ಉಡುಪಿಗೆ ಬಂದಿದ್ದ ಗಾಂಧೀಜಿ ಕೃಷ್ಣಮಠಕ್ಕೆ ಹೋಗಿರಲಿಲ್ಲ !

Published : Oct 03, 2018, 11:36 AM ISTUpdated : Oct 03, 2018, 11:44 AM IST
ಉಡುಪಿಗೆ ಬಂದಿದ್ದ ಗಾಂಧೀಜಿ ಕೃಷ್ಣಮಠಕ್ಕೆ ಹೋಗಿರಲಿಲ್ಲ !

ಸಾರಾಂಶ

ಉಡುಪಿಗೆ ಭೇಟಿ ನೀಡಿದ್ದ ಬಾಪೂ, ಆಗ ಬಿಹಾರದಲ್ಲಿ ಸಂಭವಿಸಿದ್ದ ಅತೀವೃಷ್ಟಿ ಪೀಡಿತರಿಗಾಗಿ ಧನ ಸಂಗ್ರಹ ಮಾಡಿದ್ದರು. ತಮಗೆ ಬಂದಿದ್ದ ಉಡುಗೊರೆಗಳನ್ನು ಸ್ಥಳದಲ್ಲಿಯೇ ಹರಾಜು ಹಾಕಿದ್ದರು. ಇದರಿಂದ ಒಟ್ಟು 1240 ರು.ಸಂಗ್ರಹವಾಗಿತ್ತು.

-ಸುಭಾಶ್ಟಂದ್ರ ಎಸ್.ವಾಗ್ಳೆ, ಉಡುಪಿ

ಮಹಾತ್ಮಾ ಗಾಂಧೀಜಿ ಅವರು ಉಡುಪಿ ಜಿಲ್ಲೆಗೆ ಬಂದದ್ದು ಕೇವಲ ಒಂದು ಬಾರಿ, ಅದು 1934ರ ಫೆ.25ರಂದು. ಆದರೇ ಅವರು ಕೃಷ್ಣಮಠಕ್ಕೆ ಹೋಗಿರಲಿಲ್ಲ. ಯಾಕೆಂದರೇ ಹರಿಜನರಿಗೆ ಪ್ರವೇಶ ಇಲ್ಲದ ದೇವಾಲಯಗಳಿಗೆ ಅವರು ಹೋಗುತ್ತಿರಲಿಲ್ಲ.   

ಅಂದು ಮಂಗಳೂರಿನಿಂದ ಹೊರಟ ಅವರು ಮಧ್ಯಾಹ್ನ 3.30ಕ್ಕೆ ಉಡುಪಿಗೆ ಆಗಮಿಸಿದ್ದರು, ಆಗ ಇಲ್ಲಿನ ಪಾಂಗಾಳ ಮತ್ತು ಉದ್ಯಾವರ ನದಿಗಳಿಗೆ ಸೇತುವೆಗಳಿರಲಿಲ್ಲ, ನಾಲ್ಕೈದು ದೋಣಿಗಳನ್ನು ಅಕ್ಕಪಕ್ಕ ನಿಲ್ಲಿಸಿ ಅವುಗಳ ಮೇಲೆ ಮರದ ಹಲಗೆಗಳನ್ನು ಹಾಸಿ ಜಂಗಲ್ ನಿರ್ಮಿಸಿ, ಅದರ ಮೇಲೆ ಗಾಂಧೀಜಿ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಹೇರಿ ನದಿಗಳನ್ನು ದಾಟಿಸಲಾಗಿತ್ತು.

ಅವರನ್ನು ಉಡುಪಿಯ ಮಹಾದಾನಿ ಹಾಜಿ ಅಬ್ದುಲ್ಲಾ ಖಾನ್ ಸಾಹೇಬ್ ಅವರು ಬರ ಮಾಡಿಕೊಂಡಿದ್ದರು. ನಂತರ ಗಾಂಧೀಜಿ ಅವರು ಉಡುಪಿನಗರದ ಕಾಡಬೆಟ್ಟು ಎಂಬಲ್ಲಿನ ಖಾದಿ ಭಂಡಾರವೊಂದನ್ನು ಉದ್ಘಾಟಿಸಿದರು.   

ಸಂಜೆ ಅಜ್ಜರಕಾಡು ಮೈದಾನದಲ್ಲಿ ಭಾಷಣ ಮಾಡಿದ ಅವರು, ಬಿಹಾರದಲ್ಲಿ ಆಗ ಸಂಭವಿಸಿದ್ದ ಅತೀವೃಷ್ಟಿ ಪೀಡಿತರಿಗಾಗಿ ಧನ ಸಂಗ್ರಹ ಮಾಡಿದರು, ತಮಗೆ ಬಂದಿದ್ದ ಉಡುಗೊರೆಗಳನ್ನು ಸ್ಥಳದಲ್ಲಿಯೇ ಹರಾಜು ಹಾಕಿದ್ದರು. ಇದರಿಂದ ಒಟ್ಟು 1240 ರು.ಸಂಗ್ರಹವಾಗಿತ್ತು.

