ಹಿಂದಿ ಹೇರಿಕೆ ಮಾತ್ರವಲ್ಲ ತ್ರಿಭಾಷಾ ಸೂತ್ರವೂ ತೊಲಗಲಿ

By Web Desk  |  First Published Jun 6, 2019, 1:24 PM IST

ದೇಶದೆಲ್ಲೆಡೆ ಏಕ ಶಿಕ್ಷಣ ನೀತಿ ಜಾರಿಗೊಳಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ. ಅಲ್ಲದೇ ತ್ರಿ ಭಾಷಾ ಸೂತ್ರ ಅಳವಡಿಸಲು ಉತ್ಸುಕವಾಗಿದ್ದು, ತಮಿಳು ನಾಡು, ಪಶ್ಚಿಮ ಬಂಗಾಳ, ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಕೇಂದ್ರ ಸರ್ಕಾರ ಯುಟರ್ನ್ ಹೊಡೆದಿದೆ. 


ಹಿಂದಿಯೇತರ ರಾಜ್ಯಗಳ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ವಿವಾದಾತ್ಮಕ ಅಂಶವನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರಸ್ತಾಪದಿಂದ ಕೊನೆಗೂ ತೆಗೆದುಹಾಕಲಾಗಿದೆ.

ಇಡೀ ದೇಶವನ್ನು ಹಿಂದಿಮಯವಾಗಿಸುವ ಹಿಂದಿ ಸಾಮ್ರಾಜ್ಯಶಾಹಿಗೆ ಇದು ಒಂದು ಸಣ್ಣ ಹಿನ್ನಡೆಯಷ್ಟೆ. ಆದರೆ ಹಿಂದಿ ಭೂತ ನಮ್ಮನ್ನು ಪೂರ್ಣವಾಗಿ ಆವರಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಿಲ್ಲ. ವಾಸ್ತವದಲ್ಲಿ ನಾವು ಧಿಕ್ಕರಿಸಬೇಕಿರುವುದು ಇಡೀ ತ್ರಿಭಾಷಾ ಸೂತ್ರವನ್ನೇ. ಅದು ತೊಲಗದ ಹೊರತು ದೇಶೀಯ ಭಾಷೆಗಳಿಗೆ ಉಳಿಗಾಲವಿಲ್ಲ.

Tap to resize

Latest Videos

undefined

ಹಿಂದಿ ಹೇರಿಕೆ: ತಮಿಳುನಾಡು ಬಳಿಕ ಪ.ಬಂಗಾಳದ ವಿರೋಧ!

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಪ್ರಕಟಿಸಿದ್ದ ಹೊಸ ಶಿಕ್ಷಣ ನೀತಿಯ ಕರಡು ಪ್ರಕಟವಾಗುತ್ತಿದ್ದಂತೇ ದೇಶದ ಹಲವಾರು ರಾಜ್ಯಗಳಲ್ಲಿ ಪ್ರತಿರೋಧದ ಧ್ವನಿಗಳು ಕೇಳಿಬಂದವು. ಪ್ರಧಾನವಾಗಿ ಬಂಡಾಯದ ಕಹಳೆ ಮೊಳಗಿದ್ದು ತಮಿಳುನಾಡಿನಲ್ಲಿ.

ಮೊದಲಿನಿಂದಲೂ ಹಿಂದಿಹೇರಿಕೆ ವಿರೋಧಿ ಚಳವಳಿಯಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ. ಅರವತ್ತರ ದಶಕದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರವನ್ನು ಹೇರುವ ಕೇಂದ್ರ ಸರ್ಕಾರದ ಪ್ರಯತ್ನಗಳು ವಿಫಲವಾಗಿದ್ದವು. ಆದರೆ ಕರ್ನಾಟಕವೂ ಸೇರಿದಂತೆ ಇತರ ಹಿಂದಿಯೇತರ ರಾಜ್ಯಗಳು ಈ ತ್ರಿಭಾಷಾ ಸೂತ್ರವನ್ನು ಒಳಗೆ ಬಿಟ್ಟುಕೊಂಡವು. ಅದರ ಪರಿಣಾಮವನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ.

ಹಾಗೆ ನೋಡಿದರೆ ಈಗಾಗಲೇ ಕಡ್ಡಾಯವಲ್ಲದಿದ್ದರೂ ಒಂದು ಭಾಷೆಯಾಗಿ ನಮ್ಮ ರಾಜ್ಯದಲ್ಲಿ ಹಿಂದಿ ಕಲಿಕೆಯಾಗುತ್ತಿದೆ. ಕನ್ನಡದ ಮಕ್ಕಳೇ ಪ್ರಥಮ ಭಾಷೆಯಾಗಿ ಸಂಸ್ಕೃತ, ದ್ವಿತೀಯ ಭಾಷೆಯಾಗಿ ಇಂಗ್ಲಿಷ್‌ ಮತ್ತು ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಯುತ್ತಿರುವ ದುರಂತವೂ ನಡೆಯುತ್ತಿದೆ. ಸಂಸ್ಕೃತ ವಿದ್ಯಾರ್ಥಿಗಳಿಗೆ ಪೂರ್ಣ ಅಂಕಗಳನ್ನು (ನೂರಕ್ಕೆ ನೂರು) ಕೊಡುವ ಆಮಿಷದ ಮೂಲಕ ಹೆಚ್ಚು ವಿದ್ಯಾರ್ಥಿಗಳು ಸಂಸ್ಕೃತವನ್ನು ಪ್ರಥಮ ಭಾಷೆಯನ್ನಾಗಿ ತೆಗೆದುಕೊಳ್ಳುವಂತೆ ಉತ್ತೇಜಿಸಲಾಗುತ್ತಿದೆ.

ಕೇಂದ್ರದಿಂದ ಹಿಂದಿ ಹೇರಿಕೆ; ದಕ್ಷಿಣ ರಾಜ್ಯಗಳಲ್ಲಿ ಭಾರೀ ವಿರೋಧ

ಹಿಂದಿ ಅಪಾಯ ಅರಿಯದೇ ಹೋದೆವು

ತಮಿಳುನಾಡಿನ ಜನರಿಗೆ ಈ ಅಪಾಯಗಳ ಅರಿವು ಮೊದಲೇ ಇತ್ತು. ಹೀಗಾಗಿಯೇ ಅವರು ಹಿಂದಿ ಸಾಮ್ರಾಜ್ಯಶಾಹಿಗಳ ಕುತಂತ್ರಗಳು ಫಲಿಸಲು ಅವಕಾಶ ನೀಡಲಿಲ್ಲ. ಆದರೆ ಇತರ ಹಿಂದಿಯೇತರ ರಾಜ್ಯಗಳು ಈ ಅಪಾಯವನ್ನು ಗ್ರಹಿಸದೇ ಹೋದವು. ಕರ್ನಾಟಕ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ಬಂದಾಗಿನಿಂದ ಒಕ್ಕೂಟ ಸರ್ಕಾರದ ಹಿಂದಿ ಹೇರಿಕೆಯನ್ನು ಬೇರೆ ಬೇರೆ ಹಂತಗಳಲ್ಲಿ ವಿರೋಧಿಸುತ್ತ, ಜನಜಾಗೃತಿಯನ್ನು ಮೂಡಿಸುತ್ತಾ ಬಂದಿದೆ.

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆಯ ಬಳಕೆಯನ್ನು ವಿರೋಧಿಸುವ ಐತಿಹಾಸಿಕ ಹೋರಾಟವನ್ನು ನಾವು ದಾಖಲಿಸಿದೆವು. ನಮ್ಮ ಶಾಂತಿಯುತ ಪ್ರತಿಭಟನೆಗಳಿಗೆ ಕೇಂದ್ರ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಮಣಿಯದೇ ಹೋದಾಗ ನಾವು ಪ್ರತಿಭಟನೆಯ ಸ್ವರೂಪವನ್ನು ಅನಿವಾರ್ಯವಾಗಿ ಬದಲಿಸಬೇಕಾಯಿತು.

ನಮ್ಮ ಮೆಟ್ರೋದ ಬಹುತೇಕ ಎಲ್ಲ ನಿಲ್ದಾಣಗಳಲ್ಲೂ ನಮ್ಮ ವೇದಿಕೆ ಕಾರ್ಯಕರ್ತರು ಏಕಕಾಲಕ್ಕೆ ತೆರಳಿ ಹಿಂದಿ ನಾಮಫಲಕಗಳನ್ನು ಬಲವಂತವಾಗಿ ತೆರವುಗೊಳಿಸಿದರು. ಇದಾದ ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ‘ನಮ್ಮ ಮೆಟ್ರೋ’ದಲ್ಲಿ ಹಿಂದಿ ಬಳಸಲು ಸಾಧ್ಯವಿಲ್ಲ ಎಂದು ಸ್ಪಷ್ಟಶಬ್ದಗಳಲ್ಲಿ ಹೇಳಬೇಕಾಯಿತು.

ಕರವೇಯಿಂದ ನಿರಂತರ ಜಾಗೃತಿ

ನೈಋುತ್ಯ ರೇಲ್ವೆ ವಲಯದ ಸಿ ಮತ್ತು ಡಿ ದರ್ಜೆಯ ನಾಲ್ಕು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಹಿಂದಿ ರಾಜ್ಯಗಳ ನಿರುದ್ಯೋಗಿಗಳಿಗೆ ನೀಡುವ ರಹಸ್ಯ ಕಾರ್ಯಸೂಚಿಯನ್ನಿಟ್ಟುಕೊಂಡು ಇಲಾಖೆ ಪರೀಕ್ಷೆಗಳನ್ನು ನಡೆಸುತ್ತಿದ್ದಾಗಲೂ ಕರ್ನಾಟಕ ರಕ್ಷಣಾ ವೇದಿಕೆ ಪ್ರಬಲ ಹೋರಾಟ ಸಂಘಟಿಸಿತ್ತು. ಚಳವಳಿ ಹಿಂಸಾತ್ಮಕ ಸ್ವರೂಪ ತಳೆದ ನಂತರ ಕೇಂದ್ರ ಸರ್ಕಾರ ನೇಮಕಾತಿ ಸ್ಥಗಿತಗೊಳಿಸಿತ್ತು. ನಂತರ ಮಮತಾ ಬ್ಯಾನರ್ಜಿ ರೈಲ್ವೆ ಸಚಿವರಾಗಿದ್ದಾಗ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿದರು.

ಅಲ್ಲದೆ ದೇಶವ್ಯಾಪಿ ಒಂದೇ ಸಮಯದಲ್ಲಿ ಪರೀಕ್ಷೆಗಳನ್ನು ನಡೆಸುವ ನಿಯಮ ಜಾರಿಗೆ ತಂದರು. ಆನಂತರ ರೈಲ್ವೆ ಉದ್ಯೋಗಗಳು ಕನ್ನಡಿಗರ ಪಾಲಿಗೆ ಲಭ್ಯವಾದವು. ಪ್ರತಿ ವರ್ಷ ಕೇಂದ್ರ ಸರ್ಕಾರಿ ಮತ್ತು ಕೇಂದ್ರ ಸರ್ಕಾರದ ಅನುದಾನಿತ ಸಂಸ್ಥೆಗಳಲ್ಲಿ ಹಿಂದಿ ದಿವಸ್‌, ಹಿಂದಿ ಸಪ್ತಾಹ್‌, ಹಿಂದಿ ಪಕ್ವಾಡಾ ಹೆಸರುಗಳಲ್ಲಿ ಕನ್ನಡಿಗರ ಮೇಲೆ ಹಿಂದಿಹೇರುವ ಕಾರ್ಯಕ್ರಮಗಳನ್ನು ಸತತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳಿನಲ್ಲಿ ಹಿಂದಿಹೇರಿಕೆ ವಿರುದ್ಧ ಜನಜಾಗೃತಿ ಕಾರ್ಯಕ್ರಮಗಳು ಮತ್ತು ಹೋರಾಟಗಳನ್ನು ಸಂಘಟಿಸುತ್ತ ಬಂದಿದೆ.

ಹಿಂದಿ ಸಾಮ್ರಾಜ್ಯಶಾಹಿ ಅಪಾಯ ತಪ್ಪಿದ್ದಲ್ಲ

ಈ ಬಾರಿ ಕೇಂದ್ರ ಸರ್ಕಾರ ಶಿಕ್ಷಣ ನೀತಿಯ ಕರಡನ್ನು ಪ್ರಕಟಿಸಿದಾಗ ಎಲ್ಲ ಹಿಂದಿಯೇತರ ರಾಜ್ಯಗಳಲ್ಲೂ ವಿರೋಧ ವ್ಯಕ್ತವಾಯಿತು. ಕರ್ನಾಟಕದಲ್ಲಿ ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರೇ ಇದನ್ನು ವಿರೋಧಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಆದಿಯಾಗಿ ಹಲವರು ಧ್ವನಿ ಎತ್ತಿದರು.

