ವಿದ್ಯಾರ್ಥಿಗಳ ಭವಿಷ್ಯ ಹೊಸಕಿ ಹಾಕುವ ನಿರ್ಧಾರ

By Web DeskFirst Published Aug 10, 2018, 7:32 AM IST
Highlights

ಸರ್ಕಾರವು ವಿದ್ಯಾರ್ಥಿಗಳ ಭವಿಷ್ಯವನ್ನೇ ಹೊಸಕಿ ಹಾಕುವಂತಹ ನಿರ್ಧಾರವೊಂದನ್ನು ಕೈಗೊಂಡಿವೆ. ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕರ ನೇಮಕಕ್ಕೆ ಅಂಕಿತ ನೀಡಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. 

ಮಂಗಳೂರು :  ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನ ಕನ್ನಡ ಮಾಧ್ಯಮಿಕ ಶಾಲೆಗಳಿಗೆ ಮಲಯಾಳಿ ಭಾಷಾ ಶಿಕ್ಷಕರ ನೇಮಕಕ್ಕೆ ಮುದ್ರೆ ಒತ್ತುವ ಮೂಲಕ ಕೇರಳ ಸರ್ಕಾರ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯವನ್ನೇ ಹೊಸಕಿಹಾಕುವ ಪ್ರಯತ್ನಕ್ಕೆ ಕೈಹಾಕಿದೆ. ಈ ಮೂಲಕ ಕೇರಳದಲ್ಲಿ ಜಾರಿಗೆ ತಂದಿರುವ ಮಲಯಾಳಿ ಮಾತೃಭಾಷೆ ಕಡ್ಡಾಯ ಆದೇಶವನ್ನು ಹಂತಹಂತವಾಗಿ ಗಡಿನಾಡ ಭಾಷಾ ಅಲ್ಪಸಂಖ್ಯಾತ ಶಾಲೆಗಳಿಗೂ ವಿಸ್ತರಿಸುವ ಹುನ್ನಾರ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಸಮೀಪದ ಮಂಗಲ್ಪಾಡಿ ಹೈಸ್ಕೂಲಿನಲ್ಲಿ ಕನ್ನಡ ಮಾಧ್ಯಮ ತರಗತಿಗಳಿಗೆ ಗಣಿತ ಪಾಠ ಮಾಡಲು ಕನ್ನಡದ ಗಂಧಗಾಳಿಯಿಲ್ಲದ ಮಲಯಾಳಿ ಅಧ್ಯಾಪಕರನ್ನು ನೇಮಿಸಿರುವುದೇ ವಿವಾದಕ್ಕೆ ಕಾರಣ.

ಕೇರಳ ಸರ್ಕಾರದ ಹಾಗೂ ಕೇರಳ ಲೋಕಸೇವಾ ಆಯೋಗದ(ಕೆಪಿಎಸ್‌ಸಿ) ಧೋರಣೆಯನ್ನು ವಿರೋಧಿಸಿ ಕಳೆದ ಒಂದು ವಾರದಿಂದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದಾಗಿದೆ. ಇದೇ ವೇಳೆ ಕರ್ನಾಟಕ ಸರ್ಕಾರದ ಮಧ್ಯಪ್ರವೇಶಕ್ಕೆ ಗಡಿನಾಡಿನ ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಈ ಮಧ್ಯೆ ಕಾಸರಗೋಡಿನ ಸಂಘಟನೆಗಳು ಕೇರಳ ಹೈಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿವೆ.

