ಹಳ್ಳಿಗಳ ರಸ್ತೆ ಕಾಮಗಾರಿ ಸ್ಥಗಿತಕ್ಕೆ ಸರ್ಕಾರ ಆದೇಶ!

Published : Sep 08, 2019, 11:01 AM IST
ಹಳ್ಳಿಗಳ ರಸ್ತೆ ಕಾಮಗಾರಿ ಸ್ಥಗಿತಕ್ಕೆ ಸರ್ಕಾರ ಆದೇಶ!

ಸಾರಾಂಶ

ಹಳ್ಳಿಗಳ ರಸ್ತೆ ಕಾಮಗಾರಿ ಸ್ಥಗಿತಕ್ಕೆ ಆದೇಶ!| ಕಳೆದ ಸರ್ಕಾರ ಕಾಮಗಾರಿಗೆ ನೀಡಿದ್ದ ಆಡಳಿತಾತ್ಮಕ ಒಪ್ಪಿಗೆಗೆ ಬ್ರೇಕ್‌| ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಇಲಾಖೆ ಆದೇಶ

ಬೆಂಗಳೂರು[ಸೆ.08]: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕಳೆದ 2018-19 ಮತ್ತು 2019-20ನೇ ಸಾಲಿನಲ್ಲಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಒಪ್ಪಿಗೆ ನೀಡಿದ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಿ, ಯಥಾಸ್ಥಿತಿ ಕಾಪಾಡುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆದೇಶಿಸಿರುವುದು ಹಲವು ಗುಮಾನಿಗೆ ಕಾರಣವಾಗಿದೆ.

ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ, ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿರುವ ಬಹುತೇಕ ರಸ್ತೆಗಳು 2019ನೇ ಸಾಲಿನ ಜನವರಿಯಿಂದ ಜೂನ್‌ ತಿಂಗಳ ಅವಧಿಯಲ್ಲಿ ‘ವಿಶೇಷ ಮಂಜೂರಾತಿ’ ನೀಡಿ ಆಡಳಿತಾತ್ಮಕ ಆದೇಶ ನೀಡಿದ ರಸ್ತೆಗಳಾಗಿವೆ. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಕೊನೆಯ ಆರು ತಿಂಗಳ ಅವಧಿಯಲ್ಲಿ ಮಂಜೂರಾತಿ ನೀಡಿದ ಕಾಮಗಾರಿಗಳಿಗೆ ಮಾತ್ರ ಈ ಆದೇಶ ಅನ್ವಯವಾಗುತ್ತದೆ. ವಿಶೇಷವೆಂದರೆ ವಿಶೇಷ ಮಂಜೂರಾತಿ ಪಡೆದ ಹೆಚ್ಚಿನ ರಸ್ತೆಗಳು ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ವ್ಯಾಪ್ತಿಗೆ ಸೇರಿವೆ.

ಮೈತ್ರಿ ಪಕ್ಷಗಳ ಕ್ಷೇತ್ರಕ್ಕೆ ಆದ್ಯತೆ:

ಪ್ರಮುಖವಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ಬಾದಾಮಿ, ಆನೇಕಲ್‌, ಚಾಮುಂಡೇಶ್ವರಿ, ವರುಣಾ, ಕನಕಪುರ, ಮಳವಳ್ಳಿ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಅರಕಲಗೂಡು, ಶ್ರವಣಬೆಳಗೊಳ, ಕುಣಿಗಲ್‌, ಗುಬ್ಬಿ, ತುರುವೇಕೆರೆ, ಶಿರಾ, ಬಬಲೇಶ್ವರ, ಮಸ್ಕಿ, ಭಾಲ್ಕಿ, ಗುರುಮಿಟ್ಕಲ್‌, ಸಿಂದಗಿ, ಬೀದರ್‌, ಹುಮನಾಬಾದ್‌, ಜಮಖಂಡಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕೋಲಾರ, ದೊಡ್ಡಬಳ್ಳಾಪುರ, ಬಾಗೇಪಲ್ಲಿ, ಶ್ರೀನಿವಾಸಪುರ, ಬಂಗಾರಪೇಟೆ, ಚಿಂತಾಮಣಿ, ಕುಂದಗೋಳ, ಕಾಗವಾಡ, ಹಿರೇಕೆರೂರು, ದಾವಣಗೆರೆ ಉತ್ತರ ಹಾಗೂ ದಕ್ಷಿಣ, ಮಂಗಳೂರು, ಕಾರ್ಕಳ ಕ್ಷೇತ್ರಗಳ ಗ್ರಾಮೀಣ ರಸ್ತೆಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು.

ಒಂದು ಮೂಲದ ಪ್ರಕಾರ ಬಿಜೆಪಿ ಪ್ರತಿನಿಧಿಸುವ ಕ್ಷೇತ್ರಗಳನ್ನು ಪರಿಗಣಿಸದೇ ಕೇವಲ ಆಯ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಕಾಮಗಾರಿಗೆ ಅನುಮೋದನೆ ನೀಡುವ ಮೂಲಕ ತಾರತಮ್ಯ ಎಸಗಿರುವುದು ಹಾಗೂ ಕೆಲವು ಕಾಮಗಾರಿಗಳನ್ನು ನಿಯಮಬಾಹಿರವಾಗಿ ನೀಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ ಎಂದು ಹೇಳಲಾಗಿದೆ.

ಮತ್ತೊಂದು ಮೂಲದ ಪ್ರಕಾರ ಸದ್ಯ ರಾಜ್ಯದ ಅನೇಕ ಕಡೆಗಳಲ್ಲಿ ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರಿಗೆ ಪರಿಹಾರ ಒದಗಿಸಲು ಈ ಕಾಮಗಾರಿಗಳಿಗೆ ನೀಡಿರುವ ಹಣವನ್ನು ಬಳಸಿಕೊಳ್ಳಲು ಉದ್ದೇಶಿಸಿರಬಹುದು ಅಥವಾ ಈ ಕಾಮಗಾರಿಗಳಿಗೆ ನೀಡಿದ್ದ ಹಣದಿಂದಲೇ ಪ್ರವಾಹ ಪೀಡಿತ ಪ್ರದೇಶಗಳ ಗ್ರಾಮೀಣ ರಸ್ತೆಗಳ ದುರಸ್ತಿ ಇಲ್ಲವೇ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳುತ್ತಿವೆ. ಆದರೆ ಸರ್ಕಾರಿ ವಲಯದಲ್ಲಿ ಇದನ್ನು ಖಚಿತ ಪಡಿಸುತ್ತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