ಪರಸ್ತ್ರೀ ಸಂಗದಿಂದ ಪತಿ ಸಾವು, ಪತ್ನಿಯೂ ನೇಣಿಗೆ ಶರಣು

By Web DeskFirst Published Oct 5, 2018, 8:26 AM IST
Highlights

ಪರಸ್ತ್ರೀಯೊಂದಿಗೆ ಸಂಬಂಧ ಹೊಂದಿದ್ದ ವಿಚಾರ ತಿಳಿದು ವಿವಾದ ಸೃಷ್ಟಿಯಾಗುತ್ತಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು ಅದಾದ ಬಳಿಕ ಪತ್ನಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಬೆಂಗಳೂರು :  ಪರಸ್ತ್ರೀ ಸಂಗದ ವಿವಾದಕ್ಕೆ ಸಿಲುಕಿ ತಮ್ಮ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಬೇಸರಗೊಂಡು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ರಸ್ತೆಯ ಬ್ಯಾಟರಾಯನಪುರ ಸಮೀಪ ಗುರುವಾರ ನಡೆದಿದೆ.

ಕಸ್ತೂರಿ ಬಾ ನಗರದ 4ನೇ ಮುಖ್ಯರಸ್ತೆ ನಿವಾಸಿ ಶಿಲ್ಪಾ (29) ಮೃತ ಗೃಹಿಣಿ. ಮೂರು ದಿನಗಳ ಹಿಂದಷ್ಟೆಕನಕಪುರ ರಸ್ತೆಯ ನೆಲ್ಲಿಕೆರೆಯಲ್ಲಿ ಮೃತಳ ಪತಿ ಹರೀಶ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುರುವಾರ ಮನೆಯಲ್ಲಿ ಅವರ ತಿಥಿ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಸ್ನಾನ ಮುಗಿಸಿ ಬಟ್ಟೆಬದಲಾಯಿಸಲು ಕೊಠಡಿಗೆ ತೆರಳಿದ ಶಿಲ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲ ಹೊತ್ತಿನ ಬಳಿಕ ಮೃತರ ಕೊಠಡಿಗೆ ಸಂಬಂಧಿಕರು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಎಂಟು ವರ್ಷಗಳ ಹಿಂದೆ ಮೈಸೂರು ರಸ್ತೆ ಅಂಚೆಪಾಳ್ಯದ ಹರೀಶ್‌ ಹಾಗೂ ಶಿಲ್ಪಾ ವಿವಾಹವಾಗಿದ್ದು, ಈ ದಂಪತಿಗೆ ಹೆಣ್ಣು ಮಗಳಿದ್ದಾಳೆ. ಕೆ.ಆರ್‌.ಮಾರ್ಕೆಟ್‌ ಹತ್ತಿರ ಆಟೋಮೊಬೈಲ್ಸ್‌ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಹರೀಶ್‌, ಕಸ್ತೂರ್ಬಾ ನಗರದಲ್ಲಿ ಕುಟುಂಬದ ಜತೆ ನೆಲೆಸಿದ್ದರು. ತಮ್ಮ ಮನೆ ಹಿಂಭಾಗ ರಸ್ತೆಯಲ್ಲಿ ನೆಲೆಸಿರುವ ಹೂವಿನ ವ್ಯಾಪಾರಿ ರೇವಣ್ಣ ಜತೆ ಹರೀಶ್‌ ಗೆಳೆತನವಿತ್ತು. ಈ ಸ್ನೇಹದಲ್ಲಿ ಮನೆಗೆ ಹೋಗಿ ಬಂದು ಮಾಡುವಾಗ ರೇವಣ್ಣ ಪತ್ನಿ ಶಾಲಿನಿ ಪರಿಚಯವಾಯಿತು. ಕ್ರಮೇಣ ಆ ಗೆಳೆತನವು ಅನೈತಿಕ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ.

