ರಾಮಲಿಂಗಾ ರೆಡ್ಡಿ ಸೆಳೆಯಲು ಕಾಂಗ್ರೆಸ್- ಬಿಜೆಪಿ ಹಗ್ಗ ಜಗ್ಗಾಟ!

By Web DeskFirst Published Jul 14, 2019, 8:13 AM IST
Highlights

ರೆಡ್ಡಿ ಸೆಳೆಯಲು ಕೈ-ಕಮಲ ಶತಪ್ರಯತ್ನ| ಮುಂದುವರಿದ ರಾಮಲಿಂಗಾರೆಡ್ಡಿ ಮನವೊಲಿಕೆ| ಬೆಂಗಳೂರಿನ ಹಿರಿಯ ಶಾಸಕನನ್ನು ಸೆಳೆದರೆ ಇನ್ನೂ ಮೂವರು ಅತೃಪ್ತರು ಬರುತ್ತಾರೆನ್ನುವ ಲೆಕ್ಕಾಚಾರ| ರೆಡ್ಡಿ ಮನೆಗೆ ಇಬ್ಬರು ಬಿಜೆಪಿ ಶಾಸಕರ ದೌಡು| ರೆಡ್ಡಿ ಸಂಘದ ಚುನಾವಣೆ ನೆಪದಲ್ಲಿ ಬಿಜೆಪಿ ನಾಯಕರ ಭೇಟಿ| ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ

ಬೆಂಗಳೂರು[ಜು.14]: ಮೈತ್ರಿ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಮನವೊಲಿಕೆಗೆ ಕಾಂಗ್ರೆಸ್‌ನಲ್ಲಿ ಪ್ರಯತ್ನ ಮುಂದುವರೆದ ನಡುವೆಯೇ ಬಿಜೆಪಿ ಕೂಡ ಹೇಗಾದರೂ ಮಾಡಿ ಅವರನ್ನು ತಮ್ಮ ಪಕ್ಷದತ್ತ ಸೆಳೆಯಲು ಪ್ರಯತ್ನ ನಡೆಸಿದೆ.

ಶಾಸಕ ರಾಮಲಿಂಗಾರೆಡ್ಡಿ ಅವರನ್ನು ಹೇಗಾದರೂ ಮಾಡಿ ಮನವೊಲಿಸಿದರೆ ಬೆಂಗಳೂರಿನ ಇತರೆ ಮೂವರು ಅತೃಪ್ತ ಶಾಸಕರನ್ನು ಮನವೊಲಿಸಬಹುದೆಂಬ ಆಶಾಭಾವನೆಯಲ್ಲಿರುವ ಕಾಂಗ್ರೆಸ್‌ ಅವರ ಮನವೊಲಿಕೆಗೆ ನಿರಂತರ ಪ್ರಯತ್ನ ನಡೆಸಿದ್ದು, ಈ ಪ್ರಯತ್ನ ಬಹುತೇಕ ಯಶಸ್ವಿ ಹಂತದಲ್ಲಿದೆ ಎನ್ನಲಾಗುತ್ತಿದೆ.

