ಸರ್ಕಾರದ ಬಗ್ಗೆ ಅಸಮಾಧಾನ ಇದೆ, ಆದ್ರೆ ಕಾಶ್ಮೀರ ಭಾರತದ ಆಂತರಿಕ ವಿಚಾರ. ಪಾಕಿಸ್ತಾನ ಹಸ್ತಕ್ಷೇಪ ಮಾಡುವುದು ಸರಿಯಲ್ಲ| ಕಾಶ್ಮೀರ ಹಿಂಸಾಚಾರಕ್ಕೆ ಪಾಕಿಸ್ತಾನ ಕುಮ್ಮಕ್ಕು ಕಾರಣ| ರಾಹುಲ್ ಗಾಂಧಿ ಟ್ವೀಟ್ ವೈರಲ್
ನವದೆಹಲಿ[ಆ.28]: ಜಮ್ಮು ಕಾಶ್ಮೀರ ವಿಚಾರವಾಗಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದ ರಾಹುಲ್ ಗಾಂಧಿ, ಮೊದಲ ಬಾರಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ. ಜಮ್ಮು ಕಾಶ್ಮೀರ ಭಾರತಕ್ಕೆ ಸಂಬಂಧಿಸಿದ ವಿಚಾರ, ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಪಾಕಿಸ್ತಾನಕ್ಕಿಲ್ಲ ಎನ್ನುವ ಮೂಲಕ ಕಿಡಿ ಕಾರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ 'ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನವಿದೆ ನಿಜ, ಆದ್ರೆ ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂಬುವುದನ್ನು ಸ್ಪಷ್ಟಪಡಿಸುತ್ತೇನೆ. ಇದರಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಪಾಕಿಸ್ತಾನ ಅಥವಾ ಬೇರೆ ಯಾವ ದೇಶಕ್ಕೂ ಅವಕಾಶವಿಲ್ಲ' ಎಂದು ಎಚ್ಚರಿಸಿದ್ದಾರೆ.
There is violence in Jammu & Kashmir. There is violence because it is instigated and supported by Pakistan which is known to be the prime supporter of terrorism across the world.
— Rahul Gandhi (@RahulGandhi)ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಪಾಕಿಸ್ತಾನದ ಬೆಂಬಲ ಹಾಗೂ ಪ್ರಚೋದನೆಯಿಂದ ಅಲ್ಲಿ ಹಿಂಸಾಚಾರ ನಡೆಯುತ್ತದೆ. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನಿಡುವ ವಿಚಾರ ಇಡೀ ವಿಶ್ವಕ್ಕೇ ತಿಳಿದಿದೆ ' ಎಂದು ಕಿಡಿ ಕಾರಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿ 370ನೇ ವಿಧಿ ರದ್ದುಗೊಳಿಸಿರುವುದರಿಂದ ಜಮ್ಮು ಕಣಿವೆ ನಾಡಿನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಆದರೆ ಸರ್ಕಾರ ಸಂಪರ್ಕ ಮಾಧ್ಯಮಗಳನ್ನು ಕಡಿತಗೊಳಿಸಿ, ಈ ವಿಚಾರ ಹೊರ ಜಗತ್ತಿಗೆ ತಿಳಿಯದಂತೆ ಹತ್ತಿಕ್ಕುತ್ತಿದೆ ಎಂದು ಕಿಡಿ ಕಾರಿದ್ದರು. ರಾಹುಲ್ ಈ ಹೇಳಿಕೆ ಬೆನ್ನಲ್ಲೇ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಸಿಂಗ್ ವಾಸ್ತವತೆ ಅರಿತು ಮಾತನಾಡಿ, ಕಾಶ್ಮೀರಕ್ಕೆ ಬರಬೇಕೆಂದಿದ್ದರೆ ನಾವೇ ವಿಮಾನ ವ್ಯವಸ್ಥೆ ಮಾಡುತ್ತೇವೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ವಿಮಾನದ ವ್ಯವಸ್ಥೆ ಬೇಡ, ಅಲ್ಲಿ ಓಡಾಡುವ ಅವಕಾಶ ಮಾಡಿಕೊಡಿ ಸಾಕು ಎಂದಿದ್ದರು.
ಬಳಿಕ ಶನಿವಾರದಂದು ರಾಹುಲ್ ಗಾಂಧಿ ನಾಯಕತ್ವದಲ್ಲಿ ವಿಪಕ್ಷ ನಾಯಕರು ಕಾಶ್ಮೀರಕ್ಕೆ ತೆರಳಲು ಅನುವಾಗಿದ್ದರು. ಆದರೆ ಶಾಂತಿ ಭಂಗವಾಗುತ್ತದೆ ಎಂಬ ಕಾರಣದಿಂದ ಅವರಿಗೆ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು.