ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಲಿರುವ ಬಾಗಲಕೋಟೆ | ಬಾದಾಮಿ ಶಾಸಕರಾದ ಕಾರಣ ಸಿದ್ದುಗೆ ಈ ಕ್ಷೇತ್ರ ಸವಾಲು | ಬಿಜೆಪಿಯಿಂದ ಗದ್ದೀಗೌಡರ ಸ್ಪರ್ಧಿಸ್ತಾರಾ ಇಲ್ಲವಾ ಎಂಬ ಸ್ಪಷ್ಟತೆ ಇಲ್ಲ | ಗದ್ದೀಗೌಡರ ಸ್ಪರ್ಧಿಸದಿದ್ದರೆ ಶೀಲವಂತರ ಅಥವಾ ಪೂಜಾರಗೆ ಚಾನ್ಸ್? ಕಾಂಗ್ರೆಸ್ಸಲ್ಲಿ ಸರನಾಯಕ, ವೀಣಾ, ಮಠ, ಉದಪುಡಿ, ಅಪ್ಪಾಜಿ, ಮೇಟಿ ಪೈಪೋಟಿ | ಜೆಡಿಎಸ್‌ಗೆ ಇಲ್ಲಿ ನೆಲೆ ಇಲ್ಲ
ಬಾಗಲಕೋಟೆ (ಜ. 30): ಶಿಲ್ಪಕಲೆಯ ಬೀಡಾಗಿರುವ ಹಾಗೂ ಆಲಮಟ್ಟಿಹಿನ್ನೀರಿನ ಅಂಗಳದಲ್ಲಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರ ಈ ಬಾರಿ ರಾಜ್ಯ ರಾಜಕಾರಣದ ಗಮನ ಸೆಳೆಯುವ ಅಖಾಡವಾಗಿ ರೂಪುಗೊಳ್ಳುವುದು ಖಚಿತ. ಇದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ.
ತಮ್ಮ ಮೂಲ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಸೋಲುಂಡರೂ ರಾಜ್ಯ ರಾಜಕಾರಣದ ಶಕ್ತಿಯಾಗಿ ಸಿದ್ದರಾಮಯ್ಯ ಅವರು ಉಳಿಯುವಂತೆ ಮಾಡಿದ ಬಾದಾಮಿ ವಿದಾನಸಭಾ ಕ್ಷೇತ್ರ ಇದೇ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬರುತ್ತದೆ.
ಈ ಕ್ಷೇತ್ರವನ್ನು ಪ್ರತಿನಿಧಿಸಲು ಆರಂಭಿಸಿದ ಕ್ಷಣದಿಂದಲೂ ಸಿದ್ದರಾಮಯ್ಯ ಅವರು ಕ್ಷೇತ್ರದ ಹಾಗೂ ಇಡೀ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಕೊಂಡಿರುವುದರಿಂದ ಬಾಗಲಕೋಟೆ ಸದ್ಯಕ್ಕೆ ಸಿದ್ದರಾಮಯ್ಯ ಅವರ ಕಾರ್ಯ ಕ್ಷೇತ್ರವಾಗಿ ಬದಲಾಗಿದೆ.
ಹೀಗಾಗಿ ಸಹಜವಾಗಿ ಈ ಲೋಕಸಭಾ ಕ್ಷೇತ್ರವನ್ನು ಸಿದ್ದರಾಮಯ್ಯ ಅವರು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸದೇ ಇರಲಾರರು. ಕ್ಷೇತ್ರ ಗೆದ್ದರೆ, ಅವರ ಬಲಾಢ್ಯತೆ ಮತ್ತಷ್ಟುಹೆಚ್ಚುತ್ತದೆ. ಒಂದು ವೇಳೆ ಸೋತಲ್ಲಿ ಎದುರಾಳಿಗಳ ಕೈಯಲ್ಲಿ ಅಸ್ತ್ರವನ್ನು ಕೊಟ್ಟಂತೆಯೇ ಸರಿ ಎಂಬುವುದರಲ್ಲಿ ಎರಡು ಮಾತಿಲ್ಲ.
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಈಗಿನಿಂದಲೇ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಪಡೆಯುವ ಪ್ರಯತ್ನಗಳು ತೆರೆಮರೆಯಲ್ಲಿ ಆರಂಭಗೊಂಡಿವೆ. ಪ್ರಮುಖ ಸಮುದಾಯಗಳ ನಾಯಕರು ಈ ಬಾರಿ ಲೋಕಸಭಾ ಕಣದಲ್ಲಿ ಪ್ರಮುಖ ಪಾತ್ರ ವಹಿಸುವ ಮುನ್ಸೂಚನೆ ದೊರೆತಿದೆ.
