
ನವದೆಹಲಿ/ಬೆಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ವ್ಯಾಸಂಗ ಮಾಡಿದ ಕುರಿತಂತೆ ತನಿಖೆ ಹಿರಿಯ ಐಪಿಎಸ್ ಅಧಿಕಾರಿ ಆರ್.ಕೆ.ದತ್ತಾ ವಿರುದ್ಧ ತನಿಖೆ ಕೋರಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಇದರ ಬೆನ್ನಲ್ಲೇ ಅವರು ಕರ್ನಾಟಕದ ಮುಂದಿನ ಡಿಜಿಪಿ ಆಗಿ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ.
ಐಪಿಎಸ್ ಅಧಿಕಾರಿ ಆರ್.ಕೆ. ದತ್ತಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಮಲ್ಲೇಶ್ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ತನ್ಮೂಲಕ ರಾಜ್ಯ ಪೊಲೀಸ್ ಮುಖ್ಯಸ್ಥರ ಹುದ್ದೆಯ (ಡಿಜಿಪಿ) ರೇಸ್‌ನಲ್ಲಿದ್ದ ಅವರಿಗೆ ಎದುರಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದ್ದು, ಅವರು ರಾಜ್ಯದ ಮುಂದಿನ ಡಿಜಿಪಿಯಾಗುವ ಸಾಧ್ಯತೆ ಹೆಚ್ಚಿದೆ.
ಮೂಲಗಳ ಪ್ರಕಾರ ದತ್ತಾ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗಿ ಡಿಜಿಪಿ ಹುದ್ದೆ ತೆರವಾಗುವ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ ಸೋಮವಾರ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದರು. ಗೃಹ ಇಲಾಖೆ ಕಾರ್ಯದರ್ಶಿ ಸುಭಾಷ್ ಚಂದ್ರ, ಡಿಪಿಆರ್ ಕಾರ್ಯದರ್ಶಿ ಅನಿಲ್‌ಕುಮಾರ್, ರಾಜ್ಯ ಮುಖ್ಯ ಕಾರ್ಯದರ್ಶಿ ಕುಂಟಿಯಾ ಅವರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಡಿಜಿಪಿ ನೇಮಕ ವಿಚಾರವನ್ನು ಸಿಎಂ ಅವರ ವಿವೇಚನೆಗೆ ಬಿಡಲಾಯಿತು. ಹಿರಿತನವನ್ನು ಹೊಂದಿರುವ ಹಿನ್ನೆಲೆಯಲ್ಲಿ ಸಿಎಂ ಸಹ ದತ್ತಾ ಅವರ ನೇಮಕಾತಿ ಬಗ್ಗೆಯೇ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಡಿಜಿಪಿ ಹುದ್ದೆಗೆ ಎಡಿಜಿಪಿ ನೀಲಮಣಿ ರಾಜು, ಸಿಐಡಿ ಮಹಾ ನಿರ್ದೇಶಕ ಎಚ್.ಸಿ. ಕಿಶೋರ್ ಚಂದ್ರ ಮತ್ತು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಮಹಾ ನಿರ್ದೇಶಕ ಎಂ.ಎನ್.ರೆಡ್ಡಿ ಅವರು ತೀವ್ರ ಪೈಪೋಟಿ ನಡೆಸಿದ್ದರು. ಹಿರಿತನದಲ್ಲಿ ಆರ್.ಕೆ. ದತ್ತಾ ಮುಂಚೂಣಿಯಲ್ಲಿದ್ದರೆ, ಅವರ ನಂತರದ ಸ್ಥಾನದಲ್ಲಿ 83ನೇ ಬ್ಯಾಚ್‌ನ ನೀಲಮಣಿ ರಾಜು, 84ನೇ ಬ್ಯಾಚ್‌ನ ಎಚ್.ಸಿ.ಕಿಶೋರ್ ಚಂದ್ರ, ಎಂ.ಎನ್.ರೆಡ್ಡಿ, ಪ್ರೇಮ್ ಶಂಕರ್ ಮೀನಾ, ಸತ್ಯನಾರಾಯಣ ಅರ್ಹ ಅಧಿಕಾರಿಗಳ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ.
ದತ್ತಾ ಪ್ರಕರಣದ ಹಿನ್ನೆಲೆ
ಲೋಕಾಯುಕ್ತ ಪೊಲೀಸ್ ಮುಖ್ಯಸ್ಥರಾಗಿದ್ದಾಗ ದತ್ತಾ ಅವರು ಅನುಮತಿ ಪಡೆಯದೆ ಕರ್ತವ್ಯದಲ್ಲಿದ್ದಾಗಲೇ ವಿದೇಶದಿಂದ ಕಾನೂನು ಪದವಿ ಪಡೆದಿದ್ದಾರೆ. ಇದು ಕಾನೂನುಬಾಹಿರ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.