ದೇಶದ 10 ಕೋಟಿ ಜನರಿಗೆ ಮೋದಿ ಪತ್ರ

By Web DeskFirst Published Oct 27, 2018, 7:32 AM IST
Highlights

ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಫೀಲ್ಡಿಗೆ ಇಳಿದಿದ್ದು, ಇದೀಗ 10 ಕೋಟಿ ಆಯುಷ್ಮಾನ್ ಯೋಜನೆ ಫಲಾನುಭವಿಗಳಿಗೆ ಅವರು ಪತ್ರ ಬರೆಯಲು ಉದ್ದೇಶಿಸಿದ್ದಾರೆ.

ನವದೆಹಲಿ: ದೇಶದ 50 ಕೋಟಿ ಬಡವರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸುವ ವಿಶ್ವದ ಅತಿದೊಡ್ಡ ಯೋಜನೆ ‘ಆಯುಷ್ಮಾನ್‌ ಭಾರತ’ದ ಪ್ರಯೋಜನಗಳ ಕುರಿತು ಅರಿವು ಮೂಡಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಫೀಲ್ಡಿಗೆ ಇಳಿದಿದ್ದಾರೆ. 10 ಕೋಟಿ ಫಲಾನುಭವಿಗಳಿಗೆ ಅವರು ಪತ್ರ ಬರೆಯಲು ಉದ್ದೇಶಿಸಿದ್ದಾರೆ.

ಬರಾಕ್‌ ಒಬಾಮಾ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಜಾರಿಗೆ ತಂದಿದ್ದ ‘ಒಬಾಮಾ ಕೇರ್‌’ ರೀತಿಯಲ್ಲೇ ಭಾರತದ ‘ಮೋದಿ ಕೇರ್‌’ ಯೋಜನೆ ಎಂದು ಪ್ರಸಿದ್ಧಿಯಾಗಿರುವ ‘ಆಯುಷ್ಮಾನ್‌ ಭಾರತ’ ಬಗ್ಗೆ ಅದರ ಫಲಾನುಭವಿಗಳಲ್ಲಿ ಬಹುತೇಕರಿಗೆ ಮಾಹಿತಿ ಇಲ್ಲ. ಈ ಯೋಜನೆಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕಾಗಿಲ್ಲ. ಸಾಮಾಜಿಕ- ಆರ್ಥಿಕ ಜನಗಣತಿಯಲ್ಲಿನ ಅಂಕಿ-ಅಂಶಗಳ ಸಹಾಯದಿಂದ ದೇಶದ ಶೇ.40ರಷ್ಟುಜನರನ್ನು ತನ್ನಿಂತಾನೇ ನೋಂದಣಿ ಮಾಡಲಾಗಿದೆ. ಹೀಗಾಗಿ ನೋಂದಣಿ ಕುರಿತ ಗೊಂದಲಗಳನ್ನು ಹೋಗಲಾಡಿಸಲು, ಯೋಜನೆಯ ಪ್ರಯೋಜನಗಳು ಏನು ಎಂಬುದನ್ನು ಜನರಿಗೆ ತಿಳಿಸಲು 50 ಕೋಟಿ ಫಲಾನುಭವಿಗಳ ಪೈಕಿ 10 ಕೋಟಿ ಮಂದಿಗೆ ಮೋದಿ ಪತ್ರ ಬರೆಯಲಿದ್ದಾರೆ ಎಂದು ನೀತಿ ಆಯೋಗದ ಸದಸ್ಯ ವಿನೋದ್‌ ಕೆ. ಪಾಲ್‌ ತಿಳಿಸಿದ್ದಾರೆ.

ಯೋಜನೆ ಜಾರಿಯಾದ ಒಂದೇ ತಿಂಗಳಲ್ಲಿ 1.12 ಲಕ್ಷ ಮಂದಿ ಇದರ ಪ್ರಯೋಜನ ಪಡೆದಿದ್ದು, 140 ಕೋಟಿ ರು. ಕ್ಲೇಮುಗಳಿಗೆ ಅಂಗೀಕಾರ ನೀಡಲಾಗಿದೆ. ವಾರ್ಷಿಕ 1200 ಕೋಟಿ ರು. ಹಣವನ್ನು ಈ ಯೋಜನೆಯಲ್ಲಿ ತೊಡಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

click me!