ಸಿದ್ದರಾಮಯ್ಯಗೆ ಸೇರಿ 24 ಶಾಸಕರಿಗೆ ಎದುರಾಯ್ತು ಸಂಕಷ್ಟ

By Web DeskFirst Published Aug 21, 2019, 7:40 AM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಒಟ್ಟು 24 ಮಂದಿ ಶಾಸಕರಿಗೆ ಇದೀಗ ಸಂಕಷ್ಟ ಎದುರಾಗಿದೆ. 

ಬೆಂಗಳೂರು [ಆ.21]:   ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಪತ್ರ ನೀಡಿದ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಒಟ್ಟು 24 ಜನಪ್ರತಿನಿಧಿಗಳಿಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಪೊಲೀಸ್‌ ಅಧಿಕಾರಿಗಳ ವರ್ಗಾವಣೆಗೆ ಅಕ್ರಮವಾಗಿ ಶಿಫಾರಸು ಪತ್ರ ನೀಡಿದ ರಾಜ್ಯದ 24 ಜನಪ್ರತಿನಿಧಿಗಳ ವಿರುದ್ಧ ಎಸ್‌ಐಟಿ ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅಖಿಲ ಕರ್ನಾಟಕ ಪೊಲೀಸ್‌ ಮಹಾಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಮಂಗಳವಾರ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ದಿನೇಶ್‌ ಗುಂಡೂರಾವ್‌, ರಾಮಲಿಂಗಾರೆಡ್ಡಿ, ಆರ್‌. ನರೇಂದ್ರ, ಬಿ.ನಾಗೇಂದ್ರ, ಶಾಮನೂರು ಶಿವಶಂಕರಪ್ಪ, ಎನ್‌.ಎ. ಹ್ಯಾರಿಸ್‌, ಡಾ.ಯತೀಂದ್ರ, ಬಿ.ಎಸ್‌. ಸುರೇಶ್‌, ಅನಿಲ್‌ ಚಿಕ್ಕಮಾದು, ಅಖಂಡ ಶ್ರೀನಿವಾಸ ಮೂರ್ತಿ, ಎಸ್‌.ಎನ್‌.ಸುಬ್ಬಾರೆಡ್ಡಿ, ಬಿ.ಕೆ. ಸಂಗಮೇಶ್ವರ, ಸುರೇಶ್‌ ಗೌಡ, ವಿ. ಮುನಿಯಪ್ಪ, ಎಂ.ಕೃಷ್ಣಪ್ಪ, ಬಿ.ಶಿವಣ್ಣ, ಕನೀಝ್‌ ಫಾತಿಮಾ, ಸಂಸದ ಡಾ. ಉಮೇಶ್‌ ಜಾಧವ್‌, ಮಾಜಿ ಶಾಸಕ ಸಂತೋಷ್‌ ಲಾಡ್‌ ಮತ್ತು ಸದ್ಯ ಅನರ್ಹಗೊಂಡಿರುವ ರೋಶನ್‌ ಬೇಗ್‌, ಡಾ.ಕೆ.ಸುಧಾಕರ್‌ ಹಾಗೂ ಮುನಿರತ್ನ ಅವರಿಗೆ ನ್ಯಾಯಪೀಠ ನೋಟಿಸ್‌ ಜಾರಿಗೊಳಿಸಿದೆ. ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಲಾಗಿದೆ.

ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯನ್ನು ಪೊಲೀಸ್‌ ಸಿಬ್ಬಂದಿ ನೇಮಕಾತಿ ಮಂಡಳಿಯೇ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ 2006ರಲ್ಲಿ ತೀರ್ಪು ನೀಡಿದೆ. ಆದರೂ ಶಾಸಕರು, ಸಂಸದರ ಶಿಫಾರಸಿನ ಮೇರೆಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ದೋಸ್ತಿ ಸರ್ಕಾರದಲ್ಲಿ ನಿಯಮ ಬಾಹಿರವಾಗಿ ಶಿಫಾರಸು ಮಾಡಿದ 24 ಜನಪ್ರತಿನಿಧಿಗಳ ವಿರುದ್ಧ 2019ರ ಜ.12ರಂದು ಸ್ಪೀಕರ್‌ಗೆ ದೂರು ನೀಡಲಾಗಿದೆ. ಆ ದೂರಿನ್ವಯ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಎಸ್‌ಐಟಿ ತನಿಖೆಗೆ ನಿರ್ದೇಶಿಸಬೇಕು. ಪೊಲೀಸ್‌ ಸಿಬ್ಬಂದಿ ನೇಮಕಾತಿ ಮಂಡಳಿ ಮೂಲಕವೇ ಅಧಿಕಾರಿಗಳ ವರ್ಗಾವಣೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

click me!