ಆರೋಪಿಗಳನ್ನು ಬೇಕಾಬಿಟ್ಟಿ ಗಡಿಪಾರು ಮಾಡುವಂತಿಲ್ಲ: ಹೈ ಕೋರ್ಟ್

By Web DeskFirst Published Jul 17, 2018, 12:02 PM IST
Highlights

-ಆರೋಪಿಗಳನ್ನು ಬೇಕಾಬಿಟ್ಟಿ ಗಡಿಪಾರಿಗೆ ಹೈಕೋರ್ಟ್ ಅಂಕುಶ 

-ಬೇಕಾಬಿಟ್ಟಿ ಗಡಿಪಾರು ಮಾಡುವುದರಿಂದ ವ್ಯಕ್ತಿಯ ಮೂಲಭೂತ ಹಕ್ಕುಗಳ ಮೊಟಕು 

-ಗಡಿಪಾರು ಆದೇಶ ಮಾಡುವುದಕ್ಕೆ ಸಕಾರಣಗಳನ್ನು  ನೀಡಬೇಕು

ಬೆಂಗಳೂರು (ಜು. 17): ಕ್ರಿಮಿನಲ್ ಆರೋಪಕ್ಕೆ ಗುರಿಯಾಗಿರುವವನ್ನು ಗಡಿಪಾರು ಮಾಡಿ ಆದೇಶ ಹೊರಡಿಸುವ ಮುನ್ನ ಅವರ ವಿರುದ್ಧದ ಪ್ರಕರಣಗಳನ್ನು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಕೂಲಂಕಷ ಪರಿಶೀಲನೆ ನಡೆಸಬೇಕು. ಸಕಾರಣಗಳಿಲ್ಲದೆ ಗಡಿಪಾರು ಆದೇಶಗಳನ್ನು ಹೊರಡಿಸುವುದರಿಂದ ಆ ವ್ಯಕ್ತಿಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ತಮ್ಮನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಆರು ತಿಂಗಳ ಕಾಲ ಗಡೀಪಾರು ಮಾಡಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಮತ್ತು ಆ ಆದೇಶವನ್ನು ಮಾನ್ಯ ಮಾಡಿದ ಗೃಹ ಇಲಾಖೆ ಕಾರ್ಯದರ್ಶಿ ಕ್ರಮವನ್ನು ರದ್ದುಪಡಿಸುವಂತೆ ಕೋರಿ ಹಿಂದೂ ಜಾಗರಣ ವೇದಿಕೆಯ (ಹಿಂಜಾವೇ) ದಕ್ಷಿಣ ಕನ್ನಡ ಜಿಲ್ಲೆ ಸಂಚಾಲಕ ರತ್ನಾಕರ ಶೆಟ್ಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜಿಲ್ಲಾಧಿಕಾರಿ ಮತ್ತು ಗೃಹ ಇಲಾಖೆ ಕಾರ್ಯದರ್ಶಿ ಆದೇಶವನ್ನು ರದ್ದುಪಡಿಸಿತು. ಗಡಿಪಾರು ಆದೇಶ ಮಾಡುವುದಕ್ಕೆ ಸಕಾರಣಗಳನ್ನು ನೀಡಬೇಕು. ಪೊಲೀಸರು ಹೇಳಿದ್ದಾರೆ ಎನ್ನುವ ಕಾರಣಕ್ಕೆ ಗಡಿಪಾರು ಆದೇಶ ಕೈಗೊಳ್ಳುವ ನಿರ್ಧಾರ ಮಾಡಬಾರದು. ಆರೋಪಿಯಿಂದ ತಕ್ಷಣಕ್ಕೆ ಸಮಾಜಕ್ಕೆ ಬೆದರಿಕೆ ಹಾಗೂ ಅಂತಹವರನ್ನು ಉಳಿಯಲು ಬಿಟ್ಟರೆ ಸಮಸ್ಯೆ ಇದೆ ಅಂದಾಗ ಮಾತ್ರ ಗಡಿಪಾರು ಮಾಡಬೇಕಾಗುತ್ತೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ?:

ರತ್ನಾಕರ ಶೆಟ್ಟಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡುತ್ತಿದ್ದಾರೆ ಎಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆರು ತಿಂಗಳ ಕಾಲ ಗಡಿಪಾರು ಮಾಡಿ ಜಿಲ್ಲಾಧಿಕಾರಿಗಳು 2017 ರ ಡಿಸೆಂಬರ್ 28 ರಂದು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಶೆಟ್ಟಿ ಅವರು ಮೇಲ್ಮನವಿ ಪ್ರಾಧಿಕಾರವಾದ ಗೃಹ ಇಲಾಖೆ ಕಾರ್ಯದರ್ಶಿ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಕಾರ್ಯದರ್ಶಿಯು ಮೇಲ್ಮನವಿ ತಿರಸ್ಕರಿಸಿದ್ದರು. 

click me!