ಬಿಎಸ್ಪಿಗೆ ಕಾಂಗ್ರೆಸ್ ವೈರಿ, ಜೆಡಿಎಸ್ ಮಿತ್ರ

By Web DeskFirst Published Oct 30, 2018, 3:10 PM IST
Highlights

ಮಂಡ್ಯ, ಶಿವಮೊಗ್ಗ ಲೋಕಸಭೆ ಹಾಗೂ ರಾಮ ನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಬಿಎಸ್ಪಿ ಸಂಪೂರ್ಣ ಬೆಂಬಲ ನೀಡಲಿದೆ. ಉಳಿದಂತೆ ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷ ತಟಸ್ಥ ನಿಲುವು ಹೊಂದಿದ್ದೇವೆ : ಎನ್. ಮಹೇಶ್ 

ಮಂಡ್ಯ[ಅ.30]: ನಮಗೆ ಕಾಂಗ್ರೆಸ್ ವೈರಿ. ಜೆಡಿಎಸ್ ನಮ್ಮ ಮಿತ್ರ ಪಕ್ಷ. ಹೀಗಾಗಿ ಕಾಂಗ್ರೆಸ್ ಸ್ವರ್ಧಿಸಿರುವ ಕ್ಷೇತ್ರಗಳಲ್ಲಿ ನಾವು ತಟಸ್ಥವಾಗಿರುತ್ತವೆ. ಜೆಡಿಎಸ್ ಸ್ಪರ್ಧೆ ಮಾಡಿರುವ ಕಡೆ