ಮೋದಿ ಧ್ಯಾನ ಮಾಡಿದ ಗುಹೆಯಲ್ಲಿ ಆಧುನಿಕ ಸೌಲಭ್ಯಗಳು!

By Web DeskFirst Published May 20, 2019, 9:37 AM IST
Highlights

ಮೋದಿ ಧ್ಯಾನ ಮಾಡಿದ ಗುಹೆಯಲ್ಲಿ ಉಂಟು ಆಧುನಿಕ ಸೌಲಭ್ಯಗಳು!| ಉಪಾಹಾರ, ಊಟ, ದಿನಕ್ಕೆ 2 ಬಾರಿ ಚಹಾ ವಿತರಣೆ| ವಿದ್ಯುತ್‌, ಕಾಲ್‌ಬೆಲ್‌, ಶೌಚಾಲಯವೂ ಉಂಟು| ಧ್ಯಾನದ ಉತ್ತೇಜನಕ್ಕಾಗಿ ಕಳೆದ ವರ್ಷವಷ್ಟೇ ಕಟ್ಟಲಾದ ಗುಹೆ

ಡೆಹ್ರಾಡೂನ್‌[ಮೇ.20]: ಪ್ರಧಾನಿ ನರೇಂದ್ರ ಮೋದಿ ಅವರು ಧ್ಯಾನ ಕೈಗೊಂಡ ಕೇದಾರನಾಥ ದೇಗುಲದ ಸಮೀಪದ ಗುಹೆಯಲ್ಲಿ ಆಧುನಿಕ ಕಾಲದ ಸಕಲ ಸೌಕರ್ಯಗಳು ಇವೆ. ಹಿಮಾಲಯದ ತಪ್ಪಲಿನಲ್ಲಿರುವ ಈ ಕೊಠಡಿಗೆ ದಿನಕ್ಕೆ 990 ರು. ಬಾಡಿಗೆ ನಿಗದಿ ಮಾಡಲಾಗಿದೆ.

ಧ್ಯಾನವನ್ನು ಜನಪ್ರಿಯಗೊಳಿಸಲು ಕಳೆದ ವರ್ಷವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಕೇದರನಾಥದ ಗುಹೆಯಲ್ಲಿ ಮಂಡಲ್‌ ವಿಕಾಸ್‌ ನಿಗಮ್‌ ಎಂಬ ಸಂಸ್ಥೆ ಈ ಧ್ಯಾನ ಕೇಂದ್ರ ನಿರ್ಮಿಸಿತ್ತು. ಮೊದಲಿಗೆ ಈ ಧ್ಯಾನ ಕೇಂದ್ರದ ದರವನ್ನು ದಿನಕ್ಕೆ 3000 ರು. ನಿಗದಿಗೊಳಿಸಲಾಗಿತ್ತು. ಆದರೆ, ಪ್ರವಾಸಿಗರನ್ನು ಸೆಳೆಯಲು ಅಸಾಧ್ಯವಾದ ಕಾರಣದಿಂದಾಗಿ ಈ ದರವನ್ನು 990 ರು.ಗೆ ಇಳಿಸಲಾಗಿತ್ತು. ಜೊತೆಗೆ, ಈ ಧ್ಯಾನ ಕೇಂದ್ರವನ್ನು ಮೊದಲಿಗೆ 3 ದಿನಗಳ ಕಾಲ ಮಾತ್ರವೇ ಕಾಯ್ದಿರಿಸಬಹುದಿತ್ತು. ಆದರೆ, ಈ ವರ್ಷ ಆ ನಿಯಮವನ್ನು ತೆಗೆದು ಹಾಕಲಾಗಿದೆ.

ಧ್ಯಾನ ಕೇಂದ್ರದಲ್ಲಿರುವ ಸೌಲಭ್ಯಗಳು:

ಸಂಪೂರ್ಣ ಕಲ್ಲುಗಳಿಂದಲೇ ನಿರ್ಮಿಸಲಾಗಿರುವ ಗುಹೆಗೆ ಮರದ ಬಾಗಿಲನ್ನು ಅಳವಡಿಸಲಾಗಿದೆ. ಮೋದಿ ಅವರು ಧ್ಯಾನಕ್ಕೆ ಕುಳಿತ ಈ ಗುಹೆಯ ಕೊಠಡಿಯಲ್ಲಿ ವಿದ್ಯುತ್‌ ಸೌಲಭ್ಯ, ಕುಡಿಯುವ ನೀರು ಹಾಗೂ ಶೌಚಾಲಯ ಸೇರಿದಂತೆ ಇತರ ಸೌಲಭ್ಯಗಳು ಇವೆ. ಅಲ್ಲದೆ, ನಿಗಮ್‌ ಸಂಸ್ಥೆಯು ಇಲ್ಲಿಗೆ ಬರುವ ಪ್ರವಾಸಿಗರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಹಾಗೂ ದಿನಕ್ಕೆ ಎರಡು ಬಾರಿ ಚಹಾವನ್ನು ವಿತರಿಸುತ್ತದೆ. ಅಲ್ಲದೆ, ಸಾಮಾನ್ಯ ಲಾಡ್ಜ್‌ಗಳಲ್ಲಿರುವಂತೆ ಇಂಟರ್‌ಕಾಲ್‌ ಸೇವೆ ರೀತಿ ಕಾಲ್‌ ಬೆಲ್‌ ಅನ್ನು ಅಳವಡಿಸಲಾಗಿದ್ದು, ದಿನದ 24 ಗಂಟೆಯೂ ಪ್ರವಾಸಿಗರ ನೆರವಿಗೆ ಸಿಬ್ಬಂದಿ ಸಿದ್ಧರಿರುತ್ತಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!