
ಮೈಸೂರು(ಸೆ. 07): ಸುಪ್ರೀಂಕೋರ್ಟ್ ಆದೇಶದಂತೆ ಕರ್ನಾಟಕ ಸರಕಾರ ತಮಿಳುನಾಡಿಗೆ ನೀರು ಬಿಡಲು ಆರಂಭಿಸಿದೆ. ಇಂದು ಮಧ್ಯರಾತ್ರಿಯಿಂದಲೇ ನೀರು ಹರಿಸಲಾಗುತ್ತಿದೆ. ಒಟ್ಟು 18 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗಿದೆ. ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿದ್ದರೂ ಅಧಿಕಾರಿಗಳು ಮೂರು ಸಾವಿರ ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ಹರಿಸಿದ್ದಾರೆ.
ಕೆಆರ್'ಎಸ್'ನಿಂದ 11 ಸಾವಿರ ಕ್ಯೂಸೆಕ್ಸ್, ಹಾರಂಗಿಯಿಂದ 2 ಸಾವಿರ ಹಾಗೂ ಕಬಿನಿ ಜಲಾಶಯದಿಂದ 5 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗಿದೆ. ಕೆಆರ್'ಎಸ್'ನ 10 ಗೇಟ್'ಗಳ ಮೂಲಕ ಹರಿದಿರುವ ಕಾವೇರಿ ನೀರು ತಮಿಳುನಾಡಿನ ಬಿಳಿಗುಂಡ್ಲುವಿನತ್ತ ಹರಿಯುತ್ತಿದೆ.
ಸದ್ಯದ ಮಟ್ಟಿಗೆ ದಿನವೊಂದಕ್ಕೆ 15 ಸಾವಿರ ಕ್ಯೂಸೆಕ್'ನಂತೆ 10 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯದ ಈ ತೀರ್ಮಾನದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
ಹೆಚ್ಚುವರಿ ನೀರು ಯಾಕೆ?
ಬಿಳಿಗೊಂಡ್ಲು ಇರುವುದು ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿ. ಕರ್ನಾಟಕದಿಂದ ಎಷ್ಟು ನೀರು ಬಿಡಲಾಗಿದೆ ಎಂಬುದನ್ನು ಲೆಕ್ಕ ಹಾಕುವುದು ಇದೇ ಬಿಳಿಗುಂಡ್ಲುವಿನ ಬಳಿಯಲ್ಲೇ. ಕೆಆರ್'ಎಸ್'ನಿಂದ ಬಿಳಿಗುಂಡ್ಲುವರೆಗೆ ಸುಮಾರು 200 ಕಿಮೀ ದೂರದವರೆಗೆ ನೀರು ಹರಿದುಹೋಗಬೇಕು. ಈ ವೇಳೆ ಸಾಕಷ್ಟು ನೀರು ಬಿಸಿಲಿಗೆ ಆವಿಯಾಗುವುದು; ಭೂಮಿಗೆ ಹಿಂಗುವುದು, ಅಲ್ಲಲ್ಲಿ ಗ್ರಾಮಸ್ಥರ ಬಳಕೆಗೆ ವ್ಯಯವಾಗುತ್ತದೆ. ಹೀಗಾಗಿ, ನಿಗದಿಗಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡುವುದು ಅನಿವಾರ್ಯವಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.