ಶಬರಿಮಲೆಯಲ್ಲಿ ಕೊತಕೊತ! ದೇಗುಲಕ್ಕೆ ಮುಖ್ಯ ಅರ್ಚಕರು ಗೈರು?

By Web DeskFirst Published Oct 17, 2018, 7:25 AM IST
Highlights

ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಯಾವುದೇ ವಯಸ್ಸಿನ ಮಹಿಳೆಯರು ದರ್ಶನಕ್ಕೆ ತೆರಳಬಹುದು ಎಂದು ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ ಬಳಿಕ ಮೊದಲ ಬಾರಿಗೆ ದೇವಸ್ಥಾನದ ಬಾಗಿಲು ಬುಧವಾರ ಸಂಜೆ ತೆರೆಯುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.

ತಿರುವನಂತಪುರ: ಕೇರಳದ ಅತ್ಯಂತ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಯಾವುದೇ ವಯಸ್ಸಿನ ಮಹಿಳೆಯರು ದರ್ಶನಕ್ಕೆ ತೆರಳಬಹುದು ಎಂದು ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ ಬಳಿಕ ಮೊದಲ ಬಾರಿಗೆ ದೇವಸ್ಥಾನದ ಬಾಗಿಲು ಬುಧವಾರ ಸಂಜೆ ತೆರೆಯುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 10 ವರ್ಷ ಮೇಲ್ಪಟ್ಟಹಾಗೂ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಮಂಗಳವಾರದಿಂದಲೇ ಭಕ್ತಾದಿಗಳು ತಡೆಯೊಡ್ಡಲು ಆರಂಭಿಸಿದ್ದಾರೆ. ಈಗಿನ ಪರಿಸ್ಥಿತಿ ನೋಡಿದರೆ, ಮಹಿಳೆಯರು ಬುಧವಾರದಿಂದ ಅಯ್ಯಪ್ಪ ದರ್ಶನ ಪಡೆಯುವುದು ಅಷ್ಟುಸುಲಭವಿದ್ದಂತೆ ಕಾಣುತ್ತಿಲ್ಲ.

ಈ ನಡುವೆ, ಮಹಿಳೆಯರಿಗೆ ತಡೆಯೊಡ್ಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್‌ ತೀರ್ಪನ್ನು ಸರ್ಕಾರ ಜಾರಿಗೊಳಿಸಲಿದ್ದು, ಇದನ್ನು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಶಬರಿಮಲೆ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಬಿಗಿ ಬಂದೋಬಸ್‌್ತ ಮಾಡಲಾಗಿದೆ.

ತಪಾಸಣೆ: ಬುಧವಾರದಿಂದ ಐದು ದಿನಗಳ ಕಾಲ ಮಾಸಿಕ ಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಮಹಿಳಾ ಭಕ್ತಾದಿಗಳು ಪ್ರವೇಶಿಸಬಹುದು ಎಂಬ ಕಾರಣಕ್ಕೆ ಭಕ್ತರು ದೇಗುಲದಿಂದ 20 ಕಿ.ಮೀ. ದೂರದಲ್ಲಿರುವ ನೀಲಕ್ಕಲ್‌ನಲ್ಲಿ ಪ್ರತಿ ವಾಹನವನ್ನೂ ತಪಾಸಣೆ ಮಾಡುತ್ತಿದ್ದಾರೆ. ಮಂಗಳವಾರ ಬಸ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವತಿಯನ್ನು ಕೆಳಗಿಳಿಸಿದ್ದಾರೆ. ಟೀವಿ ವಾಹಿನಿಗಳ ಮಹಿಳಾ ವರದಿಗಾರರಿಗೂ ಅವಕಾಶ ಮಾಡಿಕೊಟ್ಟಿಲ್ಲ. ಕಪ್ಪು ಬಟ್ಟೆಧರಿಸಿದ್ದ ಯುವತಿಯರು ಅಯ್ಯಪ್ಪ ದೇವಸ್ಥಾನಕ್ಕೆ ತೆರಳುತ್ತಿದ್ದ ಕಾರಣಕ್ಕೆ ಅವರನ್ನು ಕೆಳಗಿಳಿಸಿರುವುದಾಗಿ ಭಕ್ತರು ತಿಳಿಸಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿಯರು ಇದ್ದ ವಾಹನವನ್ನೂ ಅಯ್ಯಪ್ಪ ಭಕ್ತಾದಿಗಳು ತಡೆದು ಹಿಂದಕ್ಕೆ ಕಳುಹಿಸಿದ್ದಾರೆ.

ಮತ್ತೊಂದೆಡೆ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡಿದ್ದನ್ನು ವಿರೋಧಿಸಿ ನೀಲಕ್ಕಲ್‌ನಲ್ಲಿ ಮಹಿಳೆಯೊಬ್ಬರು ನೇಣುಹಾಕಿಕೊಂಡು ಅತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು. ಆದರೆ ಸ್ಥಳದಲ್ಲಿದ್ದ ಉಳಿದ ಅಯ್ಯಪ್ಪ ಭಕ್ತರು ಮಹಿಳೆಯ ಮನವೊಲಿಸಿ ಆಕೆಯನ್ನು ಕಾಪಾಡಿದ್ದಾರೆ.

