ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಗರಂ!

By Web DeskFirst Published Oct 24, 2018, 11:36 AM IST
Highlights

ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಅಧಿಕಾರಿಗಳ ತಲೆಯಲ್ಲಿ ಸ್ಪಷ್ಟಕಾರ‍್ಯ ಯೋಜನೆ ಇಲ್ಲ. ಬಿಬಿಎಂಪಿಗೆ ಆಗಿಲ್ಲ ಎಂದರೆ ಬೇರೆ ಸಂಸ್ಥೆಗೆ ಗುಂಡಿ ಮುಚ್ಚೋ ಕಾರ್ಯ ವರ್ಗಾವಣೆ ಮಾಡುತ್ತೇವೆ. ಬಿಬಿಎಂಪಿ ಅಧಿಕಾರಿಗಳಿಗೆ ಹೈಕೋರ್ಟ್ ಸ್ಪಷ್ಟ  ಸೂಚನೆ.

ಬೆಂಗಳೂರು(ಅ.24): ರಸ್ತೆ ಗುಂಡಿಗಳ ಸಮರ್ಪಕ ಭರ್ತಿಗೆ ಬಿಬಿಎಂಪಿ ಅಧಿಕಾರಿಗಳು ಕಾಳಜಿ ತೋರುತ್ತಿಲ್ಲ. ಈ ವಿಚಾರದಲ್ಲಿ ಅವರ ತಲೆಯಲ್ಲಿ ಸ್ಪಷ್ಟಕಾರ್ಯ ಯೋಜನೆಗಳೇ ಇಲ್ಲವಾಗಿದೆ. ಸಾರ್ವಜನಿಕ ಕೆಲಸಗಳನ್ನು ಮಾಡಿ ಮುಗಿಸುವ ಸ್ಪಷ್ಟತೆ ಹಾಗೂ ನಿಖರತೆ ಇಲ್ಲವಾಗಿದ್ದು, ಅವರಿಗೆ ನಾಚಿಕೆ ಆಗಬೇಕು ಎಂದು ಹೈಕೋರ್ಟ್‌ ಮತ್ತೇ ಬಿಬಿಎಂಪಿ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದೆ.

ರಸ್ತೆ ಗುಂಡಿ ಸರಿಯಾಗಿ ಮುಚ್ಚದೇ ಇರುವುದು ಬಿಬಿಎಂಪಿಯ ವೈಫಲ್ಯ ಎಂದು ಪರಿಗಣಿಸಲಾಗುವುದು. ರಸ್ತೆ ಗುಂಡಿ ಮುಚ್ಚದಿದ್ದರೆ ಬೆಂಗಳೂರು ಸ್ಥಗಿತ ಆಗಲಾರದು. ಬದಲಾಗಿ ಪಾಲಿಕೆಯನ್ನು ಮುಚ್ಚಿ, ರಸ್ತೆ ಗುಂಡಿ ಭರ್ತಿ ಕಾರ್ಯವನ್ನು ಬೇರೊಂದು ಸಂಸ್ಥೆಗೆ ವಹಿಸಲಾಗುವುದು ಎಂದು ಬಿಬಿಎಂಪಿಗೆ ಹೈಕೋರ್ಟ್‌ ಎಚ್ಚರಿತು.

ರಸ್ತೆ ಗುಂಡಿಗಳ ಭರ್ತಿಗೆ ಸಂಬಂಧಿಸಿದಂತೆ ಕೋರಮಂಗಲದ ವಿಜಯನ್‌ ಮೆನನ್‌ ಹಾಗೂ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬಿಬಿಎಂಪಿ ಕಾರ್ಯ ವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಬಿಬಿಎಂಪಿ ಕಳೆದ 15 ದಿನಗಳಿಂದ ರಸ್ತೆಗುಂಡಿ ಮುಚ್ಚಿಲ್ಲ. ಕಳೆದ ವಿಚಾರಣೆ ವೇಳೆ ಫೋಟೋ ಸಹಿತ ಮಾಹಿತಿ ನೀಡಿದ್ದ 43 ಜಾಗಗಳಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಿಲ್ಲ. ಹಾಗೆಯೇ, ಗುಂಡಿ ಭರ್ತಿ ಕುರಿತ ದೂರು ಸ್ವೀಕರಿಸಲು ಬಿಬಿಎಂಪಿ ರೂಪಿಸಿರುವ ಆ್ಯಪ್‌ ಹೇಗೆ ಕಾರ್ಯ ನಿರ್ವಹಿಸುತ್ತಿದೆ? ಎಷ್ಟುಪ್ರಕರಣ ಬಗೆಹರಿಸಲಾಗಿದೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಅರಿವಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು.

ಅದಕ್ಕೆ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಪ್ರತಿಕ್ರಿಯಿಸಿ, ಇಂದಿಗೆ ರಸ್ತೆ ಗುಂಡಿಗಳ ಪ್ರಮಾಣ ಶೂನ್ಯವಾಗಿದೆ ಎಂಬುದಾಗಿ ಬಿಬಿಎಂಪಿ ವರದಿ ಸಲ್ಲಿಸುತ್ತದೆ ಎಂಬುದಾಗಿ ನ್ಯಾಯಾಲಯವು ನಿರೀಕ್ಷೆ ಮಾಡಿತ್ತು. ನೀವು ನಗರದಲ್ಲಿ ಎಲ್ಲಾ ಗುಂಡಿ ಮುಚ್ಚಿದ್ದೀರಾ? ಅರ್ಜಿದಾರರು ತಿಳಿಸಿದ್ದ ಪ್ರದೇಶಗಳ ರಸ್ತೆ ಗುಂಡಿಗಳನ್ನು ಏಕೆ ಮುಚ್ಚಿಲ್ಲ ಎಂದು ಬಿಬಿಎಂಪಿ ವಕೀಲರನ್ನು ಪ್ರಶ್ನಿಸಿದರು.

ಬಿಬಿಎಂಪಿ ವಕೀಲರು ಉತ್ತರಿಸಿ, ಅರ್ಜಿದಾರರು ಗುರುತಿಸಿರುವ ವಿವಿಧ 43 ಜಾಗಗಳ ಪೈಕಿ ರಸ್ತೆ ಗುಂಡಿ ಪೈಕಿ 16 ಕಡೆ ಮುಚ್ಚಿದ್ದೇವೆ. ಬೆಂಗಳೂರು ಜಲಮಂಡಳಿ ಕಾಮಗಾರಿ ನಡೆಸುತ್ತಿರುವ ಕಾರಣ ಉಳಿದ ಕಡೆ ಮುಚ್ಚಿಲ್ಲ ಎಂದರು.

ರಸ್ತೆ ಮಧ್ಯದ ಗುಂಡಿಗೆ ಜಲ ಮಂಡಳಿ ಹೊಣೆಯಲ್ಲ:
ಬೆಂಗಳೂರು ಜಲಮಂಡಳಿ ಪರ ವಕೀಲರು, ಅರ್ಜಿದಾರರು ದೂರುತ್ತಿರುವ 43 ಜಾಗಗಳ ಪೈಕಿ ಕೆಲವೆಡೆ ಜಲಮಂಡಳಿ ಕಾಮಗಾರಿ ನಡೆಸುತ್ತಿದ್ದು, ಅಲ್ಲಲ್ಲಿ ರಸ್ತೆ ಅಗೆದಿರುವುದೇ ಕಾರಣ ಎಂದು ಗುಂಡಿ ಮುಚ್ಚಿಲ್ಲ ಎಂಬುದು ನಿಜ. ಆದರೆ, ರಸ್ತೆಗಳ ಎರಡು ಬದಿ ಮಾತ್ರ ಜಲಮಂಡಳಿ ಗುಂಡಿ ತೋಡುತ್ತೇವೆ. ಒಂದು ಬದಿ ಕುಡಿಯುವ ನೀರಿನ ಹಾಗೂ ಮತ್ತೊಂದು ಬದಿ ಚರಂಡಿ ಪೈಪ್‌ ಲೈನ್‌ ಇರುತ್ತವೆ. ಹಳೆಯದಾದ ಚರಂಡಿ ಪೈಪ್‌ಲೈನ್‌ ಬದಲಾಯಿಸಲಾಗುತ್ತಿದೆ. ಆದರೆ, ರಸ್ತೆ ಮಧ್ಯದ ಗುಂಡಿ ಭರ್ತಿಗೆ ಜಲಮಂಡಳಿ ಹೊಣೆಯಲ್ಲ ಎಂದು ತಿಳಿಸಿದರು.

ಇದರಿಂದ ಬಿಬಿಎಂಪಿ ವಿರುದ್ಧ ಬೇಸರಗೊಂಡ ಮುಖ್ಯ ನ್ಯಾಯಮೂರ್ತಿಗಳು, ಒಂದೊಂದು ಗುಂಡಿಯನ್ನೂ ಮುಚ್ಚಿದ್ದೀರಾ ಎಂದು ನ್ಯಾಯಾಲಯವು ನಿಮ್ಮನ್ನು ಕೇಳಬೇಕೇ? ನಿಮ್ಮ ಅಧಿಕಾರಿಗಳಿಗೆ ಕೊಂಚವೂ ಗಂಭೀರತೆ ಇಲ್ಲ. ಕಾಲಹರಣ ಮಾಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಮೈ ಕೊಡವಿಕೊಂಡು ಕೆಲಸ ಮಾಡಬೇಕು. ತಪ್ಪು ಜಲಮಂಡಳಿಯದ್ದೋ ಅಥವಾ ಬಿಬಿಎಂಪಿಯದ್ದೋ ಎಂಬುದು ನಮಗೆ ಗೊತ್ತಿಲ್ಲ. ಇಂದು ಅರ್ಜಿದಾರರು ತಿಳಿಸಿರುವ 43 ಜಾಗಗಳಲ್ಲಿನ ರಸ್ತೆಗುಂಡಿ ಇವತ್ತೇ ಮುಚ್ಚಿ ಕೋರ್ಟ್‌ಗೆ ವರದಿ ಒಪ್ಪಿಸಬೇಕು ಎಂದು ಬಿಬಿಎಂಪಿ ಪರ ವಕೀಲರಿಗೆ ಖಡಕ್‌ ಆಗಿ ಸೂಚಿಸಿ ವಿಚಾರಣೆಯನ್ನು ಮಧ್ಯಾಹ್ನ 1.30ಕ್ಕೆ ಮುಂದೂಡಿತು. ಮಧ್ಯಾಹ್ನ 1.30ಕ್ಕೆ ಮತ್ತೆ ಕಲಾಪ ಶುರುವಾದಾಗ ಬಿಬಿಎಂಪಿ ಪರ ವಕೀಲರು ಉತ್ತರಿಸಿ, 14 ಜಾಗಗಳಲ್ಲಿನ ರಸ್ತೆ ಗುಂಡಿ ಮುಚ್ಚಲಾಗಿದೆ. ಉಳಿದೆಡೆ ಜಲಮಂಡಳಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಇನ್ನು ಸುಮ್ಮನಿರಲ್ಲ:
ಇದನ್ನು ಪರಿಗಣಿಸಿದ ನ್ಯಾಯಪೀಠ, ರಸ್ತೆ ಗುಂಡಿಗಳನ್ನು ಭರ್ತಿ ಮಾಡದಿದ್ದರೆ ನ್ಯಾಯಾಲಯವು ಸುಮ್ಮನಿರುವುದಿಲ್ಲ ಎಂದು ಹೇಳಿತು. ನಂತರ ರಾತ್ರಿ ವೇಳೆಯೂ ರಸ್ತೆ ಗುಂಡಿ ಮುಚ್ಚಿದ ಕಾರ್ಯವನ್ನು ಪರಿಶೀಲಿಸಬಹುದು ಎಂದು ಮಿಲಿಟರಿ ಎಂಜಿನಿಯರಿಂಗ್‌ ಸೂಪರಿಂಟೆಂಡೆಂಟ್‌ ದಿನೇಶ್‌ ಅಗರ್ವಾಲ್‌ ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಉಮಾ ಅವರ ನೇತೃತ್ವದ ಕೋರ್ಟ್‌ ಕಮಿಷನ್‌ಗೆ ಸೂಚಿಸಿ ವಿಚಾರಣೆಯನ್ನು ಅ.25ಕ್ಕೆ ಮುಂದೂಡಿತು.

ಶನಿವಾರಗಳಂದು ವಿಶೇಷ ವಿಚಾರಣೆ
ರಸ್ತೆ ಗುಂಡಿ ಭರ್ತಿಗೆ ಸಂಬಂಧಿಸಿದ ಅರ್ಜಿಗಳನ್ನು ರಜಾ ದಿನವಾದ ಶನಿವಾರಗಳಂದು ವಿಶೇಷವಾಗಿ ವಿಚಾರಣೆ ನಡೆಸಲು ಹೈಕೋರ್ಟ್‌ ನಿರ್ಧರಿಸಿದೆ. ರಸ್ತೆ ಗುಂಡಿ ಪ್ರಕರಣವು ಇತರೆ ಪ್ರಕರಣಗಳ ವಿಚಾರಣೆಗೆ ರಸ್ತೆ ಗುಂಡಿಯಂತೆ ಅಡ್ಡಿಯಾಗಿದೆ. ಈ ಅರ್ಜಿ ವಿಚಾರಣೆಗೆ ಸಾಕಷ್ಟುಸಮಯ ತೆಗೆದುಕೊಳ್ಳುತ್ತಿರುವ ಕಾರಣ ಬೇರೆ ಪ್ರಕರಣಗಳ ವಿಚಾರಣೆಗೆ ಸಮಯ ಸಾಕಾಗುತ್ತಿಲ್ಲ. ಹೀಗಾಗಿ ಶನಿವಾರದಂದು ವಿಶೇಷವಾಗಿ ಈ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತು.

click me!