ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದ ಸಮೀಕ್ಷೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸದೇ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದರಿಂದ ಕರ್ನಾಟಕದ ಒಟ್ಟು 10 ಸಾವಿರ ಹಳ್ಳಿಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲು ಹೇಳಿದ್ದಾರೆ.
ಬೆಂಗಳೂರು: ಪಶ್ಚಿಮ ಘಟ್ಟದಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸದೆ ನಿರ್ಲಕ್ಷ್ಯ ಧೋರಣೆ ತಾಳಿದೆ. ಇದರಿಂದ ಸುಮಾರು 10 ಸಾವಿರ ಹಳ್ಳಿಗಳು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ. ಹೀಗಂತ ದಕ್ಷಿಣ ಕನ್ನಡದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ದೆಹಲಿಯ ತಮ್ಮ ನಿವಾಸ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಕಸ್ತೂರಿರಂಗನ್ ವರದಿಯ ಬಗ್ಗೆಗಿನ ಅಂತಿಮ ಸಮೀಕ್ಷಾ ವರದಿ ಸಲ್ಲಿಸಲು ಆಗಸ್ಟ್ 25 ಕೊನೆಯ ದಿನವಾಗಿದ್ದು ಅದರೊಳಗೆ ಸಲ್ಲಿಸದೇ ಹೋದರೆ ರಾಜ್ಯದ ಸಾವಿರಾರು ಹಳ್ಳಿಗಳು ಸಂಕಷ್ಟಕ್ಕೀಡಾಗಲಿವೆ ಎಂದು ಹೇಳಿದರು.
‘ಬಿಜೆಪಿಯ ಸಂಸದರಾದ ನಾವು ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಮೀಕ್ಷಾ ವರದಿ ಸಿದ್ಧಪಡಿಸಲು ನೀಡಿರುವ ಗಡುವನ್ನು ವಿಸ್ತರಿಸುವಂತೆ ಕೋರಿ ಕೊಂಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಗಡುವನ್ನು ವಿಸ್ತರಿಸುತ್ತಾ ಬಂದಿತ್ತು. ಇದೀಗ ಅಂತಿಮ ಗಡುವನ್ನು ಆಗಸ್ಟ್ 25 ಕ್ಕೆ ನಿಗದಿ ಮಾಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ವರದಿ ಸಲ್ಲಿಸುವ ಗೊಡವೆಗೇ ಹೋಗಿಲ್ಲ ಎಂದರು.
ಒಂದು ವೇಳೆ ರಾಜ್ಯ ಸರ್ಕಾರ ಸಮರ್ಪಕವಾದ ಹಾಗು ತಳಮಟ್ಟದ ಅಧ್ಯಯನದಿಂದ ಕೂಡಿದ ಸಮೀಕ್ಷಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸದೇ ಹೋದರೆ ರಾಜ್ಯದ 10 ಜಿಲ್ಲೆಗಳ ಸಾವಿರಾರು ಹಳ್ಳಿಗಳು ಕಸ್ತೂರಿ ರಂಗನ್ ವರದಿಯಿಂದ ಸಂಕಷ್ಟಕ್ಕೆ ತುತ್ತಾಗಲಿದ್ದು ಇದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ’ ಎಂದು ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದರು.