ಕಾಶ್ಮೀರದ ಜನರಿಗೆ ಚಿತ್ರಹಿಂಸೆ ನೀಡುತ್ತಿದೆಯಾ ಪಾಕಿಸ್ತಾನ?

By Web DeskFirst Published Sep 27, 2018, 9:27 AM IST
Highlights

ಕಾಶ್ಮೀರಿಗರಿಗೆ ಪಾಕ್ ಹೇಗೆ ಚಿತ್ರಹಿಂಸೆ ನೀಡುತ್ತಿದೆಯಂತೆ! | ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಆಯ್ತು ವೈರಲ್ 

ಬೆಂಗಳೂರು (ಸೆ. 27): ಕಾಶ್ಮೀರಿಗರಿಗೆ ಪಾಕ್ ಹೇಗೆ ಚಿತ್ರಹಿಂಸೆ ನೀಡುತ್ತಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. 

ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡುತ್ತಿರುವ ದೃಶ್ಯವಿದೆ. ಈ ವಿಡಿಯೋವನ್ನು ಪೋಸ್ಟ್‌ಮಾಡಿ, ‘ಕಾಶ್ಮೀರದಲ್ಲಿ ಹೇಗೆ ಜನರಿಗೆ ಹಿಂಸೆ ನೀಡಲಾಗುತ್ತಿದೆ ಎಂದು ನೀವೇ ಕಣ್ಣಾರೆ ನೋಡಿ. ಭಾರತ ಏಕೆ ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆಗೆ ನಿರಾಕರಿಸಿದೆ ಎಂದು ನಿಮಗೇ ಅರ್ಥವಾಗುತ್ತದೆ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ.

ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕ ಪತ್ರಕರ್ತರೂ ಸೇರಿದಂತೆ ಹಲವು ಜನರು ಇದನ್ನು ಶೇರ್ ಮಾಡಿದ್ದಾರೆ. ಕೆಲ ಸುದ್ದಿ ವಾಹಿನಿಗಳೂ ಇದನ್ನು ವರದಿ ಮಾಡಿವೆ. ಆದರೆ ನಿಜಕ್ಕೂ ಇದು ಕಾಶ್ಮೀರಿಗರಿಗೆ ಪಾಕ್ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೇ ಎಂದು ತನಿಖೆಗೆ ಮುಂದಾದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸಾಬೀತಾಗಿದೆ.

‘ಆಲ್ಟ್ ನ್ಯೂಸ್’ ಈ ಕುರಿತು ಪರಿಶೀಲನೆಗೆ ಮುಂದಾದಾಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಪಾಕಿಸ್ತಾನ ಎಸ್‌ಎಸ್‌ಜಿ ಕಮಾಂಡೋಗಳಿಗೆ ತರಬೇತಿ ನೀಡುವ ವಿಡಿಯೋ ಎಂಬುದು ಪತ್ತೆಯಾಗಿದೆ.

2017 ರಲ್ಲಿ ‘ಪಾಕಿಸ್ತಾನ ಎಸ್‌ಎಸ್‌ಜಿ ಕಮಾಂಡೋ ತರಬೇತಿ’ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಯುಟ್ಯೂಬ್‌ನಲ್ಲಿ ಈ ಕುರಿತ ಹಲವು ವಿಡಿಯೋಗಳು ಲಭ್ಯವಿವೆ. ಈ ವಿಡಿಯೋಗಳಿಗೂ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿರುವ ವಿಡಿಯೋಗೂ ಸಾಕಷ್ಟು ಸಾಮ್ಯತೆ ಇದೆ.

ಅಲ್ಲದೆ ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸೆಕೆಂಡ್‌ಗಳ ಕಾಲಾವಧಿಯಲ್ಲಿ ಪಾಕಿಸ್ತಾನ ಧ್ವಜವೂ ಕಾಣಿಸುತ್ತದೆ. ಅಲ್ಲದೆ ಈ ವಿಡಿಯೋದಲ್ಲಿ ಕಾಣಿಸುತ್ತಿರುವ ಬೂಟುಗಳು ಪಾಕಿಸ್ತಾನ ಸೇನೆಯ ವಸ್ತ್ರಸಂಹಿತೆಯಾಗಿದೆ. ಹಾಗಾಗಿ ಕಾಶ್ಮೀರಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಹರಿದಾಡುತ್ತಿರುವ ಸುದ್ದಿ ಸುಳ್ಳು. 

-ವೈರಲ್ ಚೆಕ್ 

click me!