ಬಾಗಲಕೋಟೆ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರವೂ ಸೇರುತ್ತಿರುವುದರಿಂದ ಲೋಕಸಭಾ ಚುನಾವಣಾ ಕ್ಷೇತ್ರ ಸಹಜವಾಗಿ ಎರಡು ಜಿಲ್ಲೆಗಳಲ್ಲಿನ ಮುಂಚೂಣಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವ ಅನಿವಾರ್ಯತೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಇದೆ.
ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಬಾದಾಮಿ ಮತ್ತು ಜಮಖಂಡಿ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದರೆ, ಇನ್ನುಳಿದಂತೆ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ಹಾದಿ ಅಷ್ಟೊಂದು ಸುಗಮವಾಗಿಲ್ಲ.
ಕಾಂಗ್ರೆಸ್‌ನಲ್ಲಿ ಪೈಪೋಟಿ:
ಬಾಗಲಕೋಟೆ ಲೋಕಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಇನ್ನಿಲ್ಲದ ಪೈಪೋಟಿ ಕಾಣುತ್ತಿದೆ. ವಿಶೇಷವಾಗಿ ಲೋಕಸಭಾ ಮಾಜಿ ಸದಸ್ಯ ಅಜಯಕುಮಾರ ಸರನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಮಾಜಿ ಶಾಸಕ ಅಪ್ಪಾಜಿ ನಾಡಗೌಡ, ಮಾಜಿ ಸಚಿವ ಎಚ್.ವೈ.ಮೇಟಿ ಸೇರಿದಂತೆ ಹಲವು ನಾಯಕರ ದಂಡೇ ಇದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬಾದಾಮಿ ಕ್ಷೇತ್ರದ ಶಾಸಕರು ಸಿದ್ದರಾಮಯ್ಯ ಅವರೇ ಆಗಿರುವುದರಿಂದ ಅವರು ಯಾರಿಗೆ ಅವಕಾಶ ನೀಡುತ್ತಾರೆ ಎಂಬುವುದು ಕೂಡ ಈಗ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿಯಾಗಿರುವ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರಿಗೆ ಹೆಚ್ಚಿನ ಅವಕಾಶವಿದೆ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲೂ ಇದೆಯಾ ಸ್ಪರ್ಧೆ?:
ಬಿಜೆಪಿಯಲ್ಲಿ ಸದ್ಯ ಲೋಕಸಭಾ ಸದಸ್ಯರಾಗಿರುವ ಪಿ.ಸಿ.ಗದ್ದಿಗೌಡರ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೂ ಖಾಸಗಿಯಾಗಿ ಒಮ್ಮೊಮ್ಮೆ ‘ನಾನು ಸ್ಪರ್ಧಿಸುವುದಿಲ್ಲ’ ಎಂಬ ಗದ್ದಿಗೌಡರ ಅವರ ಮಾತುಗಳು ಆ ಪಕ್ಷದಲ್ಲಿ ಆಕಾಂಕ್ಷಿಗಳನ್ನು ಹುಟ್ಟು ಹಾಕುವಂತೆ ಮಾಡಿದೆ. ಗದ್ದಿಗೌಡ ಅವರು ಸ್ಪರ್ಧೆ ನಿರಾಕರಿಸಿದರೆ ಮಾಜಿ ಶಾಸಕರಾದ ಪಿ.ಎಚ್.ಪೂಜಾರ, ರಾಜಶೇಖರ ಶೀಲವಂತರ ಅವರಿಗೆ ಅವಕಾಶ ನೀಡಬಹುದೇ ಎಂಬುವುದನ್ನು ಕಾಯ್ದು ನೋಡಬೇಕು. ಕಳೆದ ಬಾರಿಯ ಪೈಪೋಟಿಯಲ್ಲಿ ಮೋದಿ ಅಲೆ ಕೂಡ ಬಿಜೆಪಿ ಅಭ್ಯರ್ಥಿಗೆ ನೆರವಾಗಿತ್ತು. ಆದರೆ, ಈ ಬಾರಿ ಅಭ್ಯರ್ಥಿ ಅಭಿವೃದ್ಧಿಗಳೇ ಮತದಾರರಿಗೆ ಮಾನದಂಡವಾದರೆ, ಬಿಜೆಪಿ ಗೆಲುವಿನ ಹಾದಿ ಕಠಿಣವಾಗುವುದರಲ್ಲಿ ಅನುಮಾನ ಇಲ್ಲ.
