ಬಸ್‌ ಪ್ರಯಾಣ ದರ ಏರಿಕೆ? ಎಷ್ಟು..?

By Web DeskFirst Published Jan 6, 2019, 11:51 AM IST
Highlights

ಈಗಾಗಲೇ ಸುಮಾರು 700 ಕೋಟಿ ರು. ನಷ್ಟದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ತೈಲ ದರ ಏರಿಕೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಲಿದೆ. ಈಗಾಗಲೇ ಟಿಕೆಟ್‌ ದರ ಏರಿಕೆ ಸಂಬಂಧ ನಾಲ್ಕು ನಿಗಮಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಬೆಂಗಳೂರು :  ಪೆಟ್ರೋಲ್‌-ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಿಸಿ ಸಾರ್ವಜನಿಕರಿಗೆ ಶಾಕ್‌ ನೀಡಿರುವ ರಾಜ್ಯ ಸರ್ಕಾರ, ಇದೀಗ ಸರ್ಕಾರಿ ಬಸ್‌ ಟಿಕೆಟ್‌ ದರ ಹೆಚ್ಚಿ​ಸುವ ಸಾಧ್ಯ​ತೆಯೂ ಇದೆ.

ತೈಲದ ಮೇಲಿನ ತೆರಿಗೆ ಹೆಚ್ಚಳದಿಂದ ಲೀಟರ್‌ ಪೆಟ್ರೋಲ್‌-ಡೀಸೆಲ್‌ ದರ ಪ್ರತಿ ಲೀಟ​ರ್‌ಗೆ ಸುಮಾರು 1.80 ರು. ಹೆಚ್ಚಳವಾಗಿದೆ. ಈಗಾಗಲೇ ಸುಮಾರು 700 ಕೋಟಿ ರು. ನಷ್ಟದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಿಗೆ ತೈಲ ದರ ಏರಿಕೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಲಿದೆ. ಈಗಾಗಲೇ ಟಿಕೆಟ್‌ ದರ ಏರಿಕೆ ಸಂಬಂಧ ನಾಲ್ಕು ನಿಗಮಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಲೋಕಸಭಾ ಉಪಚುನಾವಣೆ ಎದುರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆ ಪ್ರಸ್ತಾವನೆಗೆ ಒಪ್ಪಿ ನೀಡಲು ಹಿಂದೇಟು ಹಾಕಿತ್ತು. ಬಳಿಕ ತೈಲ ದರ ಕೊಂಚ ಇಳಿಮುಖವಾಗಿದ್ದರಿಂದ ಪ್ರಯಾಣ ದರ ಏರಿಕೆ ವಿಚಾರ ಕೊಂಚ ತೆರೆಗೆ ಸರಿದಿತ್ತು. ಇದೀಗ ಮತ್ತೆ ತೈಲ ದರ ಏರಿಕೆಯಾಗಿರುವುದರಿಂದ ಪ್ರಯಾಣದ ದರ ಹೆಚ್ಚಳ ಪ್ರಸ್ತಾವನೆಗೆ ಮರುಜೀವ ಬಂದಿದೆ.

ಈ ಹಿಂದೆ ನಾಲ್ಕು ನಿಗಮಗಳಿಂದ ಶೇ.18ರಷ್ಟುಪ್ರಯಾಣ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದು ಸಾರ್ವಜನಿಕರಿಗೆ ದುಬಾರಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚರ್ಚಿಸಿ ಮರುಪ್ರಸ್ತಾವನೆ ಸಲ್ಲಿಸುವಂತೆ ಸರ್ಕಾರ ಸಾರಿಗೆ ನಿಗಮಗಳಿಗೆ ಸೂಚಿಸಿತ್ತು. ಇದೀಗ ಸರ್ಕಾರ ಶೇ.10ರಿಂದ 12 ರಷ್ಟುಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಿಂದಾಗಿ ಕಳೆದ ಅಕ್ಟೋಬರ್‌ವರೆಗೂ ತೈಲದರ ನಿರಂತರವಾಗಿ ಏರಿಕೆಯಾಗುತ್ತಿತ್ತು. ಹಾಗಾಗಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ಕ್ರಮವಾಗಿ ದಾಖಲೆಯ 85.70 ಮತ್ತು 76 ರು. ವರೆಗೂ ಏರಿಕೆಯಾಗಿತ್ತು. ಬಳಿಕ ಕಚ್ಚಾ ತೈಲ ದರ ಇಳಿಮುಖವಾಗಿದ್ದರಿಂದ ತೈಲ ದರವೂ ಗಣನೀಯವಾಗಿ ಇಳಿಕೆಯಾಗಿತ್ತು. ತೈಲ ದರ ಏರಿಕೆಯಿಂದ ಕಂಗೆಟ್ಟಿದ್ದ ಸಾರ್ವಜನಿಕರು ಇತ್ತೀಚೆಗೆ ದರ ಇಳಿಕೆಯಾಗಿದ್ದರಿಂದ ತುಸು ನಿರಾಳರಾಗಿದ್ದರು.

click me!