ಪರಿಶೀಲಿಸಿದಾಗ ವಿಡಿಯೋವನ್ನು ಎಡಿಟ್ ಮಾಡಿ ಈ ರೀತಿ ಸುಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮೂಲ ವಿಡಿಯೋವನ್ನು ರಾಹುಲ್ ಗಾಂಧಿ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜನವರಿ 23ರಂದು ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಪುಟ್ಟಬಾಲ ರಾಹುಲ್ ಗಾಂಧಿಯೊಂದಿಗೆ ಏನೂ ಮಾತನಾಡಿಲ್ಲ.
ವಿಡಿಯೋದಲ್ಲಿ ಇರುವುದು ಇಷ್ಟೆ; ರಾಹುಲ್ ಗಾಂಧಿ ಪುಟ್ಟಬಾಲಕನ ಬಳಿ ‘ಏನು ಹೇಳಲು ಇಷ್ಟಪಡುತ್ತೀಯ’ ಎಂದು ಕೇಳುತ್ತಾರೆ. ಆಗ ಬಾಲಕ ನಾಚಿಕೆಯಿಂದ ಏನನ್ನೂ ಹೇಳದೆ ತಂದೆಯೆಡೆಗೆ ಮುಖ ತಿರುಗಿಸಿಕೊಳ್ಳುತ್ತಾನೆ. ಕಂಕುಳಲ್ಲಿ ಮಗುವನ್ನು ಎತ್ತಕೊಂಡಿದ್ದ ಬಾಲಕನ ತಂದೆ ‘ಏನಾದರೂ ಹೇಳು’ ಎಂದು ಒತ್ತಾಯಿಸುತ್ತಾರೆ. ಆದರೂ ಬಾಲಕ ಏನನ್ನೂ ಹೇಳುವುದಿಲ್ಲ. ಈ ಮೂಲ ವಿಡಿಯೋವನ್ನು ತಿರುಚಿ ಮೋದಿ, ಮೋದಿ ಎಂಬ ಪದವನ್ನು ಸೇರಿಸಿ ಹೀಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತದೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.