9 ತಿಂಗಳು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದವನ ಸಾಹಸಗಾಥೆಯಿದು

By Suvarna Web DeskFirst Published Jan 23, 2018, 4:04 PM IST
Highlights

‘ಸುಮಾರು 9 ತಿಂಗಳು ಕ್ಯಾನ್ಸರ್ ತೊಂದರೆಯಿಂದ ತೀವ್ರವಾಗಿ ಬಳಲಿದೆ. ಅಸಾಧ್ಯ ನೋವಿನಿಂದ ತುಂಬಾ ಕಷ್ಟವಾಗುತ್ತಿತ್ತು. ಆದರೆ ನನ್ನ ಆಸೆ ತುಂಬಾ ದೊಡ್ಡದಾಗಿತ್ತು. ಅದರ ಮುಂದೆ ಕ್ಯಾನ್ಸರ್ ನೋವು ನನ್ನನ್ನು ಏನೂ ಮಾಡಲಾಗಲಿಲ್ಲ. ಅದಕ್ಕೆ ಇಂದು ನನ್ನ ಕನಸನ್ನು ಸಾಕಾರ ಮಾಡಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದೇನೆ’ ಎಂದು ಸ್ಫೂರ್ತಿಯ ಚಿಲುಮೆಯಂತೆ ನುಡಿದರು ಕಿಕ್ ಬಾಕ್ಸರ್ ಗಿರೀಶ್ ಗೌಡ.

ಬೆಂಗಳೂರು (ಜ.23): ‘ಸುಮಾರು 9 ತಿಂಗಳು ಕ್ಯಾನ್ಸರ್ ತೊಂದರೆಯಿಂದ ತೀವ್ರವಾಗಿ ಬಳಲಿದೆ. ಅಸಾಧ್ಯ ನೋವಿನಿಂದ ತುಂಬಾ ಕಷ್ಟವಾಗುತ್ತಿತ್ತು. ಆದರೆ ನನ್ನ ಆಸೆ ತುಂಬಾ ದೊಡ್ಡದಾಗಿತ್ತು. ಅದರ ಮುಂದೆ ಕ್ಯಾನ್ಸರ್ ನೋವು ನನ್ನನ್ನು ಏನೂ ಮಾಡಲಾಗಲಿಲ್ಲ. ಅದಕ್ಕೆ ಇಂದು ನನ್ನ ಕನಸನ್ನು ಸಾಕಾರ ಮಾಡಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದೇನೆ’ ಎಂದು ಸ್ಫೂರ್ತಿಯ ಚಿಲುಮೆಯಂತೆ ನುಡಿದರು ಕಿಕ್ ಬಾಕ್ಸರ್ ಗಿರೀಶ್ ಗೌಡ.

ಕಿಕ್ ಬಾಕ್ಸರ್ ಗಿರೀಶ್ ಗೌಡ ಅವರು ರಾಜ್ಯ, ರಾಷ್ಟೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ 9 ಬಾರಿ ಚಿನ್ನದ ಪದಕವನ್ನು ಗೆದ್ದು ಸಾಧನೆ ಮಾಡಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿಯೂ ದೇಶವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕ ಗೆದ್ದಿದ್ದಾರೆ. ಗಿರೀಶ್ ಗೌಡ ಅವರು ಇಷ್ಟೆಲ್ಲಾ ಸಾಧನೆ ಮಾಡಿರುವುದು ಯಾವುದೇ ವ್ಯಕ್ತಿಗೂ ಖಂಡಿತವಾಗಿಯೂ ಸ್ಫೂರ್ತಿ ನೀಡುತ್ತದೆ. ಆದರೆ ಇದೆಲ್ಲದರ ಹಿಂದೆ ಇರುವ ರೋಚಕ ಕತೆಯನ್ನು ಕೇಳಿದರೆ ಆ ಸ್ಫೂರ್ತಿ ಇಮ್ಮಡಿಕೊಳ್ಳುತ್ತದೆ. ಸಾಯುವ ಹಂತಕ್ಕೆ ತಲುಪಿದ ಗಿರೀಶ್ ಸಾವಿನ ಮನೆಯಲ್ಲಿ ಸೆಣೆಸಾಟ ನಡೆಸಿ ತನ್ನ ಕನಸನ್ನು ನನಸು ಮಾಡಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ.

