ಮಾಜಿ ರೈಲ್ವೇ ಸಚಿವ ಜಾಫರ್ ಷರೀಫ್ ಇನ್ನಿಲ್ಲ

By Web DeskFirst Published Nov 25, 2018, 12:52 PM IST
Highlights

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಶರೀಫ್ ಚಿಕಿತ್ಸೆ ಫಲಕಾರಿಯಾಗದೆ ನಗರದ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಂಗಳೂರು[ನ.25]: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ರೈಲ್ವೇ ಸಚಿವ ಜಾಫರ್ ಷರೀಫ್ ಭಾನುವಾರ ಅಸು ನೀಗಿದ್ದು, ನವೆಂಬರ್ ಕರುನಾಡಿಗೆ ಅಕ್ಷರಶಃ ಸಾವಿನ ಸನ್ನಿ ತಂದಿದೆ. ಷರೀಫ್ ಅವರಿಗೆ 85 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಾಯಕ ವಿಧಿವಶರಾಗಿದ್ದಾರೆ.

ಶುಕ್ರವಾರ ಮಧ್ಯಾಹ್ನ ನಮಾಝ್‌ಗೆ ತೆರಳಲು ಕೋಲ್ಸ್‌ಪಾರ್ಕ್ ಸಮೀಪದ ತಮ್ಮ ನಿವಾಸದಲ್ಲಿ ಸಿದ್ಧವಾಗುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದರು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಕೂಡಲೇ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಉಸಿರಾಟದ ಸಮಸ್ಯೆ ಹೆಚ್ಚಾಗಿರುವ ಕಾರಣ ಅವರನ್ನು ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ.

1933ರ ನವೆಂಬರ್ ನಲ್ಲಿ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜನಿಸಿದ್ದ ಸಿ. ಕೆ. ಜಾಫರ್ ಷರೀಫ್, ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವಧಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾ ಗಾಂಧಿ ಬಣ ಸೇರಿದ ಅವರು, ಇಂದಿರಾ ಗಾಂಧಿ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರು.  ಬಳಿಕ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದ ಷರೀಫ್ 1991ರಿಂದ 1995 ರವರೆಗೆ ದಿವಂಗತ ಪ್ರಧಾನಿ ಪಿ. ವಿ. ನರಸಿಂಹರಾವ್ ಸಂಪುಟದಲ್ಲಿ ರೈಲ್ವೇ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ರೈಲ್ವೇ ಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ರೈಲ್ವೇ ಗೇಜ್ ಪರಿವರ್ತನೆ ಹೆಗ್ಗಳಿಕೆ ಹಾಗೂ ಎಲ್ಲಾ ಬಗೆಯ ಗೇಜ್‌ಗಳನ್ನು ಬ್ರಾಡ್ ಗೇಜ್‌ಗೆ ಪರಿವರ್ತಿಸಿದ ಹೆಗ್ಗಳಿಕೆ ಜಾಫರ್ ಷರೀಫ್ ಅವರಿಗೆ ಸಲ್ಲುತ್ತದೆ.

ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಜೊತೆ ಕೆಲಸ ಮಾಡಿರುವ ಷರೀಫ್ ಸಂಸದರಾಗಿ ಅತೀ ಹೆಚ್ಚು ಅನುದಾನ ಬಳಕೆ ಮಾಡಿದ ದಾಖಲೆ ನಿರ್ಮಿಸಿದ್ದಾರೆ. ಸಂಸದರ ಅನುದಾನದಲ್ಲಿ ಶಾಲೆ, ಕಾಲೇಜು, ಕಂಪ್ಯೂಟರ್ ಶಿಕ್ಷಣ ಅಭಿವೃದ್ಧಿಪಡಿಸಿದ ನಾಯಕ ಎಂಬ ಶ್ರೇಯಸ್ಸು ಕೂಡಾ ಇವರಿಗೆ ಸಲ್ಲುತ್ತದೆ. ಆದರೆ 1999 ರಲ್ಲಿ ಕಿರಿಯ ಪುತ್ರ, 2008ರಲ್ಲಿ ಪತ್ನಿಯನ್ನು ಕಳೆದುಕೊಂಡ ಜಾಫರ್ ಷರೀಫ್  2009ರಲ್ಲಿ ಲೋಕಸಭೆ ಚುನಾವಣೆಗೆ 3 ದಿನ ಬಾಕಿ ಇರುವಾಗಲೇ ಹಿರಿಯ ಪುತ್ರನನ್ನು ಕಳೆದುಕೊಂಡಿದ್ದರು.

ರಾಜ್ಯ ಕಾಂಗ್ರೆಸ್‌ನ ಮುಸ್ಲಿಂ ನಾಯಕರಲ್ಲಿ  ಅಗ್ರಗಣ್ಯರಾಗಿದ್ದ ಸಿ.ಕೆ. ಜಾಫರ್ ಷರೀಫ್, ರಾಜ್ಯ ರಾಜಕೀಯದಲ್ಲೂ ಅತ್ಯಂತ ಪ್ರಭಾವೀ ನಾಯಕರಾಗಿದ್ದರು. ಎಲ್ಲಾ ಪಕ್ಷಗಳ ನಾಯಕರೊಂದಿಗೆ ಬಾಂಧವ್ಯ ಹೊಂದಿದ್ದ ಅಪರೂಪದ ನಾಯಕ ಇಂದು ಇಹಲೋಕ ತ್ಯಜಿಸಿದ್ದಾರೆ. ಈಗಾಗಲೇ ಕೆಂದ್ರ ಸಚಿವ, ಕರ್ನಾಟಕದ ಬಿಜೆಪಿ ನಾಯಕ ಅನಂತ್ ಕುಮಾರ್ ಹಾಗೂ ಸ್ಯಾಂಟಲ್‌ವುಡ್ ನಟ, ಕಾಂಗ್ರೆಸ್ ನಾಯಕ ಅಂಬರೀಶ್ ಸಾವಿನ ದುಃಖದಲ್ಲಿರುವ ಕರುನಾಡಿಗೆ ಷರೀಫ್ ನಿಧನದ ಸುದ್ದಿ ಮತ್ತಷ್ಟು ನೋವು ನೀಡಿದೆ.

click me!