
ನವದೆಹಲಿ: ರಫೇಲ್ ಯುದ್ಧ ವಿಮಾನಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ತರುವಾಯವೂ ಆ ಕುರಿತ ವಿವಾದ ಬಗೆಹರಿಯುವಂತೆ ಕಾಣುತ್ತಿಲ್ಲ. ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವ ಒಂದು ಸಾಲನ್ನೇ ಗಟ್ಟಿಯಾಗಿ ಹಿಡಿದುಕೊಂಡಿರುವ ಕಾಂಗ್ರೆಸ್, ಸರ್ಕಾರದ ವಿರುದ್ಧ ದಾಳಿಯನ್ನು ಮತ್ತಷ್ಟುತೀವ್ರಗೊಳಿಸಿದೆ.
‘ರಫೇಲ್ ವಿಮಾನಗಳ ಬೆಲೆಗೆ ಸಂಬಂಧಿಸಿದ ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಸಾರ್ವಜನಿಕ ಲೆಕ್ಕ ಪತ್ರ ಸಮಿತಿ (ಪಿಎಸಿ) ಕೂಡ ಆ ಬಗ್ಗೆ ಚರ್ಚಿಸಿದೆ’ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಆದರೆ ವರದಿಯನ್ನು ಸಿಎಜಿ ಸದನದಲ್ಲಿ ಮಂಡಿಸಿದ್ದು ಯಾವಾಗ ಎಂಬುದರ ಕುರಿತು ವಿವರಣೆ ಪಡೆಯಲು ಅಟಾರ್ನಿ ಜನರಲ್ (ಎಜಿ) ಹಾಗೂ ಮಹಾಲೇಖಪಾಲರಿಗೆ (ಸಿಎಜಿ) ಸಮನ್ಸ್ ನೀಡಬೇಕು ಎಂದು ಎಲ್ಲ ಸದಸ್ಯರಿಗೂ ಕೋರಿಕೆ ಇಡುತ್ತೇನೆ ಎಂದು ಪಿಎಸಿ ಮುಖ್ಯಸ್ಥರೂ ಆಗಿರುವ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸಿಎಜಿ ವರದಿ ಕುರಿತು ಪಿಎಸಿ ಚರ್ಚೆ ಮಾಡಿದ್ದು ಯಾವಾಗ? ಆ ವರದಿಯನ್ನೇ ಮಂಡನೆ ಮಾಡಿಲ್ಲ. ತಪ್ಪು ಮಾಹಿತಿಯನ್ನು ಸರ್ಕಾರ ಸುಪ್ರೀಂಕೋರ್ಟಿಗೆ ನೀಡಿದೆ. ಇದು ನಿಜಕ್ಕೂ ದಿಗ್ಭ್ರಮೆಯ ವಿಷಯ. ಈ ಬಗ್ಗೆ ಸರ್ಕಾರ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಫೇಲ್ ಡೀಲ್ ಕುರಿತಾದ ಸಿಎಜಿ ವರದಿಯೇ ಸಂಸತ್ತಿನಲ್ಲಿ ಮಂಡನೆಯಾಗಿಲ್ಲ. ಅಲ್ಲದೆ ಆ ವರದಿ ತಾವು ಅಧ್ಯಕ್ಷರಾಗಿರುವ ಪಿಎಸಿಗೂ ಬಂದಿಲ್ಲ ಎಂಬುದು ಖರ್ಗೆ ಅವರ ವಾದವಾಗಿದೆ.
ಜೆಪಿಸಿ ತನಿಖೆಯೇ ಪರಿಹಾರ: ಕಾಂಗ್ರೆಸ್
ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಶುಕ್ರವಾರ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಬೆಲೆ ಹಾಗೂ ತಾಂತ್ರಿಕ ಅಂಶಗಳ ಕುರಿತು ಗಮನಹರಿಸಿಲ್ಲ. ಹೀಗಾಗಿ ರಫೇಲ್ ಒಪ್ಪಂದದಲ್ಲಿ ಏನಾದರೂ ಹಗರಣ ನಡೆದಿದೆಯೇ ಎಂಬುದರ ಕುರಿತು ಜಂಟಿ ಸಂಸದೀಯ ಸಮಿತಿಯೊಂದು ಮಾತ್ರ ತನಿಖೆ ಮಾಡಬಲ್ಲದು ಎಂದು ಕಾಂಗ್ರೆಸ್ ಹೇಳಿದೆ.
ರಫೇಲ್ ವಿಮಾನದ ಬೆಲೆಯನ್ನು ಸಂಸತ್ತಿಗೆ ತಿಳಿಸಲಾಗಿಲ್ಲ. ಆದರೆ ಮಹಾಲೇಖಪಾಲರಿಗೆ ಅದರ ಮಾಹಿತಿಯನ್ನು ಕೊಡಲಾಗಿದೆ. ಅದನ್ನು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯೂ ಪರಿಶೀಲಿಸಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಆದರೆ ಪಿಎಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಎಂದಿಗೂ ಅಂತಹ ವರದಿಯನ್ನೇ ಸ್ವೀಕರಿಸಿಲ್ಲ. ಇದಕ್ಕೆಲ್ಲಾ ಯಾರು ಹೊಣೆ? ಯಾರು ಇದನ್ನು ಹೇಳಿದ್ದಾರೆ? ಎಂದು ಹಿರಿಯ ನಾಯಕ ಕಪಿಲ್ ಸಿಬಲ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.