ಪೊಲೀಸರ ಹೋಂ ಆರ್ಡರ್ಲಿ ಇನ್ನೂ ಜೀವಂತ; ರಾಜ್ಯ ಮಾಹಿತಿ ಆಯೋಗ ಕೆಂಡಾಮಂಡಲ

By Suvarna Web DeskFirst Published Jun 9, 2017, 8:40 PM IST
Highlights

ಪೊಲೀಸ್​ ಇಲಾಖೆ ವಹಿಸಿರುವ ನಿರ್ಲಕ್ಷ್ಯವನ್ನು ಮಾಹಿತಿ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಅಶಿಸ್ತಿನಿಂದ ತಮ್ಮ ಸೌಲಭ್ಯಕ್ಕೆ ಅನುಗುಣವಾಗಿ ಆಡರ್ಲಿಗಳನ್ನು ಮೌಖಿಕವಾಗಿ ನೇಮಿಸಿಕೊಂಡು ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಆರ್ಡರ್ಲಿ ಪದ್ಧತಿಯನ್ನು ರದ್ದುಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲನೆ ಮಾಡದ ಪೊಲೀಸ್​ ಇಲಾಖೆಯ ಧೋರಣೆಗೆ ಕರ್ನಾಟಕ ರಾಜ್ಯ ಮಾಹಿತಿ ಆಯೋಗ ಕೆಂಡಾಮಂಡಲವಾಗಿದೆ. ಯಾವುದೇ ಆದೇಶ ಇಲ್ಲದಿದ್ದರೂ ಪೊಲೀಸ್​ ಮಹಾನಿರ್ದೇಶಕ ಆರ್​.ಕೆ.ದತ್ತಾ, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಈಗಲೂ ಆಡರ್ಲಿಗಳನ್ನು ನಿಯೋಜಿಸುತ್ತಿರುವುದು ಬೆಳಕಿಗೆ ಬಂದಿದೆ.

ಕೆಎಸ್'​ಆರ್'​ಪಿ, ಐಆರ್'​ಬಿ ಪಡೆಗಳಲ್ಲಿ ಆಡರ್ಲಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ನೀಡಲು ವಿಫಲವಾಗಿದ್ದ ಪೊಲೀಸ್​ ಇಲಾಖೆಯನ್ನು ಆಯೋಗ ತರಾಟೆಗೆ ತೆಗೆದುಕೊಂಡಿದೆ. 2017ರ ಮಾರ್ಚ್​ 8ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಪಾಲನೆ ಮಾಡುವುದರ ಜತೆಗೆ ಅನುಪಾಲನಾ ವರದಿಯನ್ನು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ.ಗರ್ಗ್​ ಅವರಿಗೆ ಒಂದು ತಿಂಗಳೊಳಗೆ ಸಲ್ಲಿಸಬೇಕು ಎಂದು ಮಾಹಿತಿ ಆಯೋಗದ ಆಯುಕ್ತ ಎಲ್​.ಕೃಷ್ಣಮೂರ್ತಿ ಆದೇಶಿಸಿದ್ದಾರೆ.

ಸಶಸ್ತ್ರ ಪೊಲೀಸ್​ ಪೇದೆಗಳನ್ನು ಆಡರ್ಲಿಗಳನ್ನಾಗಿ ಪೊಲೀಸ್​ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿಯೋಜಿಸುತ್ತಿದ್ದರ ಬಗ್ಗೆ ಸಾಮಾಜಿಕ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಒತ್ತಡಕ್ಕೆ ಮಣಿದಿದ್ದ ಸರ್ಕಾರವೂ ಆಡರ್ಲಿ ಪದ್ಧತಿಯನ್ನು ರದ್ದುಗೊಳಿಸಿ ಅನುಯಾಯಿಗಳನ್ನು ನೇಮಿಸಿ ಇದಕ್ಕೆ ಬದಲಿ ಭತ್ಯೆ ನೀಡಲು ಸರ್ಕಾರ ಆದೇಶ ಹೊರಡಿಸಿತ್ತು. ಆದರೂ ಪೊಲೀಸ್​ ಇಲಾಖೆ ಸರ್ಕಾರದ ಈ ಆದೇಶವನ್ನ ಪಾಲನೆ ಮಾಡದೇ ನಿರ್ಲಕ್ಷ್ಯ ವಹಿಸಿರುವುದಕ್ಕೆ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.

