ಲೋಕಸಭಾ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಿಜೆಪಿ ಮುಳುವಾಗುತ್ತಾ?

First Published Jun 2, 2018, 7:32 AM IST
Highlights

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಬಹಿರಂಗವಾಗಿಯೇ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನಿಲುವು ಕರ್ನಾಟಕದಲ್ಲಿ ಅತಿಹೆಚ್ಚು ಸ್ಥಾನ ಗಳಿಸಬೇಕು ಎಂಬ ಗುರಿ ಹೊಂದಿರುವ ಬಿಜೆಪಿಯ ಓಟಕ್ಕೆ ಬ್ರೇಕ್‌ ಹಾಕಬಹುದಾ ಎಂಬ ಕುತೂಹಲ ಮೂಡಿಸಿದೆ.

ಬೆಂಗಳೂರು (ಜೂ. 02):  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಬಹಿರಂಗವಾಗಿಯೇ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ನಿಲುವು ಕರ್ನಾಟಕದಲ್ಲಿ ಅತಿಹೆಚ್ಚು ಸ್ಥಾನ ಗಳಿಸಬೇಕು ಎಂಬ ಗುರಿ ಹೊಂದಿರುವ ಬಿಜೆಪಿಯ ಓಟಕ್ಕೆ ಬ್ರೇಕ್‌ ಹಾಕಬಹುದಾ ಎಂಬ ಕುತೂಹಲ ಮೂಡಿಸಿದೆ.

ಈಗ ನಡೆದಿರುವ ಸಮ್ಮಿಶ್ರ ಯಶಸ್ವಿ ಆಡಳಿತ ಸೂತ್ರದ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವುದೇ ಪ್ರಮುಖವಾಗಿದ್ದರಿಂದ ಉಭಯ ಪಕ್ಷಗಳು ಈಗಿನಿಂದಲೇ ರಣತಂತ್ರ ರೂಪಿಸುವ ಸಾಧ್ಯತೆಯಿದೆ.

ಆದರೆ, ಬಿಜೆಪಿ ಪಾಲಿಗೆ ಇದು ಅನಿರೀಕ್ಷಿತ ಬೆಳವಣಿಗೆ. ದಕ್ಷಿಣ ಭಾರತದ ಪೈಕಿ ಕರ್ನಾಟಕದಲ್ಲಿರುವ 28 ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಹೊಂದಿದ್ದಾರೆ. ಈ ಬಗ್ಗೆ ಹಿಂದೆಯೇ ಅವರು ರಾಜ್ಯ ನಾಯಕರಿಗೆ ಮಾಹಿತಿ ನೀಡಿದ್ದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರತ್ಯೇಕವಾಗಿ ಚುನಾವಣಾ ಕಣಕ್ಕಿಳಿದರೆ ಬಹುಶಃ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಅಷ್ಟುಸಂಖ್ಯೆಯ ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಾದರೂ ಆಗಬಹುದು.

ಶುಕ್ರವಾರ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಲೋಕಸಭಾ ಚುನಾವಣೆಯನ್ನು ಜಂಟಿಯಾಗಿಯೇ ಎದುರಿಸುವ ಒಪ್ಪಂದ ಮಾಡಿಕೊಂಡಿರುವುದನ್ನು ಘೋಷಣೆ ಮಾಡಿದ ನಂತರ ಬಿಜೆಪಿ ಪಾಳೆಯದಲ್ಲಿ ಸಣ್ಣ ಆತಂಕದ ಛಾಯೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಸದ್ಯದ ಮಾಹಿತಿ ಪ್ರಕಾರ 28 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್‌ ಹೆಚ್ಚೂ ಕಡಮೆ 20 ಮತ್ತು ಜೆಡಿಎಸ್‌ 8 ಹಂಚಿಕೊಳ್ಳಬಹುದು. ಇದರಲ್ಲಿ ಒಂದೆರಡು ಆಚೆ ಈಚೆ ಆಗಬಹುದು. ಚುನಾವಣೆ ಸಮೀಪಿಸಿದ ವೇಳೆಯೇ ಈ ಬಗ್ಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ.

ಕಾಂಗ್ರೆಸ್‌ ರಾಜ್ಯದ ಎಲ್ಲ ಭಾಗಗಳಲ್ಲೂ ಸಂಘಟನೆ ಹೊಂದಿದೆ. ಜೆಡಿಎಸ್‌ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಪ್ರಬಲವಾಗಿದೆ. ಈಗ ರಾಜ್ಯದಲ್ಲೂ ಉಭಯ ಪಕ್ಷಗಳ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಉತ್ತಮ ಆಡಳಿತ ಕೊಡುವುದರ ಜೊತೆಗೆ ಜಾತಿ ಸಮೀಕರಣ ರೂಪಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜಂಟಿಯಾಗಿ ಚುನಾವಣೆ ಎದುರಿಸಿದರೆ ಹೆಚ್ಚು ಸ್ಥಾನ ಗಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಹೀಗಾಗಿ, ಈಗ ಬಿಜೆಪಿ ಮುಂದೆ ಯಾವ ರಣತಂತ್ರ ಅನುಸರಿಸಲಿದೆ ಎಂಬುದನ್ನು ಕಾದು ನೋಡಬೇಕು.

click me!