ಆದರೆ ಹಿಂದಿ ಹೇರಿಕೆಯ ಹಿಡನ್‌ ಅಜೆಂಡಾದ ದಾಳವಾಗಿರುವ ಕೆಲ ಸಂಸದರು ಕರಡನ್ನು ಸಮರ್ಥಿಸಿಕೊಳ್ಳುವ ವಿಫಲ ಯತ್ನ ನಡೆಸಿದರು. ಈಗ ಸದ್ಯಕ್ಕೆ ಕರಡು ಪ್ರಸ್ತಾಪದಿಂದ ಹಿಂದಿ ಕಡ್ಡಾಯದ ಅಂಶವನ್ನೇನೋ ತೆಗೆದಿರಬಹುದು. ಆದರೆ ಅಪಾಯ ತಪ್ಪಿದ್ದಲ್ಲ. ಒಂದಲ್ಲ ಒಂದು ರೂಪದಲ್ಲಿ ಹಿಂದಿಯನ್ನು ಹೇರುವ ಪ್ರಯತ್ನವನ್ನು ಹಿಂದಿ ಸಾಮ್ರಾಜ್ಯಶಾಹಿ ಜಾರಿಯಲ್ಲಿಟ್ಟಿರುತ್ತದೆ. ಇದರಿಂದಾಗಿಯೇ ರಾಷ್ಟ್ರಕವಿ ಕುವೆಂಪು ಹಿಂದಿ ಹೇರಿಕೆಯನ್ನು ಬಲವಾಗಿ ಖಂಡಿಸಿದ್ದರು.

ಬಹಳ ಜನರು ಈಗಲೂ ನಂಬಿಕೊಂಡಿರುವಂತೆ ಹಿಂದಿ ಈ ದೇಶದ ರಾಷ್ಟ್ರಭಾಷೆಯಲ್ಲ. ಈ ದೇಶಕ್ಕೆ ರಾಷ್ಟ್ರಭಾಷೆ ಎಂಬುದೊಂದು ಇಲ್ಲ. ಸಂವಿಧಾನದಲ್ಲಿ ರಾಷ್ಟ್ರಭಾಷೆಯ ಪ್ರಸ್ತಾಪವೇ ಇಲ್ಲ. ಆದರೆ ಹಿಂದಿ ನಮ್ಮ ರಾಷ್ಟ್ರಭಾಷೆ ಎಂಬ ಮಿಥ್ಯೆಯನ್ನು ಬಲವಂತವಾಗಿ ಜನರಲ್ಲಿ ತುಂಬಲಾಗುತ್ತಿದೆ. ಅದರ ಮೂಲಕವೇ ಹಿಂದಿಯನ್ನು ಬಲವಂತವಾಗಿ ನಮ್ಮ ಗಂಟಲಿಗೆ ತುರುಕಲಾಗುತ್ತಿದೆ.

ಬಹುತ್ವವನ್ನು ಒಕ್ಕೂಟ ಸರ್ಕಾರ ಗೌರವಿಸಲಿ

ನಮ್ಮದು ಒಕ್ಕೂಟ ರಾಷ್ಟ್ರ. ಭಾರತ ಒಂದು ಒಕ್ಕೂಟವಾಗಿ ಸಫಲವಾಗಲು ಎಲ್ಲ ರಾಜ್ಯಗಳ ಕೊಡುಗೆಯೂ ಬೇಕು. ಬಹುತ್ವ ಈ ಒಕ್ಕೂಟದ ಮೂಲಭೂತ ಲಕ್ಷಣ. ಆಯಾ ರಾಜ್ಯದ ಭಾಷೆ, ಸಂಸ್ಕೃತಿ, ಇತಿಹಾಸ, ಪರಂಪರೆಗಳನ್ನು ಒಕ್ಕೂಟ ಸರ್ಕಾರ ಗೌರವಿಸಬೇಕು ಮತ್ತು ರಕ್ಷಿಸಬೇಕು. ಅದನ್ನು ಬಿಟ್ಟು ಒಂದು ಭಾಷೆಯನ್ನು ಎಲ್ಲ ರಾಜ್ಯಗಳ ಜನರ ಮೇಲೆ ಹೇರುತ್ತಾ ಹೋದರೆ ಅದು ಒಕ್ಕೂಟದ ಸಾರ್ವಭೌಮತೆಗೆ ಧಕ್ಕೆ ತಂದಂತಾಗುತ್ತದೆ.

