ವಿಧಾನಸೌಧದಲ್ಲಿ ಬಿಜೆಪಿ ಗೂಂಡಾಗಿರಿ: ಸಿದ್ದರಾಮಯ್ಯ ಆರೋಪ

By Web DeskFirst Published Jul 11, 2019, 8:06 AM IST
Highlights

ವಿಧಾನಸೌಧದಲ್ಲಿ ಬಿಜೆಪಿ ಗೂಂಡಾಗಿರಿ: ಸಿದ್ದು| ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಇದೆ ಎಂಬುದಕ್ಕೆ ಸುಧಾಕರ್‌ ಪ್ರಕರಣವೇ ಸಾಕ್ಷ್ಯ| ಕಾಂಗ್ರೆಸ್‌ ಶಾಸಕರನ್ನು ರಕ್ಷಿಸಲು ಬಿಜೆಪಿಯವರು ಯಾರು?

ಬೆಂಗಳೂರು[ಜು.11]: ಸಮ್ಮಿಶ್ರ ಸರ್ಕಾರದ ಶಾಸಕರ ರಾಜೀನಾಮೆ ವಿಚಾರದಲ್ಲಿ ನಮ್ಮ ಪಾತ್ರವಿಲ್ಲ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರು ಡಾ.ಕೆ. ಸುಧಾಕರ್‌ ವಿಚಾರದಲ್ಲಿ ಸಾಕ್ಷ್ಯಾಧಾರಗಳ ಸಮೇತ ಸಿಕ್ಕಿಬಿದ್ದಿದ್ದಾರೆ. ಸುಧಾಕರ್‌ ಕಾಂಗ್ರೆಸ್‌ ಶಾಸಕರು. ನಮ್ಮ ಶಾಸಕರ ರಕ್ಷಣೆ ಮಾಡಲು ಬಿಜೆಪಿ ಶಾಸಕರು ಯಾರು? ನಮ್ಮ ಶಾಸಕರ ಜತೆ ನಾವು ಮಾತನಾಡುವುದನ್ನು ತಪ್ಪಿಸಲು ಬಿಜೆಪಿ ಶಾಸಕರು ವಿಧಾನಸೌಧದಲ್ಲೇ ಗೂಂಡಾಗಳ ರೀತಿ ವರ್ತಿಸಿದ್ದಾರೆ ಎಂದು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಅವರು ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ವಿಧಾನಸೌಧದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವೆ ನಡೆದ ಜಟಾಪಟಿ ಕುರಿತು ಈ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಸುಧಾಕರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಅವರು ಕಾಂಗ್ರೆಸ್‌ ಪಕ್ಷದ ಸದಸ್ಯರು. ಹೀಗಿರುವಾಗ ಅವರನ್ನು ರಕ್ಷಿಸಲು ಈ ಬಿಜೆಪಿಯವರು ಯಾರು? ಇಷ್ಟಕ್ಕೂ ಶಾಸಕಾಂಗ ಪಕ್ಷದ ನಾಯಕನಾದ ನಾನು ನಮ್ಮ ಪಕ್ಷದ ಶಾಸಕ ರಾಜೀನಾಮೆ ನೀಡಿದಾಗ ಅವರೊಂದಿಗೆ ಚರ್ಚೆ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಧಾಕರ್‌ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ರಾಜೀನಾಮೆ ಹಿಂಪಡೆಯುವಂತೆ ಒಪ್ಪಿಸಿದ್ದೇನೆ. ಅವರು ಒಬ್ಬರೇ ವೈಯಕ್ತಿಕವಾಗಿ ಬಂದು ನನ್ನ ಜತೆ ಮಾತನಾಡುವುದಾಗಿ ಹೇಳಿದ್ದಾರೆ ಎಂದೂ ಈ ಸಂದರ್ಭದಲ್ಲಿ ತಿಳಿಸಿದರು.

ಸುಧಾಕರ್‌ ಬಿಜೆಪಿ ಶಾಸಕ ಅಲ್ಲ, ಕಾರ್ಯಕರ್ತರೂ ಅಲ್ಲ. ಅವರ ರಾಜೀನಾಮೆ ಅಂಗೀಕಾರ ಆಗುವವರೆಗೂ ಅವರು ಕಾಂಗ್ರೆಸ್‌ ಶಾಸಕ. ನಮ್ಮ ಶಾಸಕನ ಬಳಿ ನಾವು ಮಾತನಾಡಿದರೆ ಬಿಜೆಪಿ ಶಾಸಕರು ಗೂಂಡಾಗಳಂತೆ ವರ್ತಿಸಿದ್ದಾರೆ. ಅವರ ನಡವಳಿಕೆ ಖಂಡನೀಯ. ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯ ಪಾತ್ರವಿದೆ ಎಂಬುದಕ್ಕೆ ಇದೆಲ್ಲಾ ವರ್ತನೆಗಳೇ ಸಾಕ್ಷಿಗಳು ಎಂದು ಹೇಳಿದರು.

ವಿಧಾನಸೌಧದಲ್ಲಿ ಶಾಸಕರ ಮನವೊಲಿಕೆಗೆ ಮುಂದಾದ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಅವರು, ವಿಧಾನಸೌಧದಲ್ಲಿ ಮನವೊಲಿಕೆ ಯತ್ನ ಮಾಡಬಾರದೆ ಎಂದು ಪ್ರಶ್ನಿಸಿದರು. ಅವರಿಗೆ ಅಸಮಾಧಾನ ಇರುವುದು ನನಗೆ ಮೊದಲು ಗೊತ್ತಿರಲಿಲ್ಲ. ಗೊತ್ತಿದ್ದರೆ ಆಗಲೇ ಮನವೊಲಿಕೆ ಮಾಡುತ್ತಿದ್ದೆ ಎಂದರು.

ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ ಅವರು, ಮೋದಿ ಹಾಗೂ ಶಾ ಅವರು ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಮುಗಿಸಲು ಬಿಜೆಪಿ ಕನಸು ಕಾಣುತ್ತಿದೆ. ಕಾಂಗ್ರೆಸ್‌ ಮುಗಿಸಿ ಅಧಿಕಾರದಲ್ಲಿ ಮುಂದುವರೆಯಬಹುದು ಎಂದು ತಿಳಿದಿದ್ದರೆ ಅವರಷ್ಟುಮೂರ್ಖರು ಬೇರೊಬ್ಬರಿಲ್ಲ. ಆಪರೇಷನ್‌ ಕಮಲಕ್ಕೆ ಪದೇ ಪದೇ ಯತ್ನಿಸುವ ಮೂಲಕ ಬಿಜೆಪಿಯವರಂತಹ ಲಜ್ಜೆಗೆಟ್ಟವರಿಲ್ಲ ಎಂದು ನಿರೂಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸುಧಾಕರ್‌ ಪತ್ನಿ, ರಾಜ್ಯಪಾಲರು ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರಿಗೆ ದೂರು ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ಬಗ್ಗೆ ನಾನು ಸುಧಾಕರ್‌ ಪತ್ನಿ ಜತೆ ಮಾತನಾಡಿದ್ದೇನೆ. ಸುಧಾಕರ್‌ ಅವರಿಗೆ ಏನೂ ಆಗಿಲ್ಲ ಎಂದು ಹೇಳಿದ್ದೇನೆ ಎಂದರು.

click me!