ಎಸ್ಸಿ, ಎಸ್ಟಿಗೆ ಬಂಪರ್‌! ರಾಜ್ಯ ಸರ್ಕಾರದಿಂದ ಹಲವು ಘೋಷಣೆ

By Kannadaprabha NewsFirst Published Sep 17, 2019, 7:18 AM IST
Highlights

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೆ ಕರ್ನಾಟಕ ಸರ್ಕಾರ ಬಂಪರ್ ಆಫರ್ ನೀಡಿದೆ. ಹಲವು ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು [ಸೆ.17]:  ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಸಮುದಾಯದವರು ಹಾಲು ಒಕ್ಕೂಟಗಳಿಗೆ ನೀಡುವ ಪ್ರತಿ ಲೀಟರ್‌ಗೆ ಕೊಡುತ್ತಿದ್ದ ಪ್ರೋತ್ಸಾಹಧನ ಒಂದು ರು. ಹೆಚ್ಚಳ, ಕೃಷಿ ಯಂತ್ರೋಪಕರಣಗಳ ಖರೀದಿ, ಹನಿ ನೀರಾವರಿ, ಪಾಲಿ ಹೌಸ್‌ ನಿರ್ಮಾಣ, ರೇಷ್ಮೆ ಕೃಷಿಗೆ ಶೆಡ್‌ ನಿರ್ಮಾಣಕ್ಕೆ ಶೇ.90ರಷ್ಟುಸಹಾಯಧನ ನೀಡಿಕೆ, ‘ಬಡವರ ಬಂಧು’ ಯೋಜನೆಯಡಿ ಪರಿಶಿಷ್ಟಮಹಿಳೆಯರಿಗೆ 10 ಸಾವಿರ ರು. ಸಾಲ ಸೌಲಭ್ಯ, ದೇವದಾಸಿಯರಿಗೆ 500 ರು. ಮಾಸಿಕ ಪಿಂಚಣಿ, ಸ್ವ ಸಹಾಯ ಗುಂಪುಗಳಿಗೆ ಬಡ್ಡಿ ರಹಿತವಾಗಿ ನೀಡುತ್ತಿದ್ದ ಸಾಲ ಎರಡು ಲಕ್ಷ ರು.ನಿಂದ ಐದು ಲಕ್ಷ ರು.ಗಳಿಗೆ ಹೆಚ್ಚಳ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪರಿಶಿಷ್ಟಜಾತಿಗಳ ವಿಶೇಷ ಘಟಕ ಯೋಜನೆಯಡಿ (ಎಸ್‌ಸಿಪಿ) 21,602.62 ಕೋಟಿ ರು. ಹಾಗೂ ಪರಿಶಿಷ್ಟಪಂಗಡ ಉಪ ಯೋಜನೆಯಡಿ (ಟಿಎಸ್‌ಪಿ) 8842.68 ಕೋಟಿ ರು. ಸೇರಿದಂತೆ ಒಟ್ಟು 30444.68 ಕೋಟಿ ರು. ವೆಚ್ಚ ಮಾಡಲು ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರಕ್ಕೆ ಬಜೆಟ್‌ ಮಂಡನೆ ಅಸಾಧ್ಯವಾಗಿರುವ ಕಾರಣ ಪರೋಕ್ಷವಾಗಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಜನರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಪ್ರಕಟಿಸುವ ಮೂಲಕ ಬಂಪರ್‌ ಕೊಡುಗೆ ನೀಡಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿರುವ 39 ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಆಗಸ್ಟ್‌ ಅಂತ್ಯಕ್ಕೆ ಶೇ.18ರಷ್ಟುಪ್ರಗತಿ ಸಾಧಿಸಲಾಗಿದೆ. ಆದರೆ ಇದು ಸಾಲದು, ಇನ್ನಷ್ಟುವೇಗದಿಂದ ಅನುಷ್ಠಾನ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವಿಶೇಷವಾಗಿ ಲೋಕೋಪಯೋಗಿ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಭಾರಿ ನೀರಾವರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಲ್ಲಿ ಖರ್ಚಾಗದೇ ಉಳಿಯಬಹುದಾದ ಸುಮಾರು 1157.55 ಕೋಟಿ ರು. ಅನುದಾನವನ್ನು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಜನರಿಗೆ ಮನೆ, ಅವರ ಕಾಲೊನಿಗಳ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಬಳಸಲಾಗುವುದು. ಸ್ಥಳೀಯ ಸಂಸ್ಥೆಗಳಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಅಡಿ ನೀಡಿರುವ ಅನುದಾನದಲ್ಲಿ ಶೇ.50ರಷ್ಟುಮೊತ್ತವನ್ನು ಪರಿಶಿಷ್ಟಜಾತಿ ಮತ್ತು ಪಂಗಡದ ಜನರಿಗೆ ಮನೆ ನಿರ್ಮಾಣಕ್ಕೆ ಉಪಯೋಗಿಸಲು ನೋಡಲ್ಸ್‌ ಏಜೆನ್ಸಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಎಸ್‌ಸಿಪಿ ಮತ್ತು ಟಿಎಸ್‌ಪಿ ಅಡಿಯಲ್ಲಿರುವ ಮೊತ್ತವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳದೇ ಕೇವಲ ಪರಿಶಿಷ್ಟಜಾತಿ ಮತ್ತು ಪಂಗಡಗಳ ಜನರಿಗೆ ಮನೆ ನಿರ್ಮಾಣ, ಕಾಲೋನಿಗಳ ರಸ್ತೆ ಇತ್ಯಾದಿಗಳಿಗೆ ಮಾತ್ರ ವೆಚ್ಚ ಮಾಡಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಎಸ್‌ಸಿ, ಎಸ್‌ಟಿಗೆ ಭರ್ಜರಿ ಕೊಡುಗೆ:

ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಪರಿಶಿಷ್ಟಸಮುದಾಯಗಳ ಜನರಿಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ.90ರಷ್ಟುಅನುದಾನ, ಹಸು, ಮೇಕೆ, ಕುರಿ ಸಾಕಾಣಿಕೆಗೆ ಪ್ರತಿ ಯೂನಿಟ್‌ಗೆ ಶೇ.90 ಅನುದಾನ ನೀಡಲಾಗುವುದು. ಈ ಸಮುದಾಯಗಳ ಜನರು ಉತ್ಪಾದಿಸುವ ಹಾಲಿಗೆ ಪ್ರತಿ ಲೀಟರ್‌ಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ಐದು ರು.ಗಳಿಂದ ಆರು ರು.ಗಳಿಗೆ ಹೆಚ್ಚಿಸಲಾಗಿದೆ. ತೋಟಗಾರಿಕೆ ಇಲಾಖೆಯಡಿ ಹನಿ ನೀರಾವರಿ ಮತ್ತು ಪಾಲಿ ಹೌಸ್‌ಗೆ ನೀಡುತ್ತಿದ್ದ ಸಬ್ಸಿಡಿಯನ್ನು ಶೇ.90ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಹಿಂದಿನ ಸರ್ಕಾರ ಪಾಲಿ ಹೌಸ್‌ಗೆ ಶೇ.25ರಷ್ಟುನೀಡುತ್ತಿತ್ತು, ಈಗ ಶೇ.90ಕ್ಕೆ ಏರಿಸಲಾಗಿದೆ ಎಂದು ವಿವರಿಸಿದರು.

‘ಬಡವರ ಬಂಧು’ ಯೋಜನೆಯಡಿ ನೂತನವಾಗಿ ಪರಿಶಿಷ್ಟಮಹಿಳೆಯರಿಗೆ 10 ಸಾವಿರ ರು. ಸಾಲ ಸೌಲಭ್ಯ ನೀಡಲಾಗುವುದು. ನಗರ ಪ್ರದೇಶದಲ್ಲಿ 100 ಅಂಗನವಾಡಿ ಕೇಂದ್ರ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದೇ ರೀತಿ ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 45 ವರ್ಷ ಮೇಲ್ಪಟ್ಟದೇವದಾಸಿಯರಿಗೆ ನೀಡುತ್ತಿದ್ದ 500 ರು.ಗಳ ಪಿಂಚಣಿ ಯೋಜನೆಯನ್ನು ಈಗ ಮುಂದುವರೆಸಲು ಉದ್ದೇಶಿಸಲಾಗಿದೆ.

ಪರಿಶಿಷ್ಟಸಮುದಾಯದ ಸ್ವ ಸಹಾಯ ಗುಂಪುಗಳಿಗೆ ಬಡ್ಡಿರಹಿತವಾಗಿ ನೀಡುತ್ತಿದ್ದ ಎರಡು ಲಕ್ಷ ರು.ಗಳ ಸಾಲದ ಮಿತಿಯನ್ನು ಐದು ಲಕ್ಷ ರು.ಗಳಿಗೆ ಹೆಚ್ಚಿಸಲಾಗುವುದು. ಶೇ.50ಕ್ಕಿಂತ ಹೆಚ್ಚು ಪರಿಶಿಷ್ಟಜಾತಿ ಮತ್ತು ಪಂಗಡಗಳ ಮಕ್ಕಳು ಹೆಚ್ಚಿರುವ ಶಾಲಾ-ಕಾಲೇಜುಗಳಲ್ಲಿ ಕಂಪ್ಯೂಟರ್‌ ಲ್ಯಾಬ್‌ ಆರಂಭಿಸಲಾಗುವುದು. ಅದೇ ರೀತಿ ಸಣ್ಣ ಕೈಗಾರಿಕೆ ಆರಂಭಿಸಲು ಶೆಡ್‌ ನಿರ್ಮಾಣಕ್ಕೆ ಶೇ.50ರಷ್ಟುಅನುದಾನ ನೀಡಲಾಗುವುದು. ಮಹಾನಗರ ಪಾಲಿಕೆಗಳಲ್ಲಿ ಪೌರ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಳ್ಳಲು ಆರು ಲಕ್ಷ ರು.ಗಳ ಅನುದಾನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಪ್ರವಾಸೋದ್ಯಮ ಇಲಾಖೆ ಮೂಲಕ ಟ್ಯಾಕ್ಸಿಯನ್ನು ಹೆಚ್ಚಿನ ಜನರಿಗೆ ನೀಡಲು, ದ್ರಾಕ್ಷಿ, ದಾಳಿಂಬೆ ಮುಂತಾದ ಬೆಳೆ ಬೆಳೆಯಲು ಹೆಚ್ಚಿನ ಅವಕಾಶ ಕಲ್ಪಿಸಲು, ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಹಿಂದಿನ ತಪ್ಪು ಸರಿಪಡಿಸಿದ್ದೇವೆ :  ಹಿಂದಿನ ಸರ್ಕಾರ ರಸ್ತೆ, ಮೇಲ್ಸೇತುವೆ, ಕಾರಿಡಾರ್‌ ಮುಂತಾದ ಯೋಜನೆಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಹಣ ನೀಡಲಾಗಿತ್ತು. ಈ ಯೋಜನೆಯಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಹೀಗಾಗಿ ಅಂತಹ ಹಣವನ್ನು ವಾಪಸ್‌ ಪಡೆದಿದ್ದೇವೆ, ಹಿಂದಿನ ಸರ್ಕಾರ ಮಾಡಿದ ತಪ್ಪು ಸರಿಪಡಿಸಿದ್ದೇವೆ, ಹೀಗಾಗಿ ಈ ಬಗ್ಗೆ ಯಾವ ತನಿಖೆಯ ಅಗತ್ಯವಿಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎಸ್‌.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಶಾಸಕ ರಾಜುಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ ಪರಿಶಿಷ್ಟಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಸಂಸದ ಉಮೇಶ್‌ ಜಾಧವ್‌ ಮುಂತಾದವರು ಪಾಲ್ಗೊಂಡಿದ್ದರು

click me!