
ಕೊಚ್ಚಿ[ಸೆ.21]: ಕಾಲೇಜು ಹಾಸ್ಟೆಲ್‌ಗಳಲ್ಲಿ ಮೊಬೈಲ್ ಬಳಕೆ, ಶಿಕ್ಷಣದ ಭಾಗವಾಗಿದ್ದು, ಹಾಗಾಗಿ ನಿಷೇಧ ಸಲ್ಲದು ಎಂದು ಕೇರಳ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಾಲೇಜು ಹಾಸ್ಟೆಲ್‌ನಲ್ಲಿ ಮೊಬೈಲ್ ಬಳಕೆ ಮಾಡಿದ್ದಕ್ಕೆ ಹಾಸ್ಟೆಲ್‌ನಿಂದ ವಜಾಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಇಂಟರ್‌ನೆಟ್ ಬಳಕೆ, ಶಿಕ್ಷಣ ಹಾಗೂ ಖಾಸಗಿತನ ಹಕ್ಕಾಗಿದೆ ಎಂದು ಐತಿಹಾಸಿಕ ತೀರ್ಪು ನೀಡಿದೆ. ಅಲ್ಲದೇ ವಿದ್ಯಾರ್ಥಿನಿಯನ್ನು ಮತ್ತೆ ಹಾಸ್ಟೆಲ್‌ಗೆ ಸೇರಿಸಿಕೊಳ್ಳಬೇಕು ಎಂದು ಆದೇಶಿಸಿದೆ.
ಕಲ್ಲಿಕೋಟೆ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಅನುದಾನಿತ ಕಾಲೇಜೊಂದರ ಬಿ.ಎ ಮೂರನೇ ಸೆಮೆಸ್ಟರ್ ವಿದ್ಯಾರ್ಥಿನಿ, ಮೊಬೈಲ್ ಬಳಕೆ ಮಾಡಿದ್ದಕ್ಕೆ ತನ್ನನ್ನು ಹಾಸ್ಟೆಲ್‌ನಿಂದ ಹೊರಹಾಕಿದ್ದನ್ನು ಪ್ರಶ್ನಿಸಿ ಹೈ ಕೋರ್ಟ್ ಕದ ತಟ್ಟಿದ್ದರು. ಹಾಸ್ಟೆಲ್‌ನಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6ರ ವರೆಗೆ ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ. ಅಲ್ಲದೇ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಬಳಕೆಗೂ ನಿರ್ಬಂಧ ವಿಧಿಸಲಾಗಿದೆ. 2019 ಜೂ.24 ರಿಂದ ಸಂಜೆ 6 ರಿಂದ ರಾತ್ರಿ 10ರ ವರೆಗೆ ಈ ಸಮಯವನ್ನು ಪರಿಷ್ಕರಿಸಲಾಗಿದೆ. ಮಹಿಳಾ ಹಾಸ್ಟೆಲ್‌ಗಳಲ್ಲಿ ಮಾತ್ರ ಇಂಥ ನಿಯಮ ರೂಪಿಸಲಾಗಿದೆ. ಇದು ಲಿಂಗ ತಾರತಮ್ಯವಾಗಿದ್ದು, ಯುಜಿಸಿಯ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ವಿದ್ಯಾರ್ಥಿನಿ ದೂರಿದ್ದಳು.
ಅರ್ಜಿಯ ವಿಚಾರಣೆ ನಡೆಸಿದ ಕೊಚ್ಚಿ ಹೈ ಕೋರ್ಟ್, ಸಂವಿಧಾನದ 21ನೇ ಪರಿಚ್ಛೇದದ ಪ್ರಕಾರ ಇಂಟರ್‌ನೆಟ್ ಬಳಕೆ ಶಿಕ್ಷಣ ಹಾಗೂ ಖಾಸಗಿತನದ ಹಕ್ಕಾಗಿದ್ದು, ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಕೂಡ ಇದನ್ನೇ ಹೇಳಿದೆ. ಕಲಿಕೆಯ ವೇಳೆ ಮೊಬೈಲ್ ಬಳಕೆ ನಿಷೇಧ ಅನಗತ್ಯವಾಗಿದ್ದು, ಸ್ವತಂತ್ರ ಹಾಗೂ ಖಾಸಗಿತನದ ಹಕ್ಕನ್ನು ಕಸಿದುಕೊಳ್ಳುವುದರಿಂದ ಜ್ಞಾನಾರ್ಜನೆಗೆ ತೊಂದರೆಯಾಗುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದ್ದು, ಯಾರೂ ಕೂಡ ಮೊಬೈಲ್ ಬಳಕೆ ಅಥವಾ ಬಳಸದೇ ಇರುವ ಬಗ್ಗೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುವಂತಿಲ್ಲ.
ಶೈಕ್ಷಣಿಕ ಪ್ರಗತಿಗೆ ಮೊಬೈಲ್ ಬಳಕೆ ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟಿದ್ದು. ಶಿಕ್ಷಣ ಸಂಸ್ಥೆಗಳ ಈ ನಿರ್ಧಾರವನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸಿ, ಒಬ್ಬರು ಮಾತ್ರ ಪ್ರಶ್ನಿಸಿದರೆ ಆ ನಿಯಮವನ್ನು ಕಾನೂನುಬದ್ಧ ಎಂದು ಪರಿಗಣಿಸಲಾಗದು. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ತೊಡಕು ಉಂಟು ಮಾಡುವ ಯಾವ ನಿಯಮವನ್ನೂ ಜಾರಿಗೊಳಿಸುವುದು ಸಮಂಜಸವಲ್ಲ ಎಂದು ಅಭಿಪ್ರಾಯ ಪಟ್ಟಿರುವ ಉಚ್ಛ ನ್ಯಾಯಾಲಯ, ಇಂಥ ನಿರ್ಬಂಧಗಳನ್ನು ಹೇರಬಾರದು ಎಂದು ತೀರ್ಪಿತ್ತಿದೆ.
ಅಲ್ಲದೇ ಈ ಬಗ್ಗೆ ದೂರು ಸಲ್ಲಿಸಿದಕ್ಕೆ ವಿದ್ಯಾರ್ಥಿಗೆ ಹೆತ್ತವರು, ಶಿಕ್ಷಕರು ಹಾಗೂ ಹಾಸ್ಟೆಲ್ ವಾರ್ಡನ್‌ಗಳು ಯಾವುದೇ ರೀತಿಯ ಕಿರುಕುಳ ನೀಡಬಾರದು. ಅಲ್ಲದೇ ಮೊಬೈಲ್ ಬಳಕೆಯಿಂದ ಇತರೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.