ಬೆದರಿಕೆ: ಈ ಅಕ್ರಮ ಸಂಬಂಧ ವಿಚಾರವು ಎರಡು ಕುಟುಂಬದವರಿಗೆ ಗೊತ್ತಾಗಿ ಗಲಾಟೆಗಳಾಗಿದ್ದವು. ಇದಾದ ಬಳಿಕ ಅವರಿಬ್ಬರು ಮನೆಯಿಂದ ಓಡಿ ಹೋಗಿದ್ದರು. ಕೊನೆಗೆ ಈ ವಿವಾದವು ಬ್ಯಾಟರಾಯನಪುರ ಠಾಣೆ ಮೆಟ್ಟಿಲೇರಿತು. ಆಗ ಹರೀಶ್‌ ಹಾಗೂ ಶಾಲಿನಿಯನ್ನು ಠಾಣೆಗೆ ಕರೆಸಿದ ಪೊಲೀಸರು, ಅವರಿಬ್ಬರಿಗೆ ಬುದ್ಧಿ ಮಾತು ಹೇಳಿ ಕಳುಹಿಸಿದ್ದರು. ಈ ಘಟನೆ ಬಳಿಕ ಕೆರಳಿದ ಶಾಲಿನಿ ಪತಿ ರೇವಣ್ಣ, ನನ್ನ ಬದುಕು ನಾಶ ಮಾಡಿದೆ ಎಂದು ಹರೀಶ್‌ನಿಗೆ ಬೆದರಿಕೆ ಹಾಕಿದ್ದ. ಅಲ್ಲದೆ ಅಂದು ಠಾಣೆಯಲ್ಲಿ ಸಹ ಗೆಳೆಯನ ಮೇಲೆ ಹಲ್ಲೆ ರೇವಣ್ಣ ಕೂಡ ನಡೆಸಿದ್ದ. ಇದರಿಂದ ಭೀತಿಗೊಳಗಾದ ಹರೀಶ್‌, ಕನಕಪುರ ರಸ್ತೆಯ ನೆಲ್ಲಿಕೆರೆಯಲ್ಲಿ ತನ್ನ ಸೋದರಿ ಮನೆಯಲ್ಲಿ ಆಶ್ರಯ ಪಡೆದಿದ್ದ ಎಂದು ಮೃತನ ಕುಟುಂಬದವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಠಾಣೆಯಲ್ಲಿ ರಾಜಿ ಸಂಧಾನ ಬಳಿಕ ನಿರಂತರವಾಗಿ ಹರೀಶ್‌ ದಂಪತಿ ಮೊಬೈಲ್‌ಗೆ ಕರೆ ಮಾಡಿ ರೇವಣ್ಣ ಧಮ್ಕಿ ಹಾಕುತ್ತಿದ್ದ. ಇದರಿಂದ ಬೇಸರಗೊಂಡ ಹರೀಶ್‌, ಸೋಮವಾರ ಮಧ್ಯಾಹ್ನ ಸೋದರಿ ಮನೆಯಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿನಿಂದ ಖಿನ್ನತೆಗೊಳಗಾದ ಅವರ ಪತ್ನಿ ಶಿಲ್ಪಾ, ಯಾತನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಂಪತಿಗೆ ರೇವಣ್ಣನೇ ಕಾರಣವಾಗಿದ್ದು, ಆತನ ಮೇಲೆ ಕ್ರಮ ಜರುಗಿಸಬೇಕು ಎಂದು ಮೃತ ಹರೀಶ್‌ ಅಕ್ಕನ ಮಗ ಪ್ರತಾಪ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ರೇವಣ್ಣ ದಂಪತಿ ವಿರುದ್ಧ ಹರೀಶ್‌ ಕುಟುಂಬವು ದೂರು ದಾಖಲಿಸಿದೆ. ಇತ್ತ ದಂಪತಿ ಆತ್ಮಹತ್ಯೆ ಬಳಿಕ ನಗರ ತೊರೆದಿರುವ ರೇವಣ್ಣ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!