ಲಾಲು ಕೇಸ್ ಹಿಂದೆ ಕರ್ನಾಟಕ ಮಾಜಿ ಗೌರ್ನರ್

By Suvarna Web DeskFirst Published Dec 24, 2017, 11:40 AM IST
Highlights
  • ಟಿ.ಎನ್. ಚತುರ್ವೇದಿ ಸಿಎಜಿ ಆಗಿದ್ದಾಗಲೇ ಬಿಹಾರದ 950 ಕೋಟಿ ರು. ಮೇವು ಹಗರಣ ಪತ್ತೆ ಹಚ್ಚಿದ್ದರು
  • ಐಎಎಸ್ ಅಧಿಕಾರಿಯಾಗಿದ್ದ ಅಮಿತ್ ಖರೆ ಅವರು ಚಾಯ್‌ಬಾಸಾದಲ್ಲಿ ಪಶುಸಂಗೋಪನೆ ಇಲಾಖೆ ಮೇಲೆ ದಾಳಿ ನಡೆಸಿದಾಗ 100 ಕೋಟಿ ರು. ಹಗರಣ ಬೆಳಕಿಗೆ ಬಂದಿತ್ತು.

ಪಟನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಚುನಾವಣಾ ರಾಜಕಾರಣವನ್ನೇ ಹೆಚ್ಚೂಕಡಿಮೆ ಕೊನೆಗಾಣಿಸಿರುವ ಮೇವು ಹಗರಣವನ್ನು ಮೊದಲು ಬಯಲಿಗೆ ಎಳೆದವರು 2002ರಿಂದ 2007ರವರೆಗೆ ಕರ್ನಾಟಕ ರಾಜ್ಯಪಾಲರಾಗಿದ್ದ ತ್ರಿಲೋಕಿನಾಥ ಚತುರ್ವೇದಿ.

ಹೌದು. 2ಜಿ ಹಾಗೂ ಕಲ್ಲಿದ್ದಲು ಹಗರಣಗಳಂತೆಯೇ ಬಿಹಾರದ ಮೇವು ಹಗರಣವನ್ನು ಮೊದಲು, ಅಂದರೆ 1984ರಲ್ಲೇ ಬಯಲಿಗೆ ತಂದಿದ್ದು ಅಲ್ಲಿನ ಮಹಾಲೇಖಪಾಲರಾಗಿದ್ದ ಟಿ.ಎನ್.ಚತುರ್ವೇದಿ. ಆದರೆ ಅದು ಹೆಚ್ಚು ಗಮನಕ್ಕೆ ಬಂದಿರಲಿಲ್ಲ.

ಬಿಹಾರ ಖಜಾನೆ ಇಲಾಖೆಯ ಮಾಸಿಕ ಖಾತೆ ವಿವರ ಸಲ್ಲಿಕೆಯನ್ನು ಮಂದಗತಿಯಲ್ಲಿ ಮಾಡಲಾಗಿದೆ ಎಂದು ವರದಿ ನೀಡಿದ್ದ ಚತುರ್ವೇದಿ ಅವರು 100 ಕೋಟಿ ರು. ಅಕ್ರಮದ ವಾಸನೆಯನ್ನು ಗ್ರಹಿಸಿದ್ದರು. 1989ರಲ್ಲಿ ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಲಾಲು ಯಾದವ್ ಬಿಹಾರ ಮುಖ್ಯಮಂತ್ರಿಯಾಗುವುದರೊಂದಿಗೆ ಬಿಹಾರದ ಪಶುಸಂಗೋಪನೆ ಇಲಾಖೆ ಭ್ರಷ್ಟಾಚಾರಕ್ಕೆ ಅನ್ವರ್ಥ ನಾಮವಾಯಿತು.

ಬಿಜೆಪಿ ನಾಯಕರಾದ ಸರಯೂ ರೈ, ಸುಶೀಲ್ ಮೋದಿ ಅವರು ಶಿವಾನಂದ ತಿವಾರಿ ಜತೆಗೂಡಿ ಹಗರಣದ ಬಗ್ಗೆ 1994ರಲ್ಲಿ ಪ್ರಸ್ತಾಪಿಸಿದ್ದರು. ಹಲವು ಸಂಸ್ಥೆಗಳ ಮೊರೆ ಹೋಗಿದ್ದರು. ಕೊನೆಗೆ ಹಣಕಾಸು ಕಾರ್ಯದರ್ಶಿಯಾಗಿದ್ದ ವಿಜಯಶಂಕರ್ ಅವರು ವಿವಿಧ ಜಿಲ್ಲಾ ಖಜಾನೆಗಳ ಬಗ್ಗೆ ತನಿಖೆಗೆ ಆದೇಶಿಸಿದ್ದರು.

ಯುವ ಐಎಎಸ್ ಅಧಿಕಾರಿಯಾಗಿದ್ದ ಅಮಿತ್ ಖರೆ ಅವರು ಚಾಯ್‌ಬಾಸಾದಲ್ಲಿ ಪಶುಸಂಗೋಪನೆ ಇಲಾಖೆ ಮೇಲೆ ದಾಳಿ ನಡೆಸಿದಾಗ 100 ಕೋಟಿ ರು. ಹಗರಣ ಬೆಳಕಿಗೆ ಬಂದಿತ್ತು. ಕೊನೆಗೆ ಅದು ವಿಸ್ತಾರವಾಗುತ್ತಾ ಹೋಗಿ 900 ಕೋಟಿ ರು.ಗೆ ಮುಟ್ಟಿತು.

click me!