ಆಯೋಗ ಗಂಭೀರ:
ಪೊಲೀಸ್​ ಇಲಾಖೆ ವಹಿಸಿರುವ ನಿರ್ಲಕ್ಷ್ಯವನ್ನು ಮಾಹಿತಿ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಅಶಿಸ್ತಿನಿಂದ ತಮ್ಮ ಸೌಲಭ್ಯಕ್ಕೆ ಅನುಗುಣವಾಗಿ ಆಡರ್ಲಿಗಳನ್ನು ಮೌಖಿಕವಾಗಿ ನೇಮಿಸಿಕೊಂಡು ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಆರ್ಡರ್ಲಿ ಪದ್ಧತಿ ಪ್ರಕರಣ ಕುರಿತು ಆಯೋಗ ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಈ ಬಗ್ಗೆ ವಸ್ತುನಿಷ್ಠ ಕ್ರಮ ಕೈಗೊಂಡು ಸರ್ಕಾರದ ಆದೇಶವನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಅಲ್ಲದೆ, ಕೈಗೊಂಡ ಕ್ರಮದ ಕುರಿತು ಅನುಪಾಲನಾ ವರದಿಯೊಂದಿಗೆ ಒಂದು ತಿಂಗಳಿನೊಳಗೆ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ.ಗರ್ಗ್ ಅವರಿಗೆ ಸಲ್ಲಿಸಲು ಸೂಚಿಸಿ ಪ್ರಕರಣವನ್ನು ವಿಲೇವಾರಿ ಮಾಡಿದೆ.

ಕೆಎಸ್​ಆರ್​'ಪಿ, ಐಆರ್'​ಬಿ ಪಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್ಡರ್ಲಿಗಳ ಕುರಿತು ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಬೇಕಿದ್ದ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ ಅರ್ಜಿಯನ್ನು ತನ್ನ ಕಾರ್ಯವ್ಯಾಪ್ತಿ ಮೀರಿ ಬೆಳಗಾವಿ, ಮೈಸೂರು, ಕಲಬುರ್ಗಿ, ಮುನಿರಾಬಾದ್​, ವಿಜಯಪುರಕ್ಕೆ ವರ್ಗಾಯಿಸಿ ಅರ್ಜಿದಾರರನ್ನು ಸತಾಯಿಸಿತ್ತು. ಇದರಿಂದ ಅರ್ಜಿದಾರ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಆಯೋಗ 2017ರ ಜೂನ್​ 8ರಂದು ಆದೇಶ ಹೊರಡಿಸಿದೆ.