ಏನಿದು ವಿವಾದ?:  ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಗಣಿತ, ವಿಜ್ಞಾನ, ಸಮಾಜ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ಕಲಿಯುವ ರೀತಿಯಲ್ಲೇ ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲೇ ಕಲಿಯುತ್ತಾರೆ. ಈ ರೀತಿ ಕನ್ನಡ ವಿಭಾದದಲ್ಲಿ ಪಾಠಪ್ರವಚನ ನಡೆಯುವ ಮಾಧ್ಯಮಿಕ(8ರಿಂದ 10ನೇ ತರಗತಿ) ಶಾಲೆಗಳಿಗೆ ಶಿಕ್ಷಕರ ನೇಮಕಕ್ಕೆ 2015ರಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು. ಲಿಖಿತ ಪರೀಕ್ಷೆ ಬಳಿಕ ಸಂದರ್ಶನವನ್ನೂ ನಡೆಸಿ 18 ಮಂದಿ ಅಂತಿಮ ಹಂತದಲ್ಲಿ ಆಯ್ಕೆಯಾಗಿದ್ದರು. ಈ ಪೈಕಿ ಕಾಸರಗೋಡಿನ ಮಂಗಲ್ಪಾಡಿ ಹೈಸ್ಕೂಲ್‌ನ ಕನ್ನಡ ಮಾಧ್ಯಮ ವಿಭಾಗಕ್ಕೆ ಕನ್ನಡದ ಗಂಧಗಾಳಿಯಿಲ್ಲದ ಮಲಪ್ಪುರಂ ಮೂಲದ ಗಣಿತ ಶಿಕ್ಷಕರೊಬ್ಬರು ನೇಮಕಗೊಂಡಿದ್ದರು.

ವಾರದ ಹಿಂದೆ ಆ ಶಿಕ್ಷಕ ತರಗತಿಗೆ ಬಂದು ಮಲಯಾಳಿ ಭಾಷೆಯಲ್ಲಿ ಪಾಠ ಮಾಡಲು ಹೊರಟಾಗ ಭಾಷೆ ಅರ್ಥವಾಗದೆ ವಿದ್ಯಾರ್ಥಿಗಳು ಆಕ್ಷೇಪಿಸಿದ್ದಲ್ಲದೆ, ತರಗತಿ ಬಹಿಷ್ಕರಿಸಿ ಪ್ರತಿಭಟನೆಯನ್ನು ನಡೆಸಿದ್ದರು. ಗುರುವಾರದಂದು ಸುಮಾರು 120ಕ್ಕೂ ಅಧಿಕ ವಿದ್ಯಾರ್ಥಿಗಳು, 20ಕ್ಕೂ ಅಧಿಕ ಪೋಷಕರು ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಮಂಜೇಶ್ವರ ಶಾಸಕ ಅಬ್ದುಲ್‌ ರಜಾಕ್‌ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಮಕ್ಕಳಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಈ ಶಾಲೆಯಲ್ಲಿ ಸುಮಾರು 140ಕ್ಕೂ ಅಧಿಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿದ್ದಾರೆ. ಇನ್ನುಳಿದ 17 ಮಂದಿಗೂ ನೇಮಕಾತಿ ಪತ್ರ ಹೋಗಿದ್ದು ಅವರೂ ಸಹ ಕನ್ನಡದ ಗಂಧಗಾಳಿ ಇಲ್ಲದವರು ಎಂದು ಹೇಳಲಾಗಿದೆ.

ಇಕ್ಕಟ್ಟಿನಲ್ಲಿ ಶಿಕ್ಷಣ ಇಲಾಖೆ:

ಈ ಎಡವಟ್ಟನ್ನು ಅರಿತುಕೊಂಡ ಕಾಸರಗೋಡು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮಲಯಾಳಿ ಶಿಕ್ಷಕನನ್ನು ರಜೆ ಮೇಲೆ ತೆರಳುವಂತೆ ಸೂಚಿಸಿದ್ದರು. ಆದರೆ ಹೊಸದಾಗಿ ನೇಮಕಗೊಂಡ ಶಿಕ್ಷಕ ಇದಕ್ಕೆ ನಿರಾಕರಿಸಿದ್ದು, ವಿವಾದ ಮತ್ತಷ್ಟುಜಟಿಲಗೊಳ್ಳಲು ಕಾರಣವಾಗಿದೆ. ಇದರಿಂದಾಗಿ ಶಿಕ್ಷಣ ಇಲಾಖೆಯೂ ಇಕ್ಕಟ್ಟಿನಲ್ಲಿ ಸಿಲುಕಿದೆ.