ನಂತರ ಭಾಷಣ ಮಾಡುತ್ತಾ, ಉಡುಪಿ ಕೃಷ್ಣ ಮಠದಲ್ಲಿ ಆಗಿನ್ನೂ ಚಾಲ್ತಿಯಲ್ಲಿದ್ದ ದಲಿತರಿಗೆ ಪ್ರವೇಶ ನಿಷಿದ್ಧದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಉಡುಪಿಯ ಬಗ್ಗೆ ನಾನು ಬಹಳ ಕೇಳಿದ್ದೇನೆ, ಇಲ್ಲಿನ ದೇವರು ಬ್ರಾಹ್ಮಣರಿಗೆ ಮುಖ ತಿರುಗಿಸಿ ನಿಂತಿದ್ದಾನೆ. ಕಾರಣ ಅವರು ಹರಿಜನರಿಗೆ ದೇವಾಲಯದೊಳಗೆ ಪ್ರವೇಶ ನೀಡುತ್ತಿಲ್ಲ. ಈ ಬಗ್ಗೆ ಜನಾಭಿಪ್ರಾಯ ಮೂಡಿಸಬೇಕು ಎಂದವರು ಸಾರ್ವಜನಿಕವಾಗಿ ಕರೆ ನೀಡಿದ್ದರು.

ಹರಿಜನರಿಗೆ ದೇವಾಲಯದ ಬಾಗಿಲು ತೆರೆದರೇ ಸಾಲದು, ದೇವಾಲಯಕ್ಕೆ ಹೋಗುವುದಕ್ಕೆ ಅವಕಾಶ ಇರುವವರು ದಲಿತರು ತಮ್ಮೊಂದಿದೆ ದೇವಾಲಯಕ್ಕೆ ಬರಬೇಕು ಎಂಬ ಮನೋಭಾವನೆಯನ್ನು ಹೊಂದಿರಬೇಕು. ಹಾಗಾದಾಗ ಮಾತ್ರ ಅದುವರೆಗೆ ಅವರು ಮಾಡಿದ ತಪ್ಪಿಗೆ ಆತ್ಮಶುದ್ಧಿಯಾಗುತ್ತದೆ ಮತ್ತು ಹರಿಜನರಿಗೆ ಆಗಿರುವ ಅನ್ಯಾಯಕ್ಕೆ  ಪರಿಹಾರ ನೀಡಿದಂತಾಗುತ್ತದೆ ಎಂದವರು ಹೇಳಿದ್ದರು.  

ಉಡುಪಿಯಲ್ಲಾದ ಈ ಬದಲಾವಣೆಯಿಂದ ಹರಿಜನರ ಹೋರಾಟ ಇಮ್ಮಡಿಯಾಗಬೇಕು ಮತ್ತು ಉಡುಪಿ ಇಡೀ ಕರ್ನಾಟಕಕ್ಕೆ ಮಾದರಿಯಾಗಬೇಕು ಎಂದವರು ಆಶಿಸಿದ್ದರು. ಸಭೆ ಮುಗಿದು ಗಾಂಧೀಜಿ ಅವರು ಕಾರಿನಲ್ಲಿ ಕೃಷ್ಣ ಮಠದ ಪಕ್ಕದ ರಸ್ತೆಯಿಂದ ಹಾದು ಹೋದರೂ ಕೃಷ್ಣಮಠಕ್ಕೆ ಭೇಟಿ ನೀಡಲಿಲ್ಲ, ಪಕ್ಕದಲ್ಲಿ ಕುಳಿತಿದ್ದ ಹಾಜಿ ಅಬ್ದುಲ್ಲಾ ಅವರಿಗೆ ಇದೇ ಏನು ಕೃಷ್ಣ ಮಠ ಎಂದು ಕೇಳಿದರು, ಹಾಜಿ ಅಬ್ದುಲ್ಲಾ ಮೌನವಾಗಿ ತಲೆಯಲ್ಲಾಡಿಸಿದ್ದರು ಎಂದು ಹರಿಜನ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. 

