
ಬೆಂಗಳೂರು [ಆ.12]: ಪ್ರವಾಹ ಹಾಗೂ ಮಳೆ ಪರಿಣಾಮ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಐತಿಹಾಸಿಕ ಸ್ಥಳಗಳಾದ ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಹಂಪಿ, ನವ ವೃಂದಾವನ ಗಡ್ಡೆ ಜಲಾವೃತವಾಗಿವೆ.
ತುಂಗಭದ್ರಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಭಾನುವಾರ 2.29 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದಾಗಿ ಇತಿಹಾಸ ಪ್ರಸಿದ್ಧ ಹಂಪಿಯ ರಾಮಲಕ್ಷ್ಮಣ ದೇವಸ್ಥಾನ, ಕೋಟಿಲಿಂಗ, ಪುರಂದರದಾಸ ಮಂಟಪ, ವೈದಿಕ ಮಂಟಪ, ಕಡ್ಲೆಕಾಳು ಗಣಪ, ಸಾಸಿವೆ ಗಣಪ ಸೇರಿದಂತೆ 63 ದೇವಾಲಯ, ಸ್ಮಾರಕಗಳು ಜಲಾವೃತವಾಗಿವೆ.
ನವವೃಂದಾವನ ಗಡ್ಡೆ ಜಲಾವೃತ
ತುಂಗಭದ್ರಾ ಜಲಾಶಯದಿಂದ ಅಧಿಕ ನೀರು ನದಿಗೆ ಬಿಟ್ಟಪರಿಣಾಮವಾಗಿ ಗಂಗಾವತಿ ತಾಲೂಕಿನ ಆನೆಗೊಂದಿ ನವ ವೃಂದಾವನಗಡ್ಡೆ ಜಲಾವೃತಗೊಂಡಿದೆ. ಅಲ್ಲಿನ 9 ಯತಿವರೇಣ್ಯರ ವೃಂದಾವನವಿರುವ ಗಡ್ಡೆಯ ಸುತ್ತಲೂ ನೀರು ಭರ್ತಿಯಾಗಿದೆ. ತುಂಗಭದ್ರಾ ನದಿಯ ಮಧ್ಯದಲ್ಲಿರುವ ಶ್ರೀಕೃಷ್ಣದೇವರಾಯ ಸಮಾಧಿ, 60 ಕಾಲಿನ ಮಂಟಪ, ನದಿಯಲ್ಲಿರುವ ಸೂರ್ಯನಾರಾಯಣ ದೇವಸ್ಥಾನ ಜಲಾವೃತಗೊಂಡಿವೆ.
ಚಿಂತಾಮಣಿ ದೇವಸ್ಥಾನ: ಆನೆಗೊಂದಿಯ ತುಂಗಭದ್ರ ಪಕ್ಕದಲ್ಲಿರುವ ಚಿಂತಾಮಣಿ ನರಸಿಂಹಸ್ವಾಮಿಯ ದೇವಸ್ಥಾದ ಮೆಟ್ಟಿಲುಗಳವರೆಗೂ ನದಿ ನೀರು ಬಂದಿದ್ದರಿಂದ ಸಂಪರ್ಕ ಕಡಿತಗೊಳಿಸಲಾಗಿದೆ. ಅಲ್ಲದೇ ಹನುಮನಹಳ್ಳಿಯಿಂದ ಋುಷಿಮುಖ ಪರ್ವತ ಸಂಪರ್ಕ ಕಡಿತಗೊಂಡಿದೆ. ಋುುಷಿ ಮುಖ ಪರ್ವತ ಜಲಾವೃತಗೊಂಡಿದ್ದು, ಪುರಂದರ ಮಂಟಪವು ಜಲಾವೃತಗೊಂಡಿದೆ.
ಐಹೊಳೆ, ಪಟ್ಟದಕಲ್ಲು: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ ಐಹೊಳೆ ಹಾಗೂ ಬಾದಾಮಿ ತಾಲೂಕಿನಲ್ಲಿರುವ ಪಟ್ಟದಕಲ್ಲು ಪ್ರದೇಶವು ಮಲಪ್ರಭಾ ನದಿಯ ಪ್ರವಾಹದಿಂದ ಜಲಾವೃತವಾಗಿದೆ. ಪಟ್ಟದಕಲ್ಲು ಕಳೆದ ನಾಲ್ಕೈದು ದಿನದ ಹಿಂದೆಯೇ ಜಲಾವೃತವಾಗಿದ್ದು, ಪ್ರವಾಹ ಇನ್ನೂ ಇಳಿಮುಖವಾಗಿಲ್ಲ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಸವಣ್ಣನ ಐಕ್ಯ ಸ್ಥಳವಾದ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಲಪ್ರಭಾ, ಘಟಪ್ರಭಾ ಎರಡೂ ನದಿಗಳು ಕೃಷ್ಣಾ ನದಿಯನ್ನು ಸೇರುತ್ತವೆ. ಈ ಸ್ಥಳ ಕೂಡ ಈಗ ಮುಳುಗಡೆಯಾಗಿದೆ.
ಉಳಿದಂತೆ ಬಾದಾಮಿ ತಾಲೂಕಿನಲ್ಲಿರುವ ವಿಭೂತಿ ತಯಾರಿಕಾ ಕೇಂದ್ರವಾದ ಶಿವಯೋಗ ಮಂದಿರ ಮಲಪ್ರಭಾ ನದಿ ಪ್ರವಾಹದಿಂದ ಜಲಾವೃತವಾಗಿದೆ. ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕೆ ಅವರು ಐಕ್ಯವಾಗಿರುವ ಸ್ಥಳ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿದೆ. ಇದು ಕೂಡ ಮಲಪ್ರಭಾ ನದಿಯಿಂದ ಮುಳುಗಡೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.