ಹೈಕೋರ್ಟ್‌ ಆದೇಶ ಏನಿತ್ತು?:

2010-11ನೇ ಸಾಲಿನಲ್ಲಿ ಜಿಲ್ಲೆಯ ಕನ್ನಡ ಹೈಸ್ಕೂಲ್‌ಗಳಿಗೆ 3 ಮಲಯಾಳಿ ಶಿಕ್ಷಕರು ನೇಮಕಗೊಂಡಿದ್ದರು. ಅವರಾರ‍ಯರಿಗೂ ಕನ್ನಡ ಗೊತ್ತಿರಲಿಲ್ಲ. ಇದರ ವಿರುದ್ಧ ಬದಿಯಡ್ಕದ ಬೊಳ್ಪು ಸಂಘಟನೆ ಕೇರಳ ಹೈಕೋರ್ಟ್‌ ಕದ ತಟ್ಟಿತ್ತು. ಆದರೆ ಕೋರ್ಟ್‌ 2016ರಲ್ಲಿ ತೀರ್ಪು ನೀಡಿ, ಗಡಿನಾಡಿನ ಅಲ್ಪಸಂಖ್ಯಾತ ಭಾಷಿಗರಿಗೆ ತೊಂದರೆಯಾಗಬಾರದು. ಕನ್ನಡ ಬಲ್ಲ ಶಿಕ್ಷಕರನ್ನೇ ನೇಮಕ ಮಾಡಬೇಕು ಎಂದೇ ತೀರ್ಪು ನೀಡಿತ್ತು. ಆದರೂ ಮತ್ತೆ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.

ಕೆಪಿಎಸ್‌ಸಿ ಹೇಳೋದೇನು?:

ಮಾಧ್ಯಮಿಕ ಶಾಲೆಗೆ ಶಿಕ್ಷಕರ ನೇಮಕ ಕುರಿತಂತೆ ಕೇರಳ ಲೋಕಸೇವಾ ಆಯೋಗ ತನ್ನದೇನು ತಪ್ಪಿಲ್ಲ ಎನ್ನುತ್ತಿದೆ. ಈಗ ನಡೆಯುತ್ತಿರುವ 18 ಶಿಕ್ಷಕರ ನೇಮಕ ಪ್ರಕ್ರಿಯೆ 2015ರಲ್ಲೇ ಆರಂಭಗೊಂಡಿತ್ತು. ಹೈಕೋರ್ಟ್‌ ತೀರ್ಪು ನೀಡಿದ್ದು 2016ರಲ್ಲಿ. ಹಾಗಾಗಿ ಕೋರ್ಟ್‌ ತೀರ್ಪು ಇದಕ್ಕೆ ಅನ್ವಯವಾಗುವುದಿಲ್ಲ ಎನ್ನುವುದು ಕೆಪಿಎಸ್‌ಸಿ ಸಮಜಾಯಿಷಿ. ಹಾಗಾದರೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಲಯಾಳಿ ಶಿಕ್ಷಕರು ಹೇಗೆ ಪಾಠ ಮಾಡಬೇಕು ಎಂಬ ಪ್ರಶ್ನೆಗೆ ಕೆಪಿಎಸ್‌ಸಿ ಬಳಿ ಉತ್ತರ ಇಲ್ಲ ಎನ್ನುತ್ತಿದೆ ಬೊಳ್ಪು ಸಂಘಟನೆ.

