
ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಆತಂಕ ಸೃಷ್ಟಿಸುತ್ತಿರುವ ಮಕ್ಕಳು ಮತ್ತು ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮೂರು ವರ್ಷಗಳಿಂದ ಕಣ್ಮೆರೆಯಾಗಿರುವವರ ಹುಡುಕಾಟಕ್ಕಾಗಿ ಇದೇ ತಿಂಗಳ 1 ನೇ ತಾರೀಖಿನಿಂದ ಹದಿನೈದು ದಿನಗಳ ಕಾಲ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದೆ.
ಎರಡು ತಿಂಗಳ ಹಿಂದಷ್ಟೆ ರಾಜ್ಯ ವ್ಯಾಪ್ತಿ ಡ್ರಗ್ಸ್ ಮಾಫಿಯಾ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು ಬಿಸಿ ಮುಟ್ಟಿಸಿದ್ದ ಪೊಲೀಸ್ ಇಲಾಖೆ, ಈಗ ಮಾನವ ಕಳ್ಳ ಸಾಗಾಣಿಕೆ ಮೇಲೆ ಗದಾ ಪ್ರಹಾರಕ್ಕಿಳಿದಿದೆ. ಈ ಸಂಬಂಧ ಡಿಜಿಪಿ ನೀಲಮಣಿ ಎನ್.ರಾಜು ಸುತ್ತೋಲೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಠಾಣೆಗಳಲ್ಲಿ ಕಣ್ಮರೆಯಾದವರಿಗೆ ಪತ್ತೇದಾರಿಕೆ ಪ್ರಾರಂಭವಾಗಿದೆ.
ದೇಶದಲ್ಲೇ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಅತಿ ಹೆಚ್ಚು ಮಕ್ಕಳು ಮತ್ತು ಮಹಿಳೆಯರು ಕಾಣೆಯಾಗುತ್ತಿದ್ದು, ಇದರಲ್ಲಿ ಕರ್ನಾಟಕವು ಸಹ ಪ್ರಮುಖವಾಗಿದೆ. ಇನ್ನು ಈ ಪ್ರಕರಣಗಳ ಪೊಲೀಸರ ತನಿಖೆ ಕುರಿತು ಹೈಕೋರ್ಟ್ ಸಹ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಡಿಜಿಪಿ, ಮಕ್ಕಳ ಮತ್ತು ಮಹಿಳೆಯರ ಪತ್ತೆಗೆ ಸೂಚಿಸಿದ್ದಾರೆ.
ಮಕ್ಕಳು ಮತ್ತೆ ಮಹಿಳೆಯರ ನಾಪತ್ತೆ ಪ್ರಕರಣಗಳ ಸಂಬಂಧ ಅಕ್ಟೋಬರ್ 1 ರಿಂದ 15 ವರೆಗೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು, 2015 ರಿಂದ 2018 ವರೆಗೆ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸಬೇಕು. ಬಳಿಕ ಈ ಕುರಿತು ಅ. 18 ರಂದು ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವಂತೆಡಿಜಿಪಿ ಸುತ್ತೋಲೆಯಲ್ಲಿ ಹೇಳಿದ್ದಾರೆ.
ಈ ಕಾರ್ಯಾಚರಣೆ ಮೇಲುಸ್ತುವಾರಿಯನ್ನು ಆಯಾ ವಲಯ ಐಜಿಪಿ ಹಾಗೂ ಪೊಲೀಸ್ ಆಯುಕ್ತರು ನಿರ್ವಹಣೆ ಮಾಡಬೇಕು. ಈ ವೇಳೆ ಪತ್ತೆಯಾಗುವ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಪ್ರತ್ಯೇಕವಾಗಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಹೇಳಿರುವ ಡಿಜಿಪಿ, ಈ ನಾಪತ್ತೆ ಪ್ರಕರಣಗಳ ತನಿಖೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯತನ ವಹಿಸಬಾರದು ಎಂದಿದ್ದಾರೆ. ಮಾನವ ಕಳ್ಳ ಸಾಗಾಣಿಕೆ: ವಯಸ್ಕರು ಕಣ್ಮರೆಯಾದರೆ ಸಾಮಾಜಿಕ ಅಥವಾ ಆರ್ಥಿಕ ಸಮಸ್ಯೆಗಳನ್ನು ಪರಿಗಣಿಸಬಹುದು.
ಆದರೆ ಮಕ್ಕಳ ನಾಪತ್ತೆಯನ್ನು ಆ ದೃಷ್ಟಿಯಿಂದ ನೋಡಬಾರದು. ಇದರಲ್ಲಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಕೆಲ ಸಮಾಜಘಾತುಕ ಶಕ್ತಿಗಳ ಪಾತ್ರದ ಇದೆ ಎಂದು ರಾಜ್ಯ ಅಪರಾಧ ವಿಭಾ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಹೇಳುತ್ತಾರೆ. 4 ತಿಂಗಳು ಕಳೆದರೂ ಸಹ ಮಕ್ಕಳು ಪತ್ತೆಯಾಗದೆ ಹೋದರೆ ಮಾನವ ಕಳ್ಳ ಸಾಗಾಣಿಕೆ ಜಾಲದಲ್ಲಿ ಸಿಲುಕಿದ್ದಾರೆ ಎಂದೇ ಆ ಆರೋಪದಡಿ ಪ್ರಕರಣ ದಾಖಲಾ ಗಿಸುವಂತೆ ಸೂಚಿಸಲಾಗಿದೆ ಎನ್ನುತ್ತಾರೆ ಸಲೀಂ.
ಗಿರೀಶ್ ಮಾದೇನಹಳ್ಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