ಏನಿದು ಆರ್ಡರ್ಲಿ ವ್ಯವಸ್ಥೆ?
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಹಾಯಕರಾಗಿ ಜೂನಿಯರ್ ಪೊಲೀಸ್ ಪೇದೆಗಳನ್ನು ಆರ್ಡರ್ಲಿಗಳಾಗಿ ಇರಿಸಲಾಗುತ್ತದೆ. ಪೊಲೀಸ್ ಅಧಿಕಾರಿಗಳು ಹೊರಗೆ ಡ್ಯೂಟಿಗೆ ಹೋದಾಗ ಇವರು ಜೊತೆಗಿರುತ್ತಾರೆ. ಆಫೀಸ್ ಫೈಲ್'ಗಳನ್ನು ಮೈಂಟೇನ್ ಮಾಡುವುದು, ಸಂದೇಶಗಳನ್ನು ರವಾನಿಸುವುದು ಇತ್ಯಾದಿ ಹಿರಿಯ ಅಧಿಕಾರಿಗಳ ಸಣ್ಣಪುಟ್ಟ ಕೆಲಸಗಳನ್ನು ಮಾಡುವುದು ಇವರ ಜವಾಬ್ದಾರಿಯಾಗಿರುತ್ತದೆ. ಆದರೆ, ಪೊಲೀಸ್ ಪೇದೆಯಾಗಿ ತರಬೇತಿ ಹೊಂದಿದ ಆರ್ಡರ್ಲಿ ಪೊಲೀಸರನ್ನು ಮನೆಯ ಕೆಲಸಕ್ಕಾಗಿ ಬಳಸಿಕೊಳ್ಳುವ ದುರ್'ಪರಂಪರೆ ಬೆಳೆದುಬಂದಿದೆ. ಮನೆಯಲ್ಲಿ ಬಟ್ಟೆ ಹೊಗೆಯುವುದು, ಮನೆ ಒರೆಸುವುದು, ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡುವುದು ಇತ್ಯಾದಿ ವೈಯಕ್ತಿಕ ಕೆಲಸಗಳಿಗೆ ಇವರ ದುರ್ಬಳಕೆಯಾಗುತ್ತಿದೆ. ಇಂಥ ಗುಲಾಮೀಯ ವ್ಯವಸ್ಥೆಯನ್ನು ನಿಲ್ಲಿಸಬೇಕೆಂಬ ಕೂಗು ಬಹಳ ಕಾಲದಿಂದ ಕೇಳಿಬರುತ್ತಿದೆ.

ಪೊಲೀಸ್​ ಇಲಾಖೆಯ ಅಧಿಕಾರಿಗಳ ಮನೆಯಲ್ಲಿ ಆರ್ಡರ್ಲಿಗಳಾಗಿ ಕಾರ್ಯನಿರ್ವಹಿಸ್ತಿರೋರ ಸಂಖ್ಯೆ ಬರೋಬ್ಬರಿ 1,239 ಮಂದಿ. ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಪ್ರಮುಖ ಅಧಿಕಾರಿಗಳ ಮನೆಯಲ್ಲಿ  ಆಡರ್ಲಿಗಳಾಗಿ ಕೆಲಸ ಮಾಡಲಾಗುತ್ತಿದೆ. ಅಂಥ ಕೆಲ ವಿವರಗಳು ಇಲ್ಲಿವೆ.

ಯಾರಾರ ಮನೆಯಲ್ಲಿ ಆರ್ಡರ್ಲಿಗಳಿದ್ದಾರೆ..?

1) ಕೆ.ಜೆ. ಜಾರ್ಜ್, ನಗರಾಭಿವೃದ್ಧಿ ಸಚಿವರು
ಟಿ.ಎಂ.ಚಿಕ್ಕಣ್ಣ, ಆಡರ್ಲಿಯಾಗಿ ನಿಯೋಜನೆ

2) ಆರ್.ಕೆ.ದತ್ತಾ, ಪೊಲೀಸ್​ ಮಹಾನಿರ್ದೇಶಕ
ಒಟ್ಟು 5 ಮಂದಿ ಆಡರ್ಲಿಗಳ ನಿಯೋಜನೆ - ಅಂಜನ್​'​ಮೂರ್ತಿ, ಮುನಿಸಿದ್ದಪ್ಪ, ಕುಮಾರ್​, ಶ್ರೀನಿವಾಸ, ಚಿಕ್ಕಸ್ವಾಮಿ, ಆಡರ್ಲಿಗಳಾಗಿ ಕಾರ್ಯನಿರ್ವಹಣೆ​

3) ಡಾ. ಪಿ.ರವೀಂದ್ರನಾಥ್​, ಎಡಿಜಿಪಿ
ಆಡರ್ಲಿಗಳು - ಶ್ರೀರಾಮುಲು, ರಾಜಶೇಖರ

4) ಪ್ರತಾಪರೆಡ್ಡಿ, ಎಡಿಜಿಪಿ, ಸಿಒಡಿ
ಆರ್ಡರ್ಲಿಗಳು - ಶ್ರೀನಿವಾಸ್​, ಎಸ್​.ಮಂಜುನಾಥ್​

5) ಸುನೀಲ್​ಕುಮಾರ್​, ಎಡಿಜಿಪಿ., ಎಂ.ಡಿ. ಪೊಲೀಸ್​ ಹೌಸಿಂಗ್​ ಬೋರ್ಡ್
ಆರ್ಡರ್ಲಿಗಳು: ಎಸ್​.ಎಫ್​.ಕಾಡಾರ್​, ಸಿ.ಗಂಗಾಧರ

6) ಕಮಲ್​ ಪಂಥ್, ಎಡಿಜಿಪಿ, ಆಡಳಿತ
ಆರ್ಡರ್ಲಿ: ಕೆ.ಆರ್.ಮಹದೇವಯ್ಯ,

7) ಎಚ್​.ಎನ್.ಸತ್ಯನಾರಾಯಣರಾವ್​, ಎಡಿಜಿಪಿ, ಕಾರಾಗೃಹ
ಆರ್ಡರ್ಲಿ: ಸಿ.ಎಸ್​.ಸುಬ್ರಮಣಿಯನ್​

8) ಎಂ.ಎನ್​.ರೆಡ್ಡಿ, ಡಿಜಿಪಿ, ಗೃಹರಕ್ಷಕ ದಳ
ಆರ್ಡರ್ಲಿ: ರವಿಕುಮಾರ್​

9) ಮಾಲಿನಿ ಕೃಷ್ಣಮೂರ್ತಿ, ಅಡಿಷನಲ್​ ಕಮಿಷನರ್
ಆರ್ಡರ್ಲಿಗಳು: ಎಂ.ಮುನಿಯಪ್ಪ, ಜೆ.ನಿತ್ಯಾನಂದ

10) ಅರುಣ್​ ಚಕ್ರವರ್ತಿ, ಐಜಿಪಿ- ಐಎಸ್​ಡಿ
ಆರ್ಡರ್ಲಿಗಳು: ಟಿ.ಚಿಕ್ಕನಂಜೇಗೌಡ, ಎಚ್​.ಸುರೇಶ್​

11) ಚರಣ್ ​ರೆಡ್ಡಿ, ಐಜಿಪಿ, ಎಸ್​ಐಟಿ
ಆರ್ಡರ್ಲಿಗಳು: ಕೆ.ಹನುಮಂತರಾಯಪ್ಪ, ಎಂ.ನಿರಂಜನ್​

12) ಸುಬ್ರಹ್ಮಣೇಶ್ವರರಾವ್​, ಪೊಲೀಸ್​ ಕಮಿಷನರ್​ ಮೈಸೂರು
ಆರ್ಡರ್ಲಿಗಳು: ಎಂ.ಸಿ.ಮಾರುತಿ

13) ಹೇಮಂತ್​ ನಿಂಬಾಳ್ಕರ್, ಐಜಿಪಿ, ಅಡಿಷನಲ್​ ಸಿ.ಪಿ.ಬೆಂಗಳೂರು ಪೂರ್ವ

14) ಅಜಯ್​ ಹಿಲ್ಹೋರಿ, ಡಿಸಿಪಿ, ಬೆಂಗಳೂರು ಪೂರ್ವ
ಆರ್ಡರ್ಲಿ: ಮಲ್ಲಯ್ಯ

15) ಬಿ.ಎನ್​.ಎಸ್​.ರೆಡ್ಡಿ, ಐಜಿಪಿ., ಕೆಎಸ್​ಆರ್​ಟಿಸಿ ಬೆಂಗಳೂರು
ಆರ್ಡರ್ಲಿ: ಎಸ್​.ವೈ.ರವಿಕುಮಾರ್​

ವರದಿ: ಜಿ. ಮಹಾಂತೇಶ್​, ಸುವರ್ಣನ್ಯೂಸ್​

click me!