ನೇಮಕದಲ್ಲಿ ಎಡವಿತೇ?:

ಕೆಪಿಎಸ್‌ಸಿ ನೇಮಕ ಪ್ರಕ್ರಿಯೆ ವೇಳೆ ಕನ್ನಡ ಭಾಷಾ ತಜ್ಞರು ಕೂಡ ಇರುತ್ತಾರೆ. ಅಲ್ಪಸಂಖ್ಯಾತ ಕನ್ನಡ ಮಾಧ್ಯಮ ಶಾಲೆಗಳಿಗೆ ಶಿಕ್ಷಕರ ನೇಮಕ ಸಂದರ್ಭ ಅಂತಹ ಶಿಕ್ಷಕರ ಕನ್ನಡ ಜ್ಞಾನವನ್ನು ಸಂದರ್ಶನ ವೇಳೆ ಪ್ರಶ್ನಿಸಲಾಗುತ್ತದೆ. ಆಯ್ಕೆ ಸಮಿತಿಯಲ್ಲಿ ಹಾಜರಿದ್ದ ಕನ್ನಡ ಭಾಷಾ ತಜ್ಞರು ಪ್ರಶ್ನೆ ಕೇಳಿಲ್ಲವೇ? ಅಲ್ಲವಾ ಯಾವುದೋ ಒತ್ತಡಕ್ಕೆ ಒಳಗಾಗಿ ನೇಮಕಕ್ಕೆ ಅಸ್ತು ಎಂದರೇ ಇತ್ಯಾದಿ ಪ್ರಶ್ನೆಗಳೂ ಕನ್ನಡಿಗರನ್ನು ಕಾಡತೊಡಗಿದೆ.

 

ಕರ್ನಾಟಕದಲ್ಲಿ ಮಲಯಾಳಿ ಭಾಷಿಗರಿಗೆ ಸಮಸ್ಯೆಯಾದಾಗ ಕೇರಳ ಸರ್ಕಾರ ಕ್ಷಿಪ್ರವಾಗಿ ಸ್ಪಂದಿಸಿ ಕರ್ನಾಟಕ ಸರ್ಕಾರದ ಗಮನ ಸೆಳೆಯುತ್ತದೆ. ಅದೇ ರೀತಿ ಈಗ ಕೇರಳದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಕರ್ನಾಟಕ ಮುಖ್ಯಮಂತ್ರಿಗಳು ಕೇರಳ ಸಿಎಂ ಜೊತೆಗೆ ಮಾತುಕತೆ ನಡೆಸಬೇಕು. ನಿಯಮಾನುಸಾರವೇ ಕನ್ನಡಿಗ ಶಿಕ್ಷಕರ ನೇಮಕಕ್ಕೆ ಅವಕಾಶ ಕಲ್ಪಿಸಬೇಕು.

- ಡಾ.ನರೇಶ್‌ ಮುಳ್ಳೇರಿಯಾ, ಕನ್ನಡಪರ ಹೋರಾಟಗಾರ

ಹಿಂದೆ ಕೇರಳ ಹೈಕೋರ್ಟ್‌ನಿಂದ ಆದೇಶ ತರಿಸಿದ್ದೆವು. ಇದೀಗ ಮತ್ತೆ ಹೈಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದ್ದೇವೆ. ಕನ್ನಡ ಬಲ್ಲ ಶಿಕ್ಷಕರನ್ನು ನೇಮಕಗೊಳಿಸುವಂತೆ ಹೈಕೋರ್ಟ್‌ ಆದೇಶ ಇದ್ದರೂ ನೇಮಕ ಪ್ರಕ್ರಿಯೆಯಲ್ಲಿ ನಿಯಮವನ್ನು ಸರಿಯಾಗಿ ಪಾಲಿಸಿಲ್ಲ.

- ಸುಂದರ ಬಾರಡ್ಕ, ಅಧ್ಯಕ್ಷ, ಬೊಳ್ಪು ಸಂಘಟನೆ, ಬದಿಯಡ್ಕ

ಆತ್ಮಭೂಷಣ್ - ಮಂಗಳೂರು

click me!