
ಬೆಂಗಳೂರು : ಭತ್ತದ ಬೆಲೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿ ಕ್ವಿಂಟಲ್‌ಗೆ 1750 ರು.ನಂತೆ ಬೆಂಬಲ ಬೆಲೆ ನೀಡಿ ಡಿ.16ರಿಂದ ರಾಜ್ಯ ಸರ್ಕಾರ ಖರೀದಿಸಲು ನಿರ್ಧರಿಸಿದೆ. ಡಿ.5ರಿಂದ 15ರವರೆಗೆ ರೈತರ ನೋಂದಣಿ ಕಾರ್ಯ ನಡೆಯಲಿದ್ದು, ಡಿ.16ರಿಂದ ಎಲ್ಲ ಖರೀದಿ ಕೇಂದ್ರಗಳಲ್ಲಿ ಭತ್ತ ಖರೀದಿ ಆರಂಭವಾಗಲಿದೆ.
ಶನಿವಾರ ವಿಧಾನಸೌಧದಲ್ಲಿ ನಡೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿತದ ಸಂದರ್ಭದಲ್ಲಿ ಬೆಂಬಲ ಬೆಲೆ ನಿಗದಿಗೊಳಿಸುವ ಸಂಬಂಧ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಈ ಬಾರಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು, ಅಂದಾಜು 45 ಲಕ್ಷ ಮೆಟ್ರಿಕ್ ಟನ್ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಭತ್ತದ ಬೆಲೆ 1300-1400 ರು.ವರೆಗೆ ಇದೆ. ಕೇಂದ್ರ ಸರ್ಕಾರ ಎರಡು ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಸಮ್ಮತಿ ನೀಡಿದ್ದು, ಜನವರಿಯಿಂದ ಖರೀದಿಸುವಂತೆ ತಿಳಿಸಿದೆ, ಆದರೆ ಇಳುವರಿ ಬೇಗ ಬಂದಿರುವುದರಿಂದ ಖರೀದಿಯನ್ನು ಮೊದಲೇ ಆರಂಭಿಸಲು ಉದ್ದೇಶಿಸಲಾಗಿದೆ. ಭತ್ತ ಖರೀದಿ ಪ್ರಮಾಣವನ್ನು ಇನ್ನಷ್ಟುಹೆಚ್ಚಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಗಿರಣಿಯಿಂದಲೇ ಪೂರೈಕೆ:
ಈವರೆಗೆ ಖರೀದಿಸಿದ ಭತ್ತವನ್ನು ಗೋದಾಮಿನಲ್ಲಿ ಸಂಗ್ರಹಿಸಿಟ್ಟುಕೊಂಡು ನಂತರ ಮಿಲ್‌ಗಳಿಗೆ ಕಳಿಸಿ ಅಕ್ಕಿ ಮಾಡಿ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿತ್ತು.ಈ ವರ್ಷದಿಂದ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಭತ್ತವನ್ನು ಖರೀದಿಸಿ ನೇರವಾಗಿ ಮಿಲ್‌ಗಳಿಗೆ ಕಳಿಸಿ ಅಕ್ಕಿ ಮಾಡಿಸಿ ನಂತರ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲಾಗುವುದು ಎಂದು ಸಚಿವ ಬಂಡೆಪ್ಪ ಕಾಶಂಪುರ ತಿಳಿಸಿದರು.
ಡಿಸೆಂಬರ್‌ನಿಂದ ತೊಗರಿ ಖರೀದಿ:
ರಾಜ್ಯದಲ್ಲಿ ಈ ಬಾರಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದ್ದು, ಸುಮಾರು 11.34 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಹೊಂದಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ತೊಗರಿ ಪ್ರತಿ ಕ್ವಿಂಟಲ್‌ಗೆ 4300 ರು.ಗಳಿಂದ 5575 ರು.ಗಳಿಗೆ ಖರೀದಿಸಲಾಗುವುದು, ಈ ಸಂಬಂಧ ಕೇಂದ್ರಕ್ಕೆ ಈಗಾಗಲೇ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೆಸರು ಖರೀದಿ: ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಈಗಾಗಲೇ ಆರಂಭವಾಗಿದೆ. ಈಗಾಗಲೇ ಸುಮಾರು 28 ಸಾವಿರ ಮೆಟ್ರಿಕ್ ಟನ್ ಹೆಸರು ಖರೀದಿಸಲಾಗಿದೆ. ರೈತರ ಬಳಿ ಇನ್ನೂ ಹೆಚ್ಚಿನ ಪ್ರಮಾಣದ ಹೆಸರು ಇರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಸಂಬಂಧ ಅದನ್ನು ಖರೀದಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲು ನ. 28 ರಂದು ದೆಹಲಿಗೆ ತೆರಳುವುದಾಗಿ ಅವರು ಹೇಳಿದರು.
ನಾಳೆಯಿಂದ ಸೋಯಾ, ಉದ್ದು ಖರೀದಿ: ಬೆಲೆ ಕುಸಿತವಾಗಿರುವ ಸೋಯಾ ಮತ್ತು ಉದ್ದು ಖರೀದಿಗೆ ನಿರ್ಧರಿಸಿದ್ದರೂ, ಕೇವಲ 50-60 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮುಗಿದಿದ್ದು, ಭಾನುವಾರದಿಂದಲೇ ಖರೀದಿ ಆರಂಭಿಸಲಾಗುವುದು ಉದ್ದು ಪ್ರತಿ ಕ್ವಿಂಟಲ್‌ಗೆ 5600 ರು. ಹಾಗೂ ಸೋಯಾ ಪ್ರತಿ ಕ್ವಿಂಟಲ್‌ಗೆ 3399 ರು. ಇದೆ ಹಾಗಾಗಿ ಇನ್ನೂ 10 ದಿನಗಳ ಕಾಲ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮೂಲಕ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ಈಗಾಗಲೇ ಸೂಚನೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