ಈ ವಿಷಯದಲ್ಲಿ ಕರ್ನಾಟಕವೇ ನಂ.1 ಎಂದು ಒಪ್ಪಿಕೊಂಡ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ!

By Suvarna Web DeskFirst Published Mar 1, 2018, 4:10 PM IST
Highlights
  • ಬಂಡವಾಳ ಹೂಡಿಕೆ: ಕರ್ನಾಟಕ ನಂಬರ್ 1; 2017ರಲ್ಲಿ 194 ಪ್ರಸ್ತಾಪಗಳೊಂದಿಗೆ ಕರ್ನಾಟಕದಲ್ಲಿ 1.52 ಲಕ್ಷ ಕೋಟಿ ಬಂಡವಾಳ ಹೂಡಿಕೆ
  • ಕರ್ನಾಟಕದಲ್ಲಿ ಆಗಿರುವ ಹೂಡಿಕೆಯ ಅರ್ಧ ಭಾಗದಷ್ಟು ಮಾತ್ರವೇ ಗುಜರಾತ್‌ನಲ್ಲಿ ಬಂಡವಾಳ ಹೂಡಿಕೆ

ನವದೆಹಲಿ: ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ಆಡಳಿತ ಕುರಿತು ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ನಾಯಕರ ಭಾರೀ ವಾಕ್ಸಮರ ನಡೆಯುತ್ತಿರುವ ಹೊತ್ತಿನಲ್ಲೇ, ಬಂಡವಾಳ ಹೂಡಿಕೆಯಲ್ಲಿ ಕಾಂಗ್ರೆಸ್ ಆಡಳಿತದ ಕರ್ನಾಟಕ ನಂ.1 ಸ್ಥಾನದಲ್ಲಿದೆ ಎಂದು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ!

2017ರಲ್ಲಿ ದೇಶಾದ್ಯಂತ ಮಾಡಲಾದ ಬಂಡವಾಳ ಹೂಡಿಕೆ ಕುರಿತ ವರದಿಯೊಂದನ್ನು ಕೇಂದ್ರ ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಮಂಡಳಿ ಬಿಡುಗಡೆ ಮಾಡಿದೆ.

ಇದರನ್ವಯ 2017ರಲ್ಲಿ 194 ಪ್ರಸ್ತಾಪಗಳೊಂದಿಗೆ ಕರ್ನಾಟಕದಲ್ಲಿ 1.52 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಕಳೆದ ವರ್ಷ ಒಟ್ಟಾರೆ ಮಾಡಲಾದ ಬಂಡವಾಳ ಹೂಡಿಕೆಯಲ್ಲಿ ಶೇ.38.4ರಷ್ಟು ಭಾರೀ ಪಾಲು ಹೊಂದಿದೆ ಎಂದು ಹೇಳಿದೆ.

ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ, ಬಿಜೆಪಿ ಆಡಳಿತದ ಗುಜರಾತ್, ಈ ಪಟ್ಟಿಯಲ್ಲಿ 79,068 ಕೋಟಿ ರು. ಹೂಡಿಕೆಯೊಂದಿಗೆ 2ನೇ ಸ್ಥಾನದಲ್ಲಿದೆ. ಅಂದರೆ ಕರ್ನಾಟಕದಲ್ಲಿ ಆಗಿರುವ ಹೂಡಿಕೆಯ ಅರ್ಧ ಭಾಗದಷ್ಟು ಮಾತ್ರವೇ ಗುಜರಾತ್‌ನಲ್ಲಿ ಬಂಡವಾಳ ಹೂಡಿಕೆ ಮಾಡಲಾಗಿದೆ.

ಉಳಿದಂತೆ ಮಹಾರಾಷ್ಟ್ರದಲ್ಲಿ 48,581 ಕೋಟಿ ರು., ಆಂಧ್ರಪ್ರದೇಶ 29537 ಕೋಟಿ ರು. ಮತ್ತು ತೆಲಂಗಾಣ 16209 ಕೋಟಿ ರು. ಬಂಡವಾಳ ಹೂಡಿಕೆಯಾಗಿದೆ ಎಂದು ವರದಿ ಹೇಳಿದೆ.

2017ರಲ್ಲಿ ದೇಶಾದ್ಯಂತ 1972 ಪ್ರಸ್ತಾವಗಳ ಮೂಲಕ 3.95 ಲಕ್ಷ ಕೋಟಿ ರು.ಬಂಡವಾಳ ಹೂಡಿಕೆ ಮಾಡಲಾಗಿದೆ ಎಂದು ವರದಿ ಹೇಳಿದೆ.

click me!