
ಬೆಂಗಳೂರು : ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ನಡುವೆ ಸಂಚರಿಸಲು ‘ಕಾಮನ್ ಫೇರ್ ಕಾರ್ಡ್’ ಪರಿಚಯಿಸಲು ಚಿಂತಿಸಿದ್ದು, ಉಪಚುನಾವಣೆ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.
ಶುಕ್ರವಾರ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ದಿನ ಮೆಟ್ರೋದಲ್ಲಿ ಸುಮಾರು ಐದು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮೆಟ್ರೋ ರೈಲುಗಳನ್ನು ಮೂರು ಬೋಗಿಗಳಿಂದ ಆರು ಬೋಗಿ ರೈಲುಗಳನ್ನಾಗಿ ಹಂತ ಹಂತವಾಗಿ ಪರಿವರ್ತಿಸಲಾಗುವುದು. ಆ ನಂತರ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯೂ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಇದರಿಂದ ಬಿಎಂಟಿಸಿ ಹಾಗೂ ಮೆಟ್ರೋದಲ್ಲಿ ಸಂಚರಿಸಲು ಒಂದೇ ಕಾರ್ಡ್ ಪರಿಚಯಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಕುರಿತು ಸಂಬಂಧಪಟ್ಟಅಧಿಕಾರಿಗಳು, ಸಚಿವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ದುಂದು ವೆಚ್ಚಕ್ಕೆ ಕಡಿವಾಣ: ಬಿಎಂಆರ್‌ಸಿಎಲ್, ಬಿಬಿಎಂಪಿ, ಬಿಎಂಆರ್‌ಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ ಸೇರಿದಂತೆ ಎಲ್ಲ ಮೆಟ್ರೋ ಪಾಲಿಟಿನ್ ನಿಗಮಗಳ ಮಧ್ಯೆ ಸಮನ್ವಯತೆ ಕಾಪಾಡಲು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದ ಅವರು, ಬಿಎಂಆರ್‌ಸಿಎಲ್‌ನಿಂದ ತಿಂಗಳಿಗೆ .30 ಕೋಟಿ ಆದಾಯ ಬರುತ್ತಿದೆ. ಅದರಲ್ಲಿ .24 ಕೋಟಿ ವೆಚ್ಚವಾಗುತ್ತಿದೆ. ಭದ್ರತಾ ಸಿಬ್ಬಂದಿ, ಟಿಕೆಟ್ ವಿತರಕರು ಸೇರಿದಂತೆ ಅನಗತ್ಯ ಮಾನವ ಸಂಪನ್ಮೂಲ ಬಳಕೆಗೆ ಕಡಿವಾಣ ಹಾಕಿ ತಿಂಗಳಲ್ಲಿ ಕನಿಷ್ಠ .5 ಕೋಟಿ ವೆಚ್ಚ ಕಡಿಮೆ ಮಾಡಲು ಸೂಚಿಸಿದ್ದೇನೆ ಎಂದರು.
ಮೆಟ್ರೋ 2ನೇ ಹಂತ 2020ರೊಳಗೆ ಮೈಸೂರು ರಸ್ತೆ, ತುಮಕೂರು ರಸ್ತೆ ಪೂರ್ಣಗೊಳ್ಳಲಿದೆ. ವೈಟ್‌ಫೀಲ್ಡ್, ಆರ್‌ವಿ ರಸ್ತೆ, ಬೊಮ್ಮಸಂದ್ರ ಮಾರ್ಗವು 2021ಕ್ಕೆ ಪೂರ್ಣಗೊಂಡರೆ, ಗೊಟ್ಟಿಗೆರೆ- ನಾಗವಾರ ಮಾರ್ಗ 2023ಕ್ಕೆ ಮುಗಿಯಲಿದೆ. ಈ ಹಂತಕ್ಕೆ .26,405 ಕೋಟಿ ವೆಚ್ಚವಾಗಲಿದೆ. ಆದರೆ ಕಾಮಗಾರಿ ಪೂರ್ಣಗೊಳ್ಳುವುದರೊಳಗೆ ವೆಚ್ಚ .32 ಸಾವಿರ ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ನಿರ್ಮಾಣ ಕುರಿತು 15 ದಿನದೊಳಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಕ್ರೀಡಾಪಟು ವಿಶ್ವನಾಥ್‌ಗೆ ಹಣ ನೀಡಲು ಸೂಚನೆ
ಅಂತಾರಾಷ್ಟ್ರೀಯ ಕ್ರೀಡಾಪಟು ವಿಶ್ವನಾಥ್ ಗಾಣಿಗ ಅವರಿಗೆ .60 ಲಕ್ಷ ಮೊತ್ತವನ್ನು ಕ್ರೀಡಾ ಇಲಾಖೆಯಿಂದ ಕೊಡಬೇಕಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು, ಒಲಂಪಿಕ್‌ನಲ್ಲಿ ಪದಕ ಗೆದ್ದಿರುವ ಪ್ರತಿ ಕ್ರೀಡಾಪಟುವಿಗೂ ಇಲಾಖೆ ಗೌರವ ಮೊತ್ತ ಕೊಡಲಿದೆ. ವಿಶ್ವನಾಥ್ ಗಾಣಿಗ ಅವರಿಗೆ ಕೊಡದಿದ್ದರೆ ಕೂಡಲೇ ಕ್ರೀಡಾ ಇಲಾಖೆಗೆ ಹಣ ನೀಡುವಂತೆ ಸೂಚಿಸುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.