ಜೆಡಿಎಸ್‌ನಲ್ಲೀಗ ಖಾತೆ ಹಂಚಿಕೆ ಲೆಕ್ಕಾಚಾರ - ಯಾರಿಗೆ ಯಾವ ಖಾತೆ ಭಾಗ್ಯ?

First Published Jun 2, 2018, 7:49 AM IST
Highlights

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆ ಕ್ಯಾತೆ ಮುಗಿದಿದ್ದು, ಜೆಡಿಎಸ್‌ನಲ್ಲಿ ಇದೀಗ ಯಾವ ಖಾತೆ ಯಾರಿಗೆ ಹಂಚಿಕೆ ಮಾಡಬೇಕು ಎಂಬ ಲೆಕ್ಕಾಚಾರ ಶುರುವಾಗಿದೆ. ಈಗಾಗಲೇ ತೀರ್ಮಾನವಾಗಿರುವಂತೆ ಹಣಕಾಸು ಇಲಾಖೆಯು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಳಿ ಇರಲಿದ್ದು, ಜತೆಗೆ ಗುಪ್ತಚರ ಇಲಾಖೆಯನ್ನೂ ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ. 

ಬೆಂಗಳೂರು (ಜೂ. 02): ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆ ಕ್ಯಾತೆ ಮುಗಿದಿದ್ದು, ಜೆಡಿಎಸ್‌ನಲ್ಲಿ ಇದೀಗ ಯಾವ ಖಾತೆ ಯಾರಿಗೆ ಹಂಚಿಕೆ ಮಾಡಬೇಕು ಎಂಬ ಲೆಕ್ಕಾಚಾರ ಶುರುವಾಗಿದೆ.

ಈಗಾಗಲೇ ತೀರ್ಮಾನವಾಗಿರುವಂತೆ ಹಣಕಾಸು ಇಲಾಖೆಯು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಳಿ ಇರಲಿದ್ದು, ಜತೆಗೆ ಗುಪ್ತಚರ ಇಲಾಖೆಯನ್ನೂ ತಮ್ಮ ಬಳಿಯೇ ಇಟ್ಟುಕೊಳ್ಳಲಿದ್ದಾರೆ. ಲೋಕೋಪಯೋಗಿ ಇಲಾಖೆ ಎಚ್‌.ಡಿ.ರೇವಣ್ಣ ಅವರಿಗೆ ಬಹುತೇಕ ಖಚಿತ ಎನ್ನಲಾಗಿದ್ದು, ಇದರೊಂದಿಗೆ ಇಂಧನವನ್ನು ಸಹ ರೇವಣ್ಣ ಅವರಿಗೆ ನೀಡಬಹುದಾ ಎಂಬ ಕುತೂಹಲ ಮೂಡಿಸಿದೆ. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎರಡು ಖಾತೆಗಳನ್ನೂ ರೇವಣ್ಣ ಅವರೇ ಇಟ್ಟುಕೊಂಡಿದ್ದರು.

ಇನ್ನುಳಿದ ಖಾತೆಗಳಿಗೆ ಪಕ್ಷದಲ್ಲಿ ಭಾರೀ ಲಾಭಿ ಪ್ರಾರಂಭವಾಗಿದೆ. ಸಹಕಾರ ಇಲಾಖೆಯನ್ನು ಜಿ.ಟಿ.ದೇವೇಗೌಡ, ವಿಧಾನಪರಿಷತ್‌ಗೆ ಆಯ್ಕೆಯಾಗುವ ಬಿ.ಎಂ.ಫಾರೂಕ್‌ಗೆ ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಖಾತೆಗಳ ಹೊಣೆ ನೀಡುವ ಲೆಕ್ಕಾಚಾರ ನಡೆದಿದೆ. ಈ ನಡುವೆ ಪ್ರವಾಸೋದ್ಯಮ ಇಲಾಖೆಗೆ ಬಂಡೆಪ್ಪ ಕಾಶೆಂಪೂರ ಹೆಸರು ಸಹ ಕೇಳಿಬಂದಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಉನ್ನತ ಶಿಕ್ಷಣಗಳನ್ನು ಒಳಗೊಂಡಿರುವ ಶಿಕ್ಷಣ ಇಲಾಖೆ ಬಸವರಾಜ್‌ ಹೊರಟ್ಟಿಹಾಗೂ ವಿಶ್ವನಾಥ್‌ ಅವರಿಗೆ ಹಂಚಿಕೆಯಾಗುವ ಸಾಧ್ಯತೆ ಇದೆ. ಸಿ.ಎಸ್‌.ಪುಟ್ಟರಾಜುಗೆ ಸಾರಿಗೆ, ರೇಷ್ಮೆ ಇಲಾಖೆಯು ಬಿಎಸ್‌ಪಿ ಪಕ್ಷದ ಮಹೇಶ್‌, ಅಬಕಾರಿ ಇಲಾಖೆಯು ಡಿ.ಸಿ.ತಮ್ಮಣ್ಣ ಅವರಿಗೆ ನೀಡುವ ಸಂಬಂಧ ಚರ್ಚೆ ನಡೆದಿದೆ.

ಎ.ಟಿ.ರಾಮಸ್ವಾಮಿ, ಸತ್ಯನಾರಾಯಣ, ಶಿವಲಿಂಗೇಗೌಡ ಸೇರಿದಂತೆ ಇತರರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರ ಬಳಿ ಪ್ರಭಾವ ಬೀರುವ ಪ್ರಯತ್ನಗಳು ನಡೆಯುತ್ತಿವೆ. ಶನಿವಾರ ಅಥವಾ ಭಾನುವಾರದ ವೇಳೆಗೆ ಖಾತೆಗಳ ಹಂಚಿಕೆ ಕಾರ್ಯ ಮುಗಿಯಲಿದೆ. ಜೆಡಿಎಸ್‌ಗೆ ಕಡಿಮೆ ಸಂಖ್ಯೆಯಲ್ಲಿ ಖಾತೆಗಳು ಲಭ್ಯವಾಗಿದ್ದು, ಆಕಾಂಕ್ಷಿಗಳ ಪಟ್ಟಿದೊಡ್ಡದಿದೆ. ಹೀಗಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆಯೊಂದನ್ನು ನಡೆಸಿ ಖಾತೆ ಹಂಚಿಕೆಗಳ ಅಂತಿಮಪಟ್ಟಿಯನ್ನು ಸಿದ್ದಪಡಿಸಲಾಗುವುದು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 

click me!