ಸರ್ಕಾರದಿಂದ ರೈತರಿಗೆ ಮತ್ತೊಂದು ಬಂಪರ್

By Web DeskFirst Published Dec 15, 2018, 7:21 AM IST
Highlights

ಈಗಾಗಲೇ ರೈತರ ಸಾಲಮನ್ನಾ ಮಾಡಿರುವ ಕರ್ನಾಟಕ ಸರ್ಕಾರ ಇದೀಗ ರೈತರಿಗೆ ಮತ್ತೊಂದು ಶುಭಸುದ್ದಿ ನೀಡಲು ಚಿಂತನೆ ನಡೆಸಿದೆ. ಪಿಕಾರ್ಡ್ ಬ್ಯಾಂಕ್ ನಲ್ಲಿ ರೈತರು ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಚಿಂತನೆ ನಡೆಸಿದೆ. 

ವಿಧಾನ ಪರಿಷತ್‌ :  ರೈತರು ಪಿಕಾರ್ಡ್‌ ಬ್ಯಾಂಕ್‌ಗಳಲ್ಲಿ (ಭೂ ಅಭಿವೃದ್ಧಿ ಬ್ಯಾಂಕ್‌/ಸಹಕಾರ ಸಂಘ) ಟ್ರ್ಯಾಕ್ಟರ್‌ ಖರೀದಿ, ಭೂಮಿ ಹದ ಮಾಡುವುದು ಸೇರಿ ಮತ್ತಿತರ ಉದ್ದೇಶಗಳಿಗೆ ಪಡೆದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದ್ದಾರೆ.

ಶುಕ್ರವಾರ ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರ ಕೇವಲ ಬೆಳೆಸಾಲ ಮಾತ್ರ ಮನ್ನಾ ಮಾಡುವುದಾಗಿ ಘೋಷಿಸಿದ ಅನ್ವಯ ಬೆಳೆ ಸಾಲ ಮನ್ನಾ ಮಾಡಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಪಿಕಾರ್ಡ್‌ ಬ್ಯಾಂಕ್‌ಗಳು ಕೃಷಿಗೆ ಪೂರಕವಾದ ಚಟುವಟಿಕೆಗೆ ಸಾಲ ನೀಡುತ್ತವೆ, ಭೂಮಿ ಹದ ಮಾಡಲು, ಟ್ರ್ಯಾಕ್ಟರ್‌ ಖರೀದಿ ಮುಂತಾದ ಉದ್ದೇಶಗಳಿಗೆ ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡುತ್ತವೆ. ಹಾಗಾಗಿ ಇವುಗಳ ಸಾಲ ಮನ್ನಾ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಬದಲಾಗಿ ಈ ಬ್ಯಾಂಕಿನಲ್ಲಿ ಪಡೆದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಮೂಲಕ ಸಣ್ಣ ಪ್ರಮಾಣದ ನೆರವು ನೀಡುವ ಬಗ್ಗೆ ಈಗಾಗಲೇ ಚಿಂತನೆ ಮಾಡಲಾಗಿದೆ ಎಂದರು.

ಸಾಲ ಮನ್ನಾ ಯೋಜನೆಯ ಅನುಕೂಲ ಪಡೆಯಲು ಡಿ. 11ರವರೆಗೆ 14 ಲಕ್ಷ ರೈತರು ಮಾಹಿತಿ ಕೊಟ್ಟಿದ್ದಾರೆ. ಸಾಲ ಮನ್ನಾ ಅಡಿ ಈವರೆಗೆ 800 ಕೋಟಿ ರು.ಗಳನ್ನು ಅಪೆಕ್ಸ್‌ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಲಾಗಿದೆ. ಜುಲೈ ಅಂತ್ಯದವರೆಗೆ 9448 ಕೋಟಿ ರು.ಗಳನ್ನು ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗುವುದು. ಬರುವ ದಿನಗಳಲ್ಲಿ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದ 20 ಲಕ್ಷ ರೈತರು ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದ 22 ಲಕ್ಷ ರೈತರಿಗೂ ಋುಣಪತ್ರ ನೀಡಲಾಗುವುದು. ಪಿಕಾರ್ಡ್‌ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರಿಗೆ ನೋಟಿಸ್‌ ನೀಡದಂತೆ ತಾವು ಸೂಚನೆ ನೀಡಿರುವುದಾಗಿ ವಿವರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಮರಿತಿಬ್ಬೇಗೌಡ ಅವರು, ಸರ್ಕಾರ ವಾಣಿಜ್ಯ ಬ್ಯಾಂಕುಗಳ 45 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದೆ. ಪಿಕಾರ್ಡ್‌ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರು ಸಹ ತಮ್ಮ ಸಾಲ ಮನ್ನಾ ಮಾಡಲಾಗುತ್ತದೆ ಎಂದು ತಿಳಿದುಕೊಂಡು ಸಾಲದ ಕಂತು ಕಟ್ಟುತ್ತಿಲ್ಲ. ಇದರಿಂದ ಪಿಕಾರ್ಡ್‌ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಆಗುತ್ತಿಲ್ಲ, ಹೊಸ ಸಾಲವೂ ಸಿಗುತ್ತಿಲ್ಲ. ಹಾಗಾಗಿ ಪಿಕಾರ್ಡ್‌ ಬ್ಯಾಂಕ್‌ಗಳಲ್ಲಿರುವ ಅಂದಾಜು 2500 ಕೋಟಿ ರು. ಸಾಲವನ್ನು ಮನ್ನಾ ಮಾಡಿ ಎಂದು ಮನವಿ ಮಾಡಿದರು.

click me!