
ಬೆಂಗಳೂರು(ಜ. 08): ಕೆ.ಜಿ.ಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಆಫೀಸಿಗೆ ಹೋಗುವ ವೇಳೆ ಬೆಳಗಿನ ಜಾವ ವ್ಯಕ್ತಿಯೊಬ್ಬ ತನ್ನನ್ನು ಅಡ್ಡಗಟ್ಟಿ, ತುಟಿ ಮತ್ತು ನಾಲಗೆ ಕಚ್ಚಿ ಗಾಯಗೊಳಿಸಿದ ಎಂದು ಯುವತಿ ಮಾಡಿದ್ದ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ. ಯುವತಿ ಹಾಗೂ ಆಕೆಯ ಸಂಬಂಧಿ ಇರ್ಷಾದ್ ಇವರಿಬ್ಬರು ಸೇರಿ ಆಡಿದ ಮಹಾನಾಟಕ ಇದು ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಬೆಂಗಳೂರಿನ ಮಾನ ಹರಾಜು ಹಾಕಿದ ಇವರಿಬ್ಬರ ಆಟಕ್ಕೆ ಪೊಲೀಸರೇ ತಬ್ಬಿಬ್ಬಾಗಿದ್ದಾರೆ.
ಅನುಮಾನಗೊಂಡ ಪೊಲೀಸರು..!
ಸಿಸಿಟಿವಿ ಪರಿಶೀಲನೆ ಬಳಿಕ ಯುವತಿಗೆ ಕಾಟ ಕೊಡುತ್ತಿದ್ದ ವ್ಯಕ್ತಿ ಇರ್ಷಾದ್ ಎಂಬುದು ತಿಳಿದುಬಂದಿರುತ್ತದೆ. ತನ್ನ ಮೇಲೆ ದೌರ್ಜನ್ಯ ಎಸಗಿದ್ದು ಸಂಬಂಧಿಯೇ ಆಗಿದ್ದರೂ ಯಾರೋ ಅಪರಿಚಿತನ ಮೇಲೆ ಯುವತಿ ದೂರು ನೀಡಿದ್ದು ಯಾಕೆ ಎಂಬ ಪ್ರಶ್ನೆ ಪೊಲೀಸರಿಗೆ ಕಾಡುತ್ತದೆ. ಆಗ ಯುವತಿ ಹಾಗೂ ಇರ್ಷಾದ್ ಅವರ ಹೇಳಿಕೆ ದಾಖಲಿಸಿಕೊಳ್ಳಲು ಅವರಿಬ್ಬರನ್ನು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಾಗುತ್ತದೆ. ನನ್ನ ಮಾನ ಮರ್ಯಾದೆ ತೆಗೆದುಬಿಟ್ಟೆ ಎಂದು ಠಾಣೆಯಲ್ಲೇ ಯುವತಿ ಮೇಲೆ ಇರ್ಷಾದ್ ಹರಿಹಾಯಲು ಪ್ರಯತ್ನಿಸುತ್ತಾನೆ. ಆ ಸಂದರ್ಭದಲ್ಲಿ ಇರ್ಷಾದ್'ನ ಈ ವಿಚಿತ್ರ ವರ್ತನೆಗಳು ಪೊಲೀಸರಿಗೆ ಅನುಮಾನ ಮೂಡಿಸುತ್ತವೆ. ಆಗ ಇರ್ಷಾದ್ ಮತ್ತು ಯುವತಿಯ ಫೋನ್ ನಂಬರನ್ನು ಟ್ರ್ಯಾಪ್ ಮಾಡಲು ಪೊಲೀಸರು ನಿರ್ಧರಿಸುತ್ತಾರೆ.
ಠಾಣೆಯಿಂದ ಹೊರಹೋದ ಬಳಿಕ ಇರ್ಷಾದ್'ಗೆ ಯುವತಿ ಫೋನ್ ಕರೆ ಮಾಡುತ್ತಾಳೆ. "ನೀನು ಹೇಳಿದಂತೆ ತಾನೆ ನಾನು ಇದೆಲ್ಲಾ ಮಾಡಿದ್ದು. ಈಗ ನನ್ನ ಮೇಲೆ ಯಾಕೆ ಸಿಟ್ಟು ಮಾಡುತ್ತೀಯಾ?" ಎಂದು ಯುವತಿ ಕೇಳುತ್ತಾಳೆ. ಇವರಿಬ್ಬರ ಈ ಫೋನ್ ಸಂಭಾಷಣೆಯನ್ನು ಪೊಲೀಸರು ರೆಕಾರ್ಡ್ ಮಾಡಿಕೊಳ್ಳುತ್ತಾರೆ.
ಯುವತಿಯನ್ನು ವಿವಾಹವಾಗುವುದು ಇರ್ಷಾದ್'ನ ಪ್ಲಾನ್ ಆಗಿರುತ್ತದೆ. ಆಕೆಗೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾದರೆ ಬೇರೆ ಯಾರೂ ಮದುವೆಯಾಗಲು ಬರುವುದಿಲ್ಲ. ತಾನು ಸುಲಭವಾಗಿ ವಿವಾಹವಾಗಬಹುದು ಎಂಬುದು ಇರ್ಷಾದ್'ನ ಎಣಿಕೆಯಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.