ತಮಿಳುನಾಡಿನ ರಾಜಕಾರಣಿಗಳು ಹಿಂದಿಯನ್ನು ನಮ್ಮ ಮೇಲೆ ಹೇರಿದರೆ ಪ್ರತ್ಯೇಕ ರಾಷ್ಟ್ರದ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿರುವುದನ್ನು ಒಕ್ಕೂಟ ಸರ್ಕಾರ ಮನಗಾಣಬೇಕಾಗಿದೆ. ಇಂಥದ್ದೇ ಕೂಗು ನಾಳೆ ಎಲ್ಲ ಹಿಂದಿಯೇತರ ರಾಜ್ಯಗಳಿಂದ ಮೊಳಗಿದರೆ ಆಶ್ಚರ್ಯವೇನೂ ಇಲ್ಲ. ಉರ್ದು ಭಾಷೆಯನ್ನು ಬಂಗಾಳಿಗಳ ಮೇಲೆ ಹೇರಿದ ಪರಿಣಾಮವಾಗಿಯೇ ಬಾಂಗ್ಲಾದೇಶವನ್ನು (ಅಂದಿನ ಪೂರ್ವ ಪಾಕಿಸ್ತಾನ) ಪಾಕಿಸ್ತಾನ ಕಳೆದುಕೊಳ್ಳಬೇಕಾಯಿತು ಎಂಬುದನ್ನು ದಿಲ್ಲಿಯಿಂದ ಆದೇಶಗಳನ್ನು ಹೇರುವವರು ಮನಗಾಣಬೇಕು.

ಕೇಂದ್ರ ಸರ್ಕಾರ ಎಲ್ಲದರಲ್ಲೂ ಏಕತ್ವವನ್ನು ತರಲು ಹೋದರೆ ಈ ದೇಶ ಹರಿದು ಚೂರಾಗಿ ಹೋಗುತ್ತದೆ. ಎರಡನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಈ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ರಾಜ್ಯದ ಭಾಷೆ-ಸಂಸ್ಕೃತಿಗಳ ಮೇಲಿನ ಸರ್ಕಾರಿ ದಾಳಿಗಳನ್ನು ಅವರು ತಡೆಯಲೇಬೇಕು. ಇಲ್ಲವಾದಲ್ಲಿ ಪ್ರತಿರೋಧದ ಸ್ವರೂಪವೂ ಗಂಭೀರವಾಗಿಯೇ ಇರುತ್ತದೆ.

22 ಭಾಷೆಗಳಿಗೂ ಬೇಕು ಅಧಿಕೃತ ಸ್ಥಾನಮಾನ

ಕರ್ನಾಟಕ ರಕ್ಷಣಾ ವೇದಿಕೆ ಹಿಂದಿಯೇತರ ರಾಜ್ಯಗಳ ಭಾಷಾ ಹೋರಾಟಗಾರರನ್ನು ಬೆಂಗಳೂರಿಗೆ ಕರೆಯಿಸಿ ದುಂಡುಮೇಜಿನ ಸಭೆಯನ್ನು ನಡೆಸಿತ್ತು. ಮುಂಬರುವ ದಿನಗಳಲ್ಲಿ ಹಿಂದಿಯೇತರ ರಾಜ್ಯಗಳ ಸ್ವಾಭಿಮಾನಿ ರಾಜಕೀಯ ನಾಯಕರನ್ನು ಆಹ್ವಾನಿಸಿ ಮತ್ತೊಂದು ದುಂಡುಮೇಜಿನ ಸಭೆ ನಡೆಸಲಿದೆ.

ನಮ್ಮ ಗುರಿ ಸಂಪೂರ್ಣವಾಗಿ ತ್ರಿಭಾಷಾ ನೀತಿಯನ್ನು ಧಿಕ್ಕರಿಸುವುದು ಹಾಗೂ ಸಂವಿಧಾನದ 8ನೇ ಪರಿಚ್ಛೇದದಲ್ಲಿ ದಾಖಲಾಗಿರುವ ಎಲ್ಲ 22 ಭಾಷೆಗಳಿಗೂ ಅಧಿಕೃತ ಭಾಷೆಯ ಸ್ಥಾನಮಾನ (ಈಗ ಅದು ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳಿಗೆ ಮಾತ್ರ ಇದೆ) ದೊರೆಯುವಂತೆ ಒತ್ತಾಯಿಸುವುದು.

ಒಟ್ಟಾರೆ ದೇಶದಲ್ಲಿ ಭಾಷಾ ಸಮಾನತೆಯನ್ನು ಜಾರಿಗೆ ತರುವುದು ನಮ್ಮ ಉದ್ದೇಶ. ಒಕ್ಕೂಟ ಸರ್ಕಾರ ಹಿಂದಿಯೇತರ ರಾಜ್ಯಗಳ ನಾಗರಿಕರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ಕಾಣುವುದನ್ನು ಮುಂದುವರೆಸಿದರೆ ಈ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟವೇ ನಡೆಯಬೇಕಾದೀತು. 

- ಟಿ ಎ ನಾರಾಯಣ ಗೌಡ, ಕರ್ನಾಟಕ ರಕ್ಷಣಾ ವೇದಿಕೆ 

click me!