ಶಬರಿಮಲೆಯಲ್ಲಿ ಅನುಮಾನಕ್ಕೆ ಕಾರಣವಾದ ಕೇರಳ ಸರ್ಕಾರ ನಡೆ

By Web DeskFirst Published Oct 27, 2018, 7:45 AM IST
Highlights

ಶಬರಿಮಲೆಯಲ್ಲಿ ಮುಂದಿನ ತಿಂಗಳಿನಿಂದ ಯಾತ್ರೆ ಆರಂಭವಾಗಲಿದ್ದು ಇದೇ ವೇಳೆ ಕೇರಳ ಸರ್ಕಾರದ ಈ ನಿರ್ಧಾರ ಅನುಮಾನಗಳಿಗೆ ಕಾರಣವಾಗಿದೆ. 

ತಿರುವನಂತಪುರ: ಮುಂದಿನ ತಿಂಗಳಿನಿಂದ ಶಬರಿಮಲೆ ಯಾತ್ರೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಯ್ಯಪ್ಪ ದೇವಸ್ಥಾನದ ವಿವಿಧ ಕೆಲಸಗಳಿಗೆ 1680 ಸಿಪಿಎಂ ಕಾರ್ಯಕರ್ತರನ್ನು ದಿನಗೂಲಿ ನೌಕರರಾಗಿ ನೇಮಕ ಮಾಡಿಕೊಳ್ಳಲು ಕೇರಳ ಸರ್ಕಾರ ನಿರ್ಧರಿಸಿರುವುದು ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಪ್ರಸಾದ ಸಿದ್ಧತೆ, ಅನ್ನದಾನ, ನೀರು ಪೂರೈಕೆ, ಕಚೇರಿ- ಅತಿಥಿಗೃಹಗಳ ನಿರ್ವಹಣೆ, ಭದ್ರತಾ ಸಿಬ್ಬಂದಿಗೆ ಆಹಾರ ಪೂರೈಕೆ ಸೇರಿದಂತೆ ವಿವಿಧ ಕೆಲಸಗಳಿಗೆ ಪ್ರತಿ ವರ್ಷ ದಿನಗೂಲಿ ಆಧಾರದಲ್ಲಿ 1500 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಈ ವರ್ಷ ಆ ಕೆಲಸಗಳಿಗೆ ಸಿಪಿಎಂ ಕಾರ್ಯಕರ್ತರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ತಿರುವಾಂಕೂರು ದೇವಸ್ವ ಮಂಡಳಿಗೆ ಸರ್ಕಾರ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ.

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಯಾವುದೇ ವಯೋಮಾನದ ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್‌ ಸೆ.28ರಂದು ತೀರ್ಪು ನೀಡಿತ್ತು. ಇದಾದ ನಂತರ ಇದೇ ತಿಂಗಳು ಐದು ದಿನಗಳ ಕಾಲ ಮಾಸಿಕ ಪೂಜೆ ನಿಮಿತ್ತ ದೇಗುಲದ ಬಾಗಿಲು ತೆರೆದಿತ್ತಾದರೂ ಮಹಿಳೆಯರ ಪ್ರವೇಶಕ್ಕೆ ಅವಕಾಶ ಸಿಕ್ಕಿರಲಿಲ್ಲ.

ನವೆಂಬರ್‌ ಯಾತ್ರೆ ವೇಳೆ ಮಹಿಳೆಯರಿಗೆ ಅವಕಾಶ ಮಾಡಿಕೊಡುವ ಸಲುವಾಗಿಯೇ ಕೇರಳ ಸರ್ಕಾರ ಸಿಪಿಎಂ ಕಾರ್ಯಕರ್ತರನ್ನು ವಿವಿಧ ಹುದ್ದೆಗೆ ನೇಮಕ ಮಾಡಿದೆಯೇ? ಅಥವಾ ಪಕ್ಷದ ಕಾರ್ಯಕರ್ತರಿಗೆ ಉದ್ಯೋಗ ಕೊಡಿಸಲು ಈ ಕಸರತ್ತು ನಡೆಸಿದೆಯೇ ಎಂಬ ಪ್ರಶ್ನೆಗಳು ಸೃಷ್ಟಿಯಾಗಿವೆ.

click me!