ಸರ್ಕಾರ ಬೀಳಿಸಲು ಹೇಳಿದ್ದೇ ಕಾಂಗ್ರೆಸ್‌ ನಾಯಕರು!: ಬಾಯ್ಬಿಟ್ಟ ಮುನಿರತ್ನ

By Web DeskFirst Published Jul 29, 2019, 8:39 AM IST
Highlights

ಸರ್ಕಾರ ಬೀಳಿಸಲು ಹೇಳಿದ್ದೇ ಕಾಂಗ್ರೆಸ್‌ ನಾಯಕರು!| ಮುಂಬೈಗೆ ಹೋಗಲು ಪ್ರಚೋದನೆ ನೀಡಿದ್ದೂ ಅವರೇ| ಬೆಂಗಳೂರಿಗೆ ಬಂದು ಹೇಳುವೆ: ಮುನಿರತ್ನ ಹೊಸ ಬಾಂಬ್‌| ಅವರಿಗೆ ಸರ್ಕಾರ ಬೀಳಿಸಬೇಕಿತ್ತು, ಈಗ ನಮ್ಮ ತಲೆಗೆ ಕಟ್ಟಿದ್ದಾರೆ| ಕಾಂಗ್ರೆಸ್‌ನ ಎಲ್ಲಾ 75 ಶಾಸಕರೂ ಅತೃಪ್ತರೇ| ಪಕ್ಷ ಈಗ ಮನೆಯೊಂದು ಮೂರು ಬಾಗಿಲು ಆಗಿದೆ!

ಬೆಂಗಳೂರು[ಜು.29]: ಮೈತ್ರಿ ಸರ್ಕಾರ ಉರುಳಿಸುವ ಸಲುವಾಗಿ ನಮಗೆ ರಾಜೀನಾಮೆ ನೀಡಿ ಮುಂಬೈಗೆ ತೆರಳಲು ಪ್ರಚೋದನೆ ನೀಡಿದ್ದೇ ಕಾಂಗ್ರೆಸ್‌ ನಾಯಕರು. ನಮ್ಮ ಮೂಲಕ ಸರ್ಕಾರ ಉರುಳಿಸುವ ಅವರ ಕೆಲಸ ಮಾಡಿಕೊಂಡು ಒಳಗೊಳಗೆ ಖುಷಿಪಡುತ್ತಿದ್ದಾರೆ. ಆ ನಾಯಕರು ಯಾರಾರ‍ಯರು ಎಂದು ಬೆಂಗಳೂರಿಗೆ ಬಂದ ಬಳಿಕ ಎಲ್ಲರೂ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸುವುದಾಗಿ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮುನಿರತ್ನ ಹೊಸ ಬಾಂಬ್‌ ಸಿಡಿಸಿದ್ದಾರೆ.

14 ಶಾಸಕರನ್ನು ಅನರ್ಹಗೊಳಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡ ನಾವು ಮಾತ್ರ ಅತೃಪ್ತರಲ್ಲ. ಕಾಂಗ್ರೆಸ್‌ನಲ್ಲಿ ಒಟ್ಟು 75 ಶಾಸಕರೂ ಅತೃಪ್ತರಿದ್ದಾರೆ. ಪಕ್ಷ ಈಗ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಸರ್ಕಾರ ಉರುಳಿಸಲು ನಮಗೆ ಪ್ರಚೋದನೆ ಮಾಡಿದವರು ಯಾರು? ರಾಹುಲ್‌ ಗಾಂಧಿ ಅವರ ಜತೆ ಚರ್ಚೆ ಮಾಡಿದ್ದು ಯಾರು? ಮಾಜಿ ಪ್ರಧಾನಿ ದೇವೇಗೌಡರು ರಾಹುಲ್‌ ಗಾಂಧಿ ಜತೆ ಏನು ಚರ್ಚೆ ಮಾಡಿದ್ದರು ಎಂಬುದು ಬಹಿರಂಗವಾಗಲಿ ಎಂದು ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದ್ದಾರೆ.

ಲೋಕಸಭಾ ಚುನಾವಣೆ ನಂತರ ಸರ್ಕಾರ ಕೆಡವಲೇಬೇಕೆಂದು ಸಾಕಷ್ಟುಸಾರಿ ಕಾಂಗ್ರೆಸ್‌ ನಾಯಕರೇ ಸಭೆ ನಡೆಸಿದ್ದಾರೆ. ಇದೀಗ ಕುಮಾರಸ್ವಾಮಿಯವರ ಮೇಲೆ ಪ್ರೀತಿ, ಅಭಿಮಾನ ಉಕ್ಕಿ ಹರಿಯುತ್ತಿದೆ. ಯಾವ ನಾಯಕರು ಸರ್ಕಾರ ಕೆಡವಲು ಪ್ರಯತ್ನಿಸಿದ್ದಾರೆ ಎಂಬುದನ್ನು ಬೆಂಗಳೂರಿಗೆ ಆಗಮಿಸಿದಾಗ ಎಲ್ಲ ಅತೃಪ್ತ ಶಾಸಕರು ಸೇರಿ ಸುದ್ದಿಗೋಷ್ಠಿ ನಡೆಸಿ ಹೇಳುತ್ತೇವೆ. ಕಾಂಗ್ರೆಸ್‌ ನಾಯಕರಿಗೆ ಮೈತ್ರಿ ಸರ್ಕಾರವನ್ನು ತೆಗೆಯಬೇಕಿತ್ತು. ತೆಗೆದಾಗಿದೆ. ಇದನ್ನು ಈಗ ನಮ್ಮ ತಲೆಗೆ ಕಟ್ಟುತ್ತಿದ್ದಾರೆ. ಒಳಗೊಳಗೆ ಅವರಿಗೆ ಖುಷಿ ಇದೆ. ಈಗ ನಮ್ಮ ಮೇಲೆ ಕ್ರಮ ಜರುಗಿಸದಿದ್ದರೆ ಜನ ಬೇರೆ ರೀತಿ ಅರ್ಥೈಸುತ್ತಾರೆ. ಪ್ರಚೋದನೆ ಮಾಡಿ ಕಳುಹಿಸಿ, ನಮ್ಮ ಮೇಲೆ ಕ್ರಮ ಜರುಗಿಸಿ, ತಮ್ಮ ಮೇಲೆ ತಪ್ಪು ಬರದಂತೆ ನಾಟಕವಾಡಿದ್ದಾರೆ ಎಂದು ಮುನಿರತ್ನ ಹರಿಹಾಯ್ದರು.

click me!