ಬುಧವಾರ ಸಂಜೆ ದೇವಸ್ಥಾನದಲ್ಲಿ ಮಾಸಿಕ ಪೂಜೆ ಆರಂಭವಾಗಲಿದ್ದು, ಸನ್ನಿಧಾನದಲ್ಲಿ ‘ನಿಷೇಧಿತ’ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ‘ಸ್ವಾಮಿ ಶರಣಂ ಅಯ್ಯಪ್ಪ’ ಎಂದು ಮಂತ್ರ ಹೇಳುತ್ತಾ, ಚಪ್ಪಾಳೆ ಬಾರಿಸುತ್ತಾ ವಾಹನ ತಪಾಸಣೆಯಲ್ಲಿ ನಿರತರಾಗಿರುವ ಮಹಿಳಾ ಹಿರಿಯ ನಾಗರಿಕರೂ ಸೇರಿದಂತೆ ಹಲವಾರು ಭಕ್ತರು ಎಚ್ಚರಿಕೆ ನೀಡಿದ್ದಾರೆ. ಕೆಲವೊಂದು ಮಹಿಳಾ ಸಂಘಟನೆಗಳು ಸುಪ್ರೀಂಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ದೇಗುಲ ಪ್ರವೇಶಿಸಲು ಉದ್ದೇಶಿಸಿದ್ದು, ಅದು ಎಷ್ಟರ ಮಟ್ಟಿಗೆ ಸಾಧ್ಯವಾಗಲಿದೆ ಎಂಬುದು ಗೊತ್ತಾಗಬೇಕಿದೆ.

 ದೇಗುಲಕ್ಕೆ ಮುಖ್ಯ ಅರ್ಚಕರು ಗೈರು?

ತಿರುವನಂತಪುರ: ಈ ನಡುವೆ ಶಬರಿಮಲೆ ದೇಗುಲದ ಮುಖ್ಯ ಅರ್ಚಕ ಕಂದರಾರು ಮಹೇಶ್ವರಾರು ತಂತ್ರಿ (25), ಬುಧವಾರ ದೇಗುಲಕ್ಕೆ ಹಾಜರಾಗದೇ ಇರಬಹುದು ಎಂಬ ಊಹಾಪೋಹಗಳು ಹಬ್ಬಿವೆ. ಎಲ್ಲಾ ವಯೋಮಾನದ ಮಹಿಳೆಯರ ದೇಗುಲ ಪ್ರವೇಶವನ್ನು ಮುಖ್ಯ ಅರ್ಚಕರು ಬಹುವಾಗಿ ವಿರೋಧಿಸಿದ್ದು, ಇದೇ ಕಾರಣಕ್ಕಾಗಿಯೇ ಬುಧವಾರ ಅವರು ದೇಗುಲದಿಂದ ದೂರವೇ ಉಳಿಯಬಹುದು ಎಂಬ ಸುದ್ದಿ ಹಬ್ಬಿದೆ. ಆದರೆ ಈ ಕುರಿತು ದೇಗುಲ ಮಂಡಳಿಯಿಂದಾಗಲೀ ಅಥವಾ ಅರ್ಚಕರ ಕಡೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಟಿಡಿಬಿಯಿಂದ ಮೇಲ್ಮನವಿ ಅರ್ಜಿ?

ತಿರುವನಂತಪುರ: ಸುಪ್ರೀಂಕೋರ್ಟ್‌ ಆದೇಶದಿಂದ ಉದ್ಭವವಾಗಿರುವ ಪರಿಸ್ಥಿತಿ ಪರಾಮರ್ಶೆಗಾಗಿ ತಿರುವಾಂಕೂರು ದೇಗುಲ ಮಂಡಳಿ ಮಂಗಳವಾರ ಇಲ್ಲಿ ಮಹತ್ವದ ಸಭೆ ನಡೆಸಿತು. ಆದರೆ ಸುಪ್ರೀಂ ತೀರ್ಪು ಪ್ರಶ್ನಿಸಿ ಪುನರ್‌ ಪರಿಶೀಲನಾ ಅರ್ಜಿಯನ್ನು ತಕ್ಷಣಕ್ಕೆ ಸಲ್ಲಿಸಲಾಗದು ಎಂಬ ದೇಗುಲ ಮಂಡಳಿಯ ನಿಲುವು ವಿರೋಧಿಸಿ, ಸಭೆಯಲ್ಲಿ ಭಾಗಿಯಾಗಿದ್ದ ಪಾಂಡಲಂ ಅರಮನೆ ನಿರ್ವಹಣಾ ಸಮಿತಿಯ ಪ್ರತಿನಿಧಿಗಳು ಅರ್ಧಕ್ಕೇ ಸಭೆಯಿಂದ ಎದ್ದುಹೋದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಂಡಳಿ ಅಧ್ಯಕ್ಷ ಪದ್ಮಕುಮಾರ್‌ ಅ.22ರವರೆಗೂ ಅರ್ಜಿಯ ತುರ್ತು ವಿಚಾರಣೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ ತಕ್ಷಣಕ್ಕೆ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದಷ್ಟೇ ನಮ್ಮ ನಿರ್ಧಾರವಾಗಿತ್ತು. ಹಾಗೆಂದು ಮೇಲ್ಮನವಿ ಅರ್ಜಿ ಸಲ್ಲಿಸುವುದೇ ಇಲ್ಲ ಎಂದು ನಾವೇನು ಹೇಳಿಲ್ಲ ಎಂದು ಹೇಳುವ ಮೂಲಕ, ಮೇಲ್ಮನವಿ ಸಲ್ಲಿಕೆಯ ಪ್ರಸ್ತಾಪ ಮುಂದಿರುವ ಸುಳಿವು ನೀಡಿದ್ದಾರೆ.

click me!