
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಯನ್ನು ಹಿಂದೆಯೇ ಹೇಳಿರುವಂತೆ ಸೆಪ್ಟೆಂಬರ್ ಅಂತ್ಯದಲ್ಲೇ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣು ಗೋಪಾಲ್ ಹೇಳಿದ್ದಾರೆ. ಶನಿವಾರ ಸಂಜೆ ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಹೇಳಿರುವಂತೆ ಸೆಪ್ಟಂಬರ್ ಅಂತ್ಯದಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದರು.
ಆದರೆ, ಕಾಂಗ್ರೆಸ್ ಮೂಲಗಳು ಈ ಸಾಧ್ಯತೆಯನ್ನು ನಿರಾಕರಿಸುತ್ತವೆ. ‘ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಸತತ ಪ್ರಯತ್ನ ನಡೆಸುತ್ತಿರುವುದು ಹಾಗೂ ಬೆಳಗಾವಿಯ ಜಾರಕಿಹೊಳಿ ಸಹೋದರರ ಭಿನ್ನಮತದಂತಹ ಪರಿಸ್ಥಿತಿ ಇರುವ ಈ ಹಂತದಲ್ಲಿ ಸಂಪುಟ ವಿಸ್ತರಣೆ ಎಂಬ ಜೇನುಗೂಡಿಗೆ ಪಕ್ಷದ ಹೈಕಮಾಂಡ್ ಕೈ ಹಾಕುವ ಸಾಧ್ಯತೆ ಕಡಿಮೆ’ ಎಂದೇ ಹೇಳಲಾಗುತ್ತಿದೆ. ಆದಾಗ್ಯೂ ಕೆ.ಸಿ. ವೇಣುಗೋಪಾಲ್ ಮಾತ್ರ ಸಮನ್ವಯ ಸಮಿತಿ ಸಭೆ ಬಳಿಕ ಘೋಷಿಸಿದಂತೆ ಸೆಪ್ಟೆಂಬರ್ ತಿಂಗಳ ಕೊನೆ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ನಾವು ಹೇಳಿದಂತೆ ಸಚಿವ ಸಂಪುಟ ವಿಸ್ತರಣೆಯನ್ನು ಕಡ್ಡಾಯವಾಗಿ ಮಾಡುತ್ತೇವೆ ಎಂದು ಹೇಳಿದರು.
ಸರ್ಕಾರ 5 ವರ್ಷ ಪೂರೈಸಲಿದೆ: ಕಾಂಗ್ರೆಸ್ -ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಯಾವ ಆತಂಕವಿಲ್ಲ. ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಕರೆ ಮಾಡಿ ಆಮಿಷವೊಡ್ಡುತ್ತಿದ್ದು, ನಮ್ಮ ಶಾಸಕರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರವು ಐದು ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ಪೂರೈಸಲಿದೆ ಎಂದು ಕೆ.ಸಿ. ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯವರು ಅನಗತ್ಯ ರಾಜಕಾರಣಕ್ಕೆ ಕೈ ಹಾಕುವ ಮೂಲಕ ಎಲ್ಲವನ್ನೂ ಸೃಷ್ಟಿ ಮಾಡುತ್ತಿದ್ದಾರೆ.
ಸರ್ಕಾರ ಅತಂತ್ರ ಗಾಳಿ ಸುದ್ದಿಗಳೆಲ್ಲಾ ಬಿಜೆಪಿ ನಾಯಕರ ಷಡ್ಯಂತ್ರ. ಸಮ್ಮಿಶ್ರ ಸರ್ಕಾರವು ನೂರು ದಿನ ಪೂರೈಸಿ ಮುನ್ನುಗ್ಗುತ್ತಿದೆ. ಬಿಜೆಪಿಯವರ ಕುತಂತ್ರ ಗಳಿಂದ ಸಮ್ಮಿಶ್ರ ಸರ್ಕಾರಕ್ಕೆ ಭಯವಿಲ್ಲ. ಕಾಂಗ್ರೆಸ್‌ನ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರವು ೫ ವರ್ಷ ಯಶಸ್ವಿಯಾಗಿ ಪೂರೈಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆ ಚುನಾವಣೆ ತಯಾರಿಗೆ ಸಂಬಂಧಿಸಿದಂತೆ ಪದಾಧಿಕಾರಿಗಳ ಬದಲಾವಣೆ ಕುರಿತು ಚರ್ಚೆ ಮಾಡಲಾಗುವುದು. ಜತೆಗೆ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ, ಚುನಾವಣಾ ರಣತಂತ್ರ ಸೇರಿದಂತೆ ಎಲ್ಲವನ್ನೂ ಚರ್ಚೆ ಮಾಡುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.