ಜೆಡಿಎಸ್‌ನಲ್ಲಿಲ್ಲ ಸ್ಪಷ್ಟತೆ:
ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸ್ಪಷ್ಟತೆ ಇನ್ನೂ ಕಾಣುತ್ತಿಲ್ಲ. ಬದಲಾದ ರಾಜಕಾರಣದಲ್ಲಿ ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಂಡಿರುವ ಆ ಪಕ್ಷಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿ ಭದ್ರವಾದ ನೆಲೆ ಇಲ್ಲ. ಜೊತೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲವಾಗಿರುವುದರಿಂದ ಸೀಟು ಹೊಂದಾಣಿಕೆಯಲ್ಲೂ ಆ ಪಕ್ಷಕ್ಕೆ ಬಾಗಲಕೋಟೆ ಲೋಕಸಭಾ ಕ್ಷೇತ್ರ ಸಿಗುವುದು ಕಷ್ಟಎಂಬುದು ಸ್ಥಳೀಯ ನಾಯಕರ ಮಾತಾಗಿದೆ.
ಸಿದ್ದರಾಮಯ್ಯ ನಿರ್ಣಾಯಕ:
ಬಾಗಲಕೋಟೆ ಜಿಲ್ಲೆಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಣಯಗಳು ಬಹುಮುಖ್ಯವಾಗಲಿವೆ. ಕಾಂಗ್ರೆಸ್ ಪಕ್ಷದಿಂದ ಬಾದಾಮಿ ವಿಧಾನ ಸಭೆಯನ್ನು ಪ್ರತಿನಿಧಿಸುವ ಅವರ ಮಾತುಗಳೇ ಲೋಕಸಭಾ ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಖ್ಯವಾಗಲಿದೆ. ಲೋಕಸಭೆ ಗೆಲ್ಲಬೇಕೆಂಬ ಅವರ ಹಠ ಹಾಗೂ ಬಿಜೆಪಿಯ ವಿರುದ್ಧದ ರಾಜಕೀಯ ನೆಲೆಗೆ ಅದು ಸಿದ್ದರಾಮಯ್ಯನವರಿಗೆ ಅನಿವಾರ್ಯವೂ ಹೌದು. ಹೀಗಾಗಿ ಅವರು ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದೆ ಆದರೆ ಸಹಜವಾಗಿ ಅವರ ಮಾತೇ ಅಂತಿಮವಾಗಬಹುದು.
ಜಾತಿ ಸಮೀಕರಣ:
ಸ್ವಾತಂತ್ರ್ಯಾ ನಂತರ ಬಾಗಲಕೋಟೆ ಲೋಕಸಭೆಗೆ ಆಯ್ಕೆಯಾದವರು ಬಹುತೇಕ ಪ್ರಬಲ ಲಿಂಗಾಯತ ಮತ್ತು ರಡ್ಡಿ ಸಮುದಾಯದ ನಾಯಕರುಗಳೆ ಹೆಚ್ಚು ನಿರ್ಣಾಯಕರಾಗಲಿದ್ದಾರೆ. ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತ ಸಮುದಾಯದ ಪಾತ್ರವೇ ಬಹುಮುಖ್ಯವಾಗಿದ್ದು, ನಂತರದಲ್ಲಿ ಕುರುಬ, ಮುಸ್ಲಿಮ್, ದಲಿತ, ನೇಕಾರ ಸಮುದಾಯ ಕಾಣುತ್ತಿದೆ. ಪ್ರಬಲ ಸಮುದಾಯದ ರಾಜಕೀಯ ಆಟದ ಮುಂದೆ ಇನ್ನುಳಿದ ಸಮುದಾಯಗಳ ಪ್ರಯತ್ನ ಇಲ್ಲಿ ಫಲ ಕೊಡುವುದು ಕಡಿಮೆ. ಹೀಗಾಗಿ ಲೋಕಸಭಾ ಚುನಾವಣೆ ಈ ಬಾರಿಯೂ ಇಂತಹ ಪ್ರಯತ್ನದಿಂದಲೇ ನಡೆದರು ಅಚ್ಚರಿ ಪಡಬೇಕಿಲ್ಲ.
- ಈಶ್ವರ ಶೆಟ್ಟರ