ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮುಂದುವರಿಕೆ ಇಲ್ಲ?

By Web DeskFirst Published Aug 3, 2018, 7:36 AM IST
Highlights

ರಾಜ್ಯದಲ್ಲಿ ಈಗಾಗಲೇ ಮೈತ್ರಿ ಸರ್ಕಾರವನ್ನು ರಚನೆ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಮುಂದುವರಿಯುವುದು ಅನುಮಾನವಾಗಿದೆ. ಈ ಬಗ್ಗೆ ಸ್ಥಳೀಯ ಮುಖಂಡರಲ್ಲಿ ಅಪಸ್ವರ ಕೇಳಿ ಬಂದಿದೆ. 

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸವಾಲಿನಂತೆ ಎದುರಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉಭಯ ಪಕ್ಷಗಳ ಮೈತ್ರಿ ಏರ್ಪಡುವುದು ಅನುಮಾನವಾಗಿದೆ. ಉಭಯ ಪಕ್ಷಗಳಲ್ಲೂ 2- 3ನೇ ಸ್ತರದ ನಾಯಕರಿಂದ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅಪಸ್ವರ ಕೇಳಿಬಂದಿದ್ದು, ಸ್ಥಾನ ಹೊಂದಾಣಿಕೆ ಸಾಧ್ಯತೆ ಕಡಿಮೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಂಬರುವ ಲೋಕಸಭಾ ಚುನಾವಣೆಗೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬು ದರ ಬಗ್ಗೆ ಹಿಂದೆಯೇ ನಿರ್ಧಾರ ಪ್ರಕಟಿಸಲಾಗಿತ್ತು. ಆದರೂ ಇದುವರೆಗೆ ಅದರ ಬಗ್ಗೆ ಅಪಸ್ವರ, ವಿರೋಧ ಕೇಳಿಬರುತ್ತಲೇ ಇದೆ. ಹೀಗಿರುವಾಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾ ಣಿಕೆ ಬಗ್ಗೆ ಪ್ರಮುಖವಾಗಿ ಕಾಂಗ್ರೆಸ್‌ನಲ್ಲಿ ತೀವ್ರ ವಿರೋಧವಿದೆ. 

ಜೆಡಿಎಸ್‌ನಲ್ಲೂ ಅಷ್ಟಾಗಿ ಒಲವು ವ್ಯಕ್ತವಾಗಿಲ್ಲ. ಈ ನಡುವೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಸೇರಿ ಮೈತ್ರಿ ಕುರಿತು ಚರ್ಚೆ ನಡೆಸುವ ಸಂಬಂಧ ಭಾನುವಾರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಪಕ್ಷದ ಶಾಸಕರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ ನಂತರ ಸ್ಪಷ್ಟ ನಿಲುವು ಪ್ರಕಟಿಸುವ ಸಂಭವವಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಕುರಿತಂತೆ ಉಭಯ ಪಕ್ಷಗಳ ರಾಜ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕರು ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿ ಕೊಳ್ಳುವುದರಿಂದ ಅಗಬಹುದಾದ ಸಾಧಕ ಬಾಧಕಗಳ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಗುಮ್ಮಾಗಿ ಹೇಳಿದರು.

click me!