ಬಾಕ್ಸಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ಆಕಸ್ಮಿಕ: ಗಿರೀಶ್ ಮಧ್ಯಮ ವರ್ಗದ ಕುಟುಂಬದಿಂದ ಬಂದ ಸಾಮಾನ್ಯ ವ್ಯಕ್ತಿ. 12  ವರ್ಷಗಳ ಹಿಂದೆ ನಡೆದ ಒಂದು ಸಾಮಾನ್ಯ ಘಟನೆ ಇಂದು ಅವರನ್ನು ಅಸಾಮಾನ್ಯ ವ್ಯಕ್ತಿಯಾಗಿಸಿದೆ. ಆ ಘಟನೆ ಏನಪ್ಪಾ ಅಂದರೆ, ಗಿರೀಶ್  ಸ್ನೇಹಿತನೊಂದಿಗೆ ಇದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಯಾವುದೋ ಸಣ್ಣ ವಿಚಾರಕ್ಕೆ ಹೊಡೆಯುತ್ತಾನೆ. ಇದರಿಂದ ಕೋಪ ಬಂದು ಮತ್ತೆ ಹಿಂದಿರುಗಿಸಿ ಹೊಡೆಯಬೇಕು.  ಎನ್ನಿಸಿದರೂ ಹೊಡೆಯುವ ಶಕ್ತಿ ಇರಲಿಲ್ಲ. ಇದರಿಂದ ಬೇಸರಪಟ್ಟುಕೊಂಡು ಆತ್ಮರಕ್ಷಣೆಗಾದರೂ ಯಾವುದಾದರೂ ಕಲೆ ಸಿದ್ಧಿಸಿಕೊಳ್ಳಬೇಕು ಎಂದು ತೀರ್ಮಾನ  ಮಾಡಿ ಕರಾಟೆ, ಬಾಕ್ಸಿಂಗ್‌ಗಳನ್ನು ಕಲಿಯುಲು ಮುಂದಾಗುತ್ತಾರೆ ಗಿರೀಶ್.

ಅಂದುಕೊಂಡಂತೆ ಎರಡು ವರ್ಷದ ನಂತರ ಬಾಕ್ಸಿಂಗ್ ಕಲಿತು ಮೊದಲು ಒಡೆದಿದ್ದ ವ್ಯಕ್ತಿಗೆ ಈಗ ಹೊಡೆಯಬೇಕು ಎಂದು ಸ್ನೇಹಿತರು ಹೇಳಿದರೂ ಕೂಡ ಗಿರೀಶ್‌ಗೆ ಹೊಡೆಯಲು ಮನಸ್ಸು ಬರುವುದಿಲ್ಲ. ಅಷ್ಟರಲ್ಲಾಗಲೇ ಕೋಪವೆಲ್ಲಾ ಶಮನವಾಗಿ ಕಲಿತ ಕಿಕ್ ಬಾಕ್ಸಿಂಗ್‌'ನಿಂದ ಸಹನೆ, ಏನಾದರೂ ಸಾಧನೆ ಮಾಡಬೇಕು ಎನ್ನುವ ಬಯಕೆ ಚಿಗುರೊಡೆದಿರುತ್ತದೆ. ಇದೇ ಚಿಗುರು ಬೆಳೆದು ಇಂದು ದೊಡ್ಡ ಮರವಾಗಿದೆ.

ಬೆಳೆಯುವ ಸಿರಿಗೆ ಮಧ್ಯದಲ್ಲಿ ಗರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಗೆದ್ದು ದೇಶಕ್ಕೆ ಕೀರ್ತಿ ತರಬೇಕು ಎಂದು ಹಪಹಪಿಸುತ್ತಿದ್ದ ಗಿರೀಶ್‌ಗೆ ಕಳೆದ ಮಾರ್ಚ್ 2017 ರಲ್ಲಿ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ಜ್ವರ ಎಂದುಕೊಂಡು ಆಸ್ಪತ್ರೆಗೆ ತೋರಿಸಿದಾಗ ಬ್ಲಡ್ ಕ್ಯಾನ್ಸರ್ ಇದೆ ಎನ್ನುವ ವಿಚಾರ ಗೊತ್ತಾಗುತ್ತದೆ. ಕಿಕ್ ಬಾಕ್ಸಿಂಗ್‌'ನಂತಹ ಸವಾಲಿನ ಕ್ರೀಡೆಯಲ್ಲಿ ಮೈಲಿಗಲ್ಲು ಸ್ಥಾಪಿಸಬೇಕು ಎಂದು ಹೊರಟ ಗಿರೀಶ್‌'ಗೆ ಈ ತೊಂದರೆ ಇರುವುದು ಗೊತ್ತಾಗಿ ಆಘಾತವಾಗುತ್ತದೆ. ಆದರೂ ಬರುವುದು ಬಂದಾಗಿದೆ. ಇನ್ನೇನಿದ್ದರೂ ಅದರ ವಿರುದ್ಧ ಹೋರಾಡುವುದೊಂದೇ ಬಾಕಿ ಎಂದು ಕ್ಯಾನ್ಸರ್ ವಿರುದ್ಧ ಸುಮಾರು 9 ತಿಂಗಳು ಹೋರಾಟ ಮಾಡಿ ಗೆದ್ದಿದ್ದಾರೆ. ಈ ವೇಳೆಯಲ್ಲಿ ಸ್ನೇಹಿತರು, ಮನೆಯವರೆಲ್ಲರೂ ಮತ್ತೆ ಕಿಕ್ ಬಾಕ್ಸಿಂಗ್‌'ಗೆ ಮರಳಲು ವಿರೋಧ ವ್ಯಕ್ತಪಡಿಸುತ್ತಾರೆ. ಮೊದಲು ಆರೋಗ್ಯ ನಂತರ ಸಾಧನೆ ಎಂದು ಹೇಳಿದರೂ ಕೇಳದೇ, ಆರೋಗ್ಯ, ಸಾಧನೆ ಎರಡನ್ನೂ ಒಟ್ಟಿಗೆ ತೂಗಿಸಿಕೊಂಡು ಮುಂದೆ ಸಾಗುತ್ತೇನೆ ಎಂದು ಕಿಕ್ ಬಾಕ್ಸಿಂಗ್ ಅಭ್ಯಾಸಕ್ಕೆ ಹಿಂದಿರುಗುತ್ತಾರೆ ಗಿರೀಶ್.

ನಮ್ಮ ರಾಷ್ಟ್ರಗೀತೆ ಕೇಳುವಾಸೆ: ‘2015  ರಲ್ಲಿ ಪೂನಾದಲ್ಲಿ ಏಷ್ಯಾ ಚಾಂಪಿಯನ್ ಶಿಪ್ ಇತ್ತು. ನಾನು ನಾಕ್ ಔಟ್ ರೂಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದೆ. ಒಳ್ಳೆಯ ಆಟವಾಡಿ ಪ್ರಾರಂಭದಲ್ಲಿ ಗೆಲುವು ದಾಖಲಿಸಿದರೂ ಕೂಡ ಮುಂದೆ ಇರಾನ್ ದೇಶದ ಪ್ರತಿನಿಧಿಯೊಂದಿಗೆ ಗೆಲ್ಲಲು ಆಗಲಿಲ್ಲ. ಒಂದು ಲೆಕ್ಕಕ್ಕೆ ಅದೇ ನನ್ನ ಬದುಕಿನ ದೊಡ್ಡ  ತಿರುವು. ನಾನು ಸೋತಿದ್ದೆ. ಅವನು ಗೆದ್ದಿದ್ದ ಕಾರಣ ಅವರ ನ್ಯಾಷನಲ್ ಆಂಥಮ್ ಅನ್ನು ಪ್ಲೇ ಮಾಡಿದರು. ಆಗ ನನಗೆ ಸಹಿಸಲು ಆಗಲಿಲ್ಲ. ಇನ್ನೂ ಆ ನೋವನ್ನು ನನ್ನಿಂದ ಅರಗಿಸಿಕೊಳ್ಳಲು ಆಗಿಲ್ಲ. ಅದೇ ಕಾರಣಕ್ಕೆ ಮುಂದೆ ನಾನು ವಲ್ಡ್ ಚಾಂಪಿಯನ್‌ಶಿಪ್'ನಲ್ಲಿ ಸ್ಪರ್ಧೆ ಮಾಡಿ ಗೆದ್ದು ನನ್ನ ದೇಶದ ರಾಷ್ಟ್ರಗೀತೆಯನ್ನು ಕೇಳಿದಾಗಲೇ ನನಗೆ ಸಮಾಧಾನವಾಗುವುದು, ತೃಪ್ತಿಯಾಗುವುದು. ಅದೇ ನನ್ನ ಜೀವನದ ಕನಸು’ ಎನ್ನುವ ಗಿರೀಶ್ ಅವರು ಸದ್ಯ ಕನ್ನಡ ಚಿತ್ರರಂಗದ ಸೆಲಬ್ರಿಟಿಗಳು, ಆಸಕ್ತ ಯುವಕರಿಗೆ ಬಾಡಿ ಟ್ರೈನಿಂಗ್ ಕೋಚಿಂಗ್ ನೀಡುತ್ತಿದ್ದಾರೆ.

ತಮ್ಮ ಜೀವನದ ತಿರುವುಗಳ ಬಗ್ಗೆ ಪುಸ್ತಕ ಮಾಡುವ ಆಸೆ ಹೊತ್ತಿರುವ ಗಿರೀಶ್ ಇನ್ನೊಂದು ಸ್ಫೂರ್ತಿದಾಯಕ ನಿರ್ಧಾಕ್ಕೆ ಬಂದಿದ್ದಾರೆ. ಅದೇನಪ್ಪಾ ಅಂದರೆ, ಮೊನ್ನೆ ಮೊನ್ನೆ ನ್ಯಾಷನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೆದ್ದ ಚಿನ್ನದ ಪದಕವನ್ನು ಸೈಟ್‌'ಕೇರ್ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡುವುದು. ಯಾಕೆ ಈ ನಿರ್ಧಾರ ಎಂದರೆ ಕ್ಯಾನ್ಸರ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಇದು ಸ್ಫೂರ್ತಿ ನೀಡಬೇಕು. ಕ್ಯಾನ್ಸರ್ ಎಂದಾಕ್ಷಣ ಅದು ಸಾವಲ್ಲ ಬದುಕಿನ ಇನ್ನೊಂದು ಸವಾಲು ಎಂದು ತಿಳಿದುಕೊಳ್ಳಬೇಕು ಅದಕ್ಕಾಗಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳುವ ಗಿರೀಶ್ ಅವರ ಉತ್ಸಾಹಕ್ಕೆ ನಿಮ್ಮದೂ ಒಂದು ಅಭಿನಂದನೆ ಹೇಳಿ. ದೂ:9880806898

 

click me!