ವಿಷ ಪ್ರಸಾದ ಸೇವನೆ : ಏರುತ್ತಲೇ ಇದೆ ಸಾವಿನ ಸಂಖ್ಯೆ

By Web DeskFirst Published Dec 15, 2018, 7:08 AM IST
Highlights

ಚಾಮರಾಜನಗರದಲ್ಲಿ ಮಾರಮ್ಮನ ಪ್ರಸಾದ ಸೇವಿಸಿದ ಭಕ್ತರ ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. 11 ಮಂದಿ ಸಾವಿಗೀಡಾಗಿದ್ದು ,7 ಮಂದಿ ಸ್ಥಿತಿ ಗಂಭೀರವಾಗಿದೆ. 

ಮೈಸೂರು :  ಊರ ದೇಗುಲದ ಗೋಪುರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಸಾದ ಸೇವಿಸಿದ ಭಕ್ತರ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.   ಟೊಮೆಟೋ ಬಾತ್‌ ಸೇವಿಸಿದ 70ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದು, ಇವರಲ್ಲಿ 11 ಮಂದಿ ಅಸುನೀಗಿದ್ದಾರೆ. ಏಳು ಮಂದಿ ಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ದುರಂತಕ್ಕೆ ವಿಷಪ್ರಾಶನವೇ ಕಾರಣ ಎನ್ನಲಾಗುತ್ತಿದ್ದು, ಗೋಪುರ ನಿರ್ಮಾಣಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವಿನ ಪ್ರತಿಷ್ಠೆಯ ಜಗಳದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಕುರಿತು ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಗ್ರಾಮಸ್ಥರ ಆರೋಪದ ಮೇರೆಗೆ ಪೊಲೀಸರು ಪ್ರಸಾದ ಸಿದ್ಧಪಡಿಸಿದ್ದ ಬಾಣಸಿಗರಾದ ಪುಟ್ಟಸ್ವಾಮಿ, ಚಿನ್ನಪ್ಪಿ ಮತ್ತು ಮಾದೇಶ್‌ರನ್ನು ವಶಕ್ಕೆ ಪಡೆದಿದ್ದು, ಹಲವರ ವಿಚಾರಣೆ ಆರಂಭಿಸಿದ್ದಾರೆ.

ವಡ್ಡರದೊಡ್ಡಿ ಗ್ರಾಮದ ಶಾಂತರಾಜು, ಗೋಪಿಯಮ್ಮ, ಪಾಪಣ್ಣ, ದೊಡ್ಡಾಣೆ ಗ್ರಾಮದ ಅಣ್ಣಯಪ್ಪ, ಕೃಷ್ಣನಾಯಕ, ಶಿವು, ರಾಚಯ್ಯ ಮತ್ತು ಆರನೇ ತರಗತಿ ವಿದ್ಯಾರ್ಥಿನಿ ಅನಿತಾ, ಶಕ್ತಿವೇಲು (45), ಅವಿನಾಶ್‌(10) ಮೃತರು.

ಪ್ರಸಾದ ಸೇವಿಸಿ ಅಸ್ವಸ್ಥ: ಪ್ರಸಾದ ಸೇವಿಸಿದ ಕೆಲವೇ ಸಮಯದಲ್ಲಿ ವಿಲವಿಲನೆ ಒದ್ದಾಡಿದ ಭಕ್ತರು ಒಬ್ಬೊಬ್ಬರಾಗಿ ಕುಸಿದು ಬೀಳುತ್ತಿದ್ದಂತೆ ತಕ್ಷಣ ಅವರನ್ನು ಸಿಕ್ಕ ಸಿಕ್ಕ ವಾಹನಗಳಲ್ಲಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಮೊದಲಿಗೆ ಸುಳ್ವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಅನಿತಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ನಂತರ ಶಾಂತರಾಜು, ಗೋಪಿಯಮ್ಮ, ಪಾಪಣ್ಣ, ಅಣ್ಣಯಪ್ಪ ಹಾಗೂ ರಾಚಯ್ಯ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದ್ದ ಶಿವು ಜೆಎಸ್‌ಎಸ್‌ ಆಸ್ಪತ್ರೆ, ಕೃಷ್ಣನಾಯಕ ಮೈಸೂರಿನ ಕೆ.ಆರ್‌.ಆಸ್ಪತ್ರೆ ಹಾಗೂ ಬಾಲಕ ಅವಿನಾಶ್‌ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಶಕ್ತಿವೇಲು ಅವರನ್ನು ಮೈಸೂರು ಆಸ್ಪತ್ರೆಗೆ ತಡರಾತ್ರಿ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಆ್ಯಂಬುಲೆನ್ಸ್‌ನಲ್ಲೇ ಅಸುನೀಗಿದ್ದಾರೆ. ಹತ್ತು ಮಂದಿ ಸಾವಿನ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಸುಳ್ವಾಡಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಮೃತ ಕುಟುಂಬದವರ ದುಃಖ ಮುಗಿಲುಮುಟ್ಟಿದೆ. ಅಲ್ಲೀಗ ಸೂತಕದ ವಾತಾವರಣ ಮನೆ ಮಾಡಿದೆ.

ಆಗಿದ್ದೇನು?: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೇಂದ್ರ ಸ್ಥಾನದಿಂದ 40 ಕಿಲೋ ಮೀಟರ್‌ ದೂರದಲ್ಲಿರುವ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದಲ್ಲಿ ಗೋಪುರ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಿಲಾನ್ಯಾಸ, ಪೂಜೆ ಬಳಿಕ ನೆರೆದಿದ್ದ ನೂರಾರು ಭಕ್ತರಿಗೆ ಬೆಳಗ್ಗೆ ಟೊಮೆಟೋ ಬಾತ್‌ ಅನ್ನು ಪ್ರಸಾದದ ರೀತಿಯಲ್ಲಿ ವಿತರಿಸಲಾಗಿತ್ತು. ಈ ವೇಳೆ ಟೊಮೆಟೋ ಬಾತ್‌ನಲ್ಲಿ ವಿಚಿತ್ರ ವಾಸನೆ ಬರುತ್ತಿದ್ದರಿಂದ ಕೆಲವರು ಅದನ್ನು ತಿನ್ನಲು ನಿರಾಕರಿಸಿದ್ದರು. ಆದರೆ, ಉಳಿದವರು ದೇವರ ಪ್ರಸಾದ ಎನ್ನುವ ಕಾರಣಕ್ಕೆ ಸ್ವೀಕರಿಸಿದ್ದರು. ಇದಾದ ಕೆಲ ಸಮಯದಲ್ಲೇ ಹಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಕೆಲವರು ರಸ್ತೆ ಮಧ್ಯೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅಸ್ವಸ್ಥರನ್ನು ಮಾರ್ಟಳ್ಳಿ, ರಾಮಾಪುರ, ಕೌದಳ್ಳಿ, ಕಾಮಗೆರೆ ಹೋಲಿಕ್ರಾಸ್‌ ಮತ್ತು ಕೊಳ್ಳೇಗಾಲ ಉಪವಿಭಾಗ ಹಾಗೂ ಹನೂರಿನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತು.

ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ 25ಕ್ಕೂ ಹೆಚ್ಚು ಮಂದಿಯನ್ನು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ರವಾನಿಸಲಾಯಿತು. ಇವರಲ್ಲಿ 6 ಮಂದಿಯನ್ನು ಜೆಎಸ್‌ಎಸ್‌ ಆಸ್ಪತ್ರೆಗೆ, ಇನ್ನು ಕೆಲವರನ್ನು ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ.

ದನಗಾಹಿ, ಪ್ರಾಣಿ-ಪಕ್ಷಿಗಳೂ ಬಲಿ: ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಮೃತಪಟ್ಟವರಲ್ಲಿ ದೊಡ್ಡಾಣೆ ಗ್ರಾಮದ ಧನಗಾಹಿ ಅಣ್ಣಯ್ಯಪ್ಪಯೂ ಸೇರಿದ್ದಾನೆ. ಪ್ರಸಾದ ಸ್ವೀಕರಿಸಿ ಮನೆಗೆ ಹೋಗುತ್ತಿದ್ದಂತೆ ಅಣ್ಣಯ್ಯಪ್ಪ ಮಾರ್ಗ ಮಧ್ಯೆ ಕುಸಿದು ಬಿದ್ದಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಕಾಮಗೆರೆ ಹೋಲಿಕ್ರಾಸ್‌ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.

5 ಲಕ್ಷ ಪರಿಹಾರ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಾಗಿರುವವರನ್ನು ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ನಂತರ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರುಪಾಯಿ ಪರಿಹಾರ ಘೋಷಿಸಿದರು.

click me!