ಕರಾವಳಿ, ಮಲೆನಾಡದಲ್ಲಿ ಮತ್ತೆ ಭೂಕುಸಿತದ ಆತಂಕ| ಅಧಿಕಾರಿಗಳಿಂದ ಬಿರುಕು ಬಿಟ್ಟಗುಡ್ಡವನ್ನು ಪರಿಶೀಲನೆ
ಬೆಂಗಳೂರು[ಆ.13]: ಪುತ್ತೂರು, ಕೆಮ್ಮಣ್ಣುಗುಂಡಿ, ಬೆಳ್ತಂಗಡಿ ಭಾಗದಲ್ಲಿ ಸೋಮವಾರ ಗುಡ್ಡ, ಧರೆ ಕುಸಿತ ಉಂಟಾಗಿದ್ದು, ಇದೀಗ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭೂಕುಸಿತದ ಆತಂಕ ಸೃಷ್ಟಿಸಿದೆ. ಇತೀಚೆಗಷ್ಟೆಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಭೂಕುಸಿತವಾಗಿರುವುದರಿಂದ ಸಹಜವಾಗಿ ಆತಂಕವನ್ನು ಹೆಚ್ಚಿಸಿದೆ.
ಪುತ್ತೂರು ನಗರ ವ್ಯಾಪ್ತಿಯ ತೆಂಕಿಲ ದರ್ಖಾಸು ಎಂಬಲ್ಲಿ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಗೇರು ತೋಟಗಳಿರುವ ಗುಡ್ಡವೊಂದರಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೋಮವಾರ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಗುಡ್ಡದಲ್ಲಿ ಭೂ ಕಂಪನ ನಡೆಯುವ ಸಾಧ್ಯತೆಗಳ ಅಪಾಯದ ಬಗ್ಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ
ಬಿರುಕು ಬಿಟ್ಟಗುಡ್ಡವನ್ನು ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಭೂ ವಿಜ್ಞಾನ ಇಲಾಖೆಯ ಪ್ರಭಾರ ನಿರ್ದೇಶಕಿ ಪದ್ಮಶ್ರೀ, ಗುಡ್ಡದ ರಚನಾ ವಲಯವು ಬಿರುಕು ಬಿಟ್ಟಿದ್ದು, ಇದು ಅಪಾಯಕಾರಿ ವಲಯವಾಗಿದೆ. ತೇವಾಂಶ ರಹಿತ ಪದರವು ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳುತ್ತಿದೆ. ಇದರಿಂದಾಗಿ ಮಣ್ಣಿನ ಒಳಗೆ ಶೇಖರಣೆಗೊಂಡ ನೀರು ಹೊರಹೋಗಲು ಸಾಧ್ಯವಾಗದೆ ಒತ್ತಡ ನಿರ್ಮಾಣಗೊಂಡು ಬಿರುಕು ಬಿಟ್ಟಿದೆ ಎಂದು ಹೇಳಿದ್ದಾರೆ.
ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಟ್ರಕ್ ಪಾಯಿಂಟ್ ಬಳಿ ಸೀಮೆಂಟ್ ರಸ್ತೆ ಕೆಳಗಡೆ ಸುಮಾರು 100 ಅಡಿ ಭೂ ಕುಸಿತ ಕಂಡು ಬಂದಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬೆಟ್ಟಪ್ರದೇಶದಲ್ಲಿ ಅಲ್ಲಲ್ಲಿ ಭಾರಿ ಭೂ ಕುಸಿತಗಳು ಸಂಭವಿಸಿದ್ದು, ಸುಮಾರು 10 ಕುಟುಂಬಗಳ 10ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ ಸಂಪೂರ್ಣ ನಾಶಗೊಂಡಿದೆ. ಸುಮಾರು 4 ಕಿ.ಮೀ. ಉದ್ದಕ್ಕೆ ಹೊಸ ನದಿ ಸೃಷ್ಟಿಯಾಗಿದೆ.