ಲೋಕಸಭಾ ಚುನಾವಣೆ : ತುಮಕೂರಿಗೆ ಶಾ

By Web DeskFirst Published Jan 6, 2019, 11:31 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ವಿವಿಧ ಪಕ್ಷಗಳು ಗೆಲುವಿಗಾಗಿ ಕಸರತ್ತು ಆರಂಭಿಸಿವೆ. ಈ ನಿಟ್ಟಿನಲ್ಲಿ ಜನವರಿ 9ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತುಮಕೂರಿಗೆ ಭೇಟಿ ನೀಡಲಿದ್ದಾರೆ. 

ಬೆಂಗಳೂರು :  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದತೆ ಕೈಗೊಳ್ಳುತ್ತಿರುವ ಬಿಜೆಪಿಯು ರಾಜ್ಯದ ಪ್ರಮುಖ ನಾಯಕರ ಸಭೆ ನಡೆಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜ.9ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಹಳೆ ಮೈಸೂರು ಭಾಗದ ಕೆಲ ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.

ತುಮಕೂರಿಗೆ ನೇರವಾಗಿ ಆಗಮಿಸುವ ಅಮಿತ್‌ಶಾ ಅಲ್ಲೇ ಹಳೇ ಮೈಸೂರು ಭಾಗದ ಲೋಕಸಭಾ ಕ್ಷೇತ್ರದ ಪ್ರಮುಖರ, ಪ್ರಭಾರಿ, ಸಹಪ್ರಭಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಜ.9ರ ಮಧ್ಯಾಹ್ನ 1 ಗಂಟೆಗೆ ಲೋಕಸಭಾ ಚುನಾವಣೆಯ ಸಿದ್ದತೆ ಕುರಿತು ಮಾತುಕತೆ ನಡೆಸಿ ಕೆಲವೊಂದು ತಂತ್ರಗಾರಿಕೆಯ ಸಲಹೆಗಳನ್ನು ನೀಡಲಿದ್ದಾರೆ. ಅಲ್ಲದೇ, ಕಾರ್ಯ ವೈಖರಿಯ ಕುರಿತು ಸೂಚನೆಗಳನ್ನು ನೀಡಲಿದ್ದಾರೆ. ಸಭೆಯಲ್ಲಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಕೆಲ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಮಧ್ಯಾಹ್ನ 3 ಗಂಟೆಗೆ ಲೋಕಸಭಾ ಕ್ಷೇತ್ರಗಳ ಬೂತ್‌ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಮುಂದಿನ ಚುನಾವಣೆಗೆ ಎದುರಿಸಬೇಕಾದ ಚುನಾವಣಾ ರಣತಂತ್ರದ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪ್ರಮುಖ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕ್ಷೇತ್ರದಲ್ಲಿ ಕೈಗೊಳ್ಳಬಹುದಾದ ಪ್ರವಾಸ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಇತರೆ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಗಳನ್ನು ನಡೆಸಿದ ಬಳಿಕ ಅಮಿತ್‌ ಶಾ ಅವರು ತುಮಕೂರಿನಲ್ಲಿಯೇ ಕೋರ್‌ ಕಮಿಟಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಪಕ್ಷದ ಸಂಘಟನೆ, ಚುನಾವಣೆಗೆ ಕೈಗೊಳ್ಳಬಹುದಾದ ಸಿದ್ಧತೆ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. ಸಭೆ ಬಳಿಕ ನೇರವಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

click me!