ಈ ಬೆಳವಣಿಗೆ ಬೆನ್ನಲ್ಲೇ ಆತಂಕಕ್ಕೆ ಒಳಗಾದ ಬಿಜೆಪಿಯ ನಾಯಕರು ರಾಮಲಿಂಗಾರೆಡ್ಡಿ ಅವರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿತ್ತು. ಶನಿವಾರ ಬಿಜೆಪಿಯ ಇಬ್ಬರು ಶಾಸಕರು ರೆಡ್ಡಿ ಸಂಘದ ಚುನಾವಣೆ ವಿಚಾರ ಚರ್ಚೆ ನೆಪದಲ್ಲಿ ರಾಮಲಿಂಗಾರೆಡ್ಡಿ ಅವರ ಮನೆಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿದರು. ಬಿಜೆಪಿ ಶಾಸಕರಾದ ಯಲಹಂಕದ ಎಸ್‌.ಆರ್‌.ವಿಶ್ವನಾಥ್‌ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಶನಿವಾರ ರಾಮಲಿಂಗಾರೆಡ್ಡಿ ಅವರನ್ನು ಲಕ್ಕಸಂದ್ರ ನಿವಾಸಲ್ಲಿ ಭೇಟಿ ಮಾಡಿ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿ ಹೊರಬಂದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ. ತಮ್ಮ ಭೇಟಿ ವೇಳೆ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಸ್‌ ಪಡೆಯದಂತೆ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿರುವ ಬಿಜೆಪಿ ಶಾಸಕರು ಬಿಜೆಪಿ ಬೆಂಬಲಿಸುವಂತೆ ಕೋರಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ನಿರಾಕರಿಸಿರುವ ಬಿಜೆಪಿ ಶಾಸಕರು ರೆಡ್ಡಿ ಸಂಘದ ಚುನಾವಣೆ ವಿಚಾರ ಚರ್ಚೆಗೆ ಹೋಗಿದ್ದಾಗಿ ಸಮರ್ಥನೆ ನೀಡಿದ್ದಾರೆ.

ರಾಜಕೀಯ ಚರ್ಚೆಗೆ ಬಂದಿಲ್ಲ: ವಿಶ್ವನಾಥ್‌

ರಾಮಲಿಂಗಾರೆಡ್ಡಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಯಾವುದೇ ರಾಜಕೀಯ ವಿಚಾರ ಮಾತನಾಡಲು ನಾವು ಇಲ್ಲಿಗೆ ಬಂದಿರಲ್ಲ. ಜು.27ಕ್ಕೆ ರೆಡ್ಡಿ ಸಂಘದ ಚುನಾವಣೆ ಇದೆ. ಆ ಬಗ್ಗೆ ಮಾತನಾಡಲು ಬಂದಿದ್ದೆವು ಅಷ್ಟೆಎಂದು ಹೇಳಿದ್ದಾರೆ. ರಾಮಲಿಂಗಾರೆಡ್ಡಿ ಬಂಡೆ ಇದ್ದ ಹಾಗೆ. ಯಾರು ಏನೇ ಹೇಳಿದರೂ ಅವರ ನಿರ್ಧಾರವೇ ಅವರದ್ದು. ನಾವೆಲ್ಲಾ ಅವರ ನಿರ್ಧಾರ ಬದಲಾವಣೆ ಮಾಡಲು ಸಾಧ್ಯವಿಲ್ಲ. ರೆಡ್ಡಿ ಸಂಘದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜು.15 ಕೊನೆಯ ದಿನ. ಈ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದರು.

ಇನ್ನಷ್ಟುಜನ ಗೈರಾಗತ್ತಾರೆ: ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವ ದಿನ ಅವರ ಕಡೆಯ ಇನ್ನೂ ಕೆಲ ಶಾಸಕರು ಸದನಕ್ಕೆ ಗೈರು ಹಾಜರಾಗುತ್ತಾರೆ ನೋಡುತ್ತಿರಿ ಎಂದು ಇದೇ ವೇಳೆ ವಿಶ್ವನಾಥ್‌ ಹೇಳಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಈಗ ವಿಶ್ವಾಸಮತ ಸಾಬೀತುಪಡಿಸುವಷ್ಟುಸಂಖ್ಯಾಬಲ ಇಲ್ಲ. ಇನ್ನು ಯಾವ ನಂಬರ್‌ ಗೇಮ್‌ ಆಡಲು ಸಾಧ್ಯವಿಲ್ಲ. ಕುಮಾರಸ್ವಾಮಿ ಅವರಿಗೆ ಗೌರವದಿಂದ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವ ಮನಸ್ಸಿರಬೇಕು. ಹಾಗಾಗಿ ವಿಶ್ವಾಸಮತ ಯಾಚಿಸುವ ನಿರ್ಧಾರ ಮಾಡಿದ್ದಾರೆ ಎಂದರು.

click me!