ಉಡುಪಿಯಿಂದ ಬ್ರಹ್ಮಾವರಕ್ಕೆ ಬಂದ ಗಾಂಧೀಜಿ  ಅಲ್ಲಿಯೂ ತಮಗೆ ಬಂದ ಉಡುಗೊರೆಯನ್ನು ಹರಾಜು ಹಾಕಿ 312 ರು.ಗಳನ್ನು ಸಂಗ್ಗರಿಸಿದರು, ನಂತರ ಕುಂದಾಪುರದಲ್ಲಿಯೂ ಅಸ್ಪೃಶ್ಯತೆ ಎಂಬ ಪಿಡುಗಿನ ಬಗ್ಗೆ ಸುಧೀರ್ಘ ಭಾಷಣ ಮಾಡಿದ್ದರು. ನಂತರ ತಮಗೆ ಬಂದ ಉಡುಗೊರೆಗಳನ್ನು ಹರಾಜು ಹಾಕಿ 400 ರು.ಗಳನ್ನು ಬಿಹಾರದ ಅತೀವೃಷ್ಟಿ ಪರಿಹಾರ ನಿಧಿಗೆ ಸಂಗ್ರಹಿಸಿದ್ದರು,

ಅಂದು ರಾತ್ರಿ ಕುಂದಾಪುರದ ಶಾಂತಿನಿಕೇತನ ಎಂಬ ಮನೆಯಲ್ಲಿ ಉಳಿದುಕೊಂಡಿದ್ದ ಅವರು, 26ರಂದು ಮುಂಜಾನೆ ಅಲ್ಲಿಯೇ ಬೆಳಿಗ್ಗೆ ಪ್ರಾರ್ಥನಾಸಭೆಯಲ್ಲಿ ಭಾಗವಹಿಸಿದ್ದರು. ಆದರೇ ನಂತರ ಇಡೀ ದಿನ ಮೌನ ವೃತವನ್ನು ಆಚರಿಸಿದರು, ಯಾರೊಂದಿಗೂ ಮಾತನಾಡಿಲಿಲ್ಲ. ಮರುದಿನ 27ರಂದು ಮುಂಜಾನೆ ಕುಂದಾಪುರದಿಂದ ದಯಾವತಿ ಎಂಬ ಉಗಿಹಡಗಿ (ಸ್ಟೀಮರ್)ನಲ್ಲಿ ಕಾರವಾರಕ್ಕೆ ತೆರಳಿದರು.  

ಆ  ಖಾದಿ ಭಂಡಾರವೂ ಇಲ್ಲ, ಅದು ಎಲ್ಲಿತ್ತು ಎನ್ನುವುದೂ ಗೊತ್ತಿಲ್ಲ !

ಉಡುಪಿಗೆ ಬಂದಿದ್ದ ಗಾಂಧೀಜಿ ಕಾಡಬೆಟ್ಟು ವಾರ್ಡಿನಲ್ಲಿ ಖಾದಿ ಭಂಡಾರವನ್ನು ಬೆಳ್ಳಿಯ ಕತ್ತರಿಯಿಂದ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ದರು. ತೆಳುವಾದ ರಿಬ್ಬನ್ ಕತ್ತರಿಸುವುದಕ್ಕೆ ಬೆಳ್ಳಿ ಕತ್ತರಿಯ ಅಗತ್ಯವಿರಲಿಲ್ಲ ಎಂದೂ ತಮ್ಮ ಭಾಷಣದಲ್ಲಿ ಹೇಳಿದ್ದರು. ದುರಾದೃಷ್ಟ ಎಂದರೇ ಇಂದು ಈ ಖಾದಿ ಭಂಡಾರವೂ ಇಲ್ಲ, ಅವರ ಅವಶೇಷವೂ ಇಲ್ಲ, ನಿರ್ಧಿಷ್ಟವಾಗಿ ಎಲ್ಲಿತ್ತು ಎನ್ನುವುದು ಯಾರಿಗೂ ಗೊತ್ತಿಲ್ಲ.

 ಗಾಂಧೀಜಿ ಅವರು ಅಜ್ಜರಕಾಡಿನಲ್ಲಿ ಕುಳಿತು ಭಾಷಣ ಮಾಡಿದ್ದ ವೇದಿಕೆ ಎಲ್ಲಿತ್ತು ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ, ಇಲ್ಲಿರುವ ಭುಜಂಗ ಪಾರ್ಕಿನಲ್ಲಿ ಇತ್ತೀಚೆಗೆ ಗಾಂಧೀಜಿ ಅವರು ಪುತ್ಥಳಿಯನ್ನು ಸ್ಥಾಪಿಸಿ, ಅದನ್ನೇ ಗಾಂಧೀಜಿ ಉಡುಪಿಗೆ ಭೇಟಿ ನೀಡಿದ ಸ್ಮಾರಕವನ್ನಾಗಿಸಲಾಗಿದೆ. 

(ಚಿತ್ರ: ಪಾಂಗಾಳ ಹೊಳೆಯನ್ನು ದಾಟಿದ ದೋಣಿಯಿಂದ ಇಳಿಯುತ್ತಿರುವ ಗಾಂಧೀಜಿ)

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!