ರೈತರಿಗೆ ಶುಭ ಸುದ್ದಿ : ರಾಜ್ಯದಲ್ಲಿ ಉತ್ತಮ ಹಿಂಗಾರು ಮಳೆ

By Web DeskFirst Published Oct 3, 2018, 12:02 PM IST
Highlights

ಹಿಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರಿಗೆ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದ್ದು, ರಾಜ್ಯದಲ್ಲಿ ಪ್ರಸಕ್ತ ವರ್ಷದ ಹಿಂಗಾರು (ಈಶಾನ್ಯ ಮುಂಗಾರು) ಸಮೃದ್ಧಿ ತರಲಿದೆ ಎಂದು ತಿಳಿಸಿದೆ.

ಬೆಂಗಳೂರು :  ರಾಜ್ಯದಲ್ಲಿ ಒಟ್ಟಾರೆ ಸುರಿದಿರುವ ಮುಂಗಾರು ಮಳೆ ಉತ್ತಮ ಎಂದು ಪರಿಗಣಿಸಿದರೂ, ರೈತರ ಪಾಲಿಗೆ ಪ್ರಯೋಜನವಾಗಿಲ್ಲ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಇನ್ನು ಹಿಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರಿಗೆ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದ್ದು, ರಾಜ್ಯದಲ್ಲಿ ಪ್ರಸಕ್ತ ವರ್ಷದ ಹಿಂಗಾರು (ಈಶಾನ್ಯ ಮುಂಗಾರು) ಸಮೃದ್ಧಿ ತರಲಿದೆ ಎಂದು ತಿಳಿಸಿದೆ.

ಪೂರ್ವ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾದರೂ ಈ ಅವಧಿಯಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳನ್ನು ಹೊರತುಪಡಿಸಿದರೆ ಒಳನಾಡಿನ ಸುಮಾರು 22 ಜಿಲ್ಲೆಗಳ 86 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿತ್ತನೆ ಮಾಡಿದ ಬೆಳೆ ಮಳೆ ಇಲ್ಲದೇ ಒಣಗಿದ್ದರಿಂದ ಕಂಗಾಲಾದ ಕೃಷಿಕರಿಗೆ ಹಿಂಗಾರು ಮಳೆ ಕೈಹಿಡಿಯುವ ಸಾಧ್ಯತೆ ಕಂಡುಬರುತ್ತಿದೆ.

ಸೆ.29ರಿಂದ ರಾಜಸ್ಥಾನದಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಮಾರುತಗಳು ಆರಂಭವಾಗಿದ್ದು, ಇನ್ನೆರಡು ವಾರದಲ್ಲಿ ರಾಜ್ಯ ಹಾಗೂ ದಕ್ಷಿಣ ಭಾರತ ಪ್ರವೇಶಿಸಲಿವೆ. ದಖನ್‌ ಪ್ರಸ್ಥಭೂಮಿಯ ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಪ್ರಸಕ್ತ ವರ್ಷ ಹಿಂಗಾರು ವಾಡಿಕೆಗಿಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮುಂಗಾರು ಬೆಳೆ ಕೈಕೊಟ್ಟಿದ್ದರಿಂದ ಕಂಗಾಲಾದ ರಾಜ್ಯದ ರೈತರಿಗೆ ಹಿಂಗಾರು ಹೊಸ ಚೈತನ್ಯ ತಂದಂತಾಗಿದೆ.

ಶೇ.3ರಷ್ಟುಕಳೆದ ವರ್ಷ ಕೊರತೆ:  ಹಿಂಗಾರು ಅವಧಿಯಲ್ಲಿ ರಾಜ್ಯದಲ್ಲಿ 188.2 ಮಿ.ಮೀ. ವಾಡಿಕೆ ಮಳೆ ಪ್ರಮಾಣವಾಗಿದೆ. ಈ ವರ್ಷ ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ ಶೇ.89ರಿಂದ 111ರಷ್ಟುಅಂದರೆ 170 ಮಿ.ಮೀ.ಗಳಿಂದ 206 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ರಾಜ್ಯದಲ್ಲಿ ಒಟ್ಟಾರೆ ಶೇ.3ರಷ್ಟು(181.9 ಮಿ.ಮೀ) ಹಿಂಗಾರು ಕೊರತೆ ಕಂಡು ಬಂದಿತ್ತು.

ಬೆಂಗಳೂರು, ಚೆನ್ನೈಗೆ ಕಾದಿದೆಯಾ ಕಂಟಕ?

ಸಣ್ಣ ಮಳೆಗೂ ತತ್ತರಿಸುವ ಬೆಂಗಳೂರಿನಲ್ಲಿ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಶೇ.40ರಷ್ಟುಮಳೆ ಹಿಂಗಾರು ಅವಧಿಯಲ್ಲಿ ಆಗುತ್ತದೆ. ಇದೀಗ ಹವಾಮಾನ ಇಲಾಖೆ ವಾಡಿಕೆಯಂತೆ ಅಥವಾ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜನರಲ್ಲಿ ಆತಂಕದ ಮೂಡಿಸಿದೆ. ಇನ್ನು ತಮಿಳುನಾಡಿನಲ್ಲಿ ಶೇ.112ರಷ್ಟುಮಳೆಯಾಗಲಿದೆ ಎಂದು ಸೂಚನೆ ನೀಡಿರುವುದರಿಂದ ಎರಡೂ ನಗರದಲ್ಲಿ ಪ್ರವಾಹದ ಭೀತಿ ಮೂಡಿದೆ.


ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ದಕ್ಷಿಣ ಭಾರತದ ರಾಜ್ಯದಲ್ಲಿ ವಾಡಿಕೆ ಹಾಗೂ ವಾಡಿಕೆಗಿಂತ ಉತ್ತಮ ಮಳೆಯಾಗಲಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರಿಗೆ ಹಿಂಗಾರು ಮಳೆ ತುಂಬಾ ಅವಶ್ಯಕವಾಗಿದೆ. ಹಿಂಗಾರು ಅವಧಿಯಲ್ಲಿ ಉತ್ತಮ ಮಳೆಯಾದರೆ ಬೇಸಿಗೆ ಅವಧಿಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.

- ಶ್ರೀನಿವಾಸ್‌ ರೆಡ್ಡಿ, ನಿರ್ದೇಶಕರು ಕೆಎಸ್‌ಎನ್‌ಡಿಎಂಸಿ

ರಾಜ್ಯದ ವಾರ್ಷಿಕ ಮಳೆ ವಿವರ

ಪೂರ್ವ ಮುಂಗಾರು- ಶೇ.13ರಷ್ಟು

ಮುಂಗಾರು- ಶೇ.70ರಷ್ಟು

ಹಿಂಗಾರು- ಶೇ.17ರಷ್ಟು

ಯಾವ ಅವಧಿಯಲ್ಲಿ ಎಷ್ಟುಬಿತ್ತನೆ?

ಮುಂಗಾರು- ಶೇ.67ರಷ್ಟು

ಹಿಂಗಾರು -ಶೇ.30ರಷ್ಟು

ಬೇಸಿಗೆ- ಶೇ.3ರಷ್ಟು

ರಾಜ್ಯದ ವಾಡಿಕೆ ಮಳೆ ವಿವರ (ಮಿ.ಮೀ.)

ಪೂರ್ವ ಮುಂಗಾರು- 123

ಮುಂಗಾರು-832.2

ಹಿಂಗಾರು- 188.2

ವಿಶ್ವನಾಥ್ ಮಲೆ ಬೆನ್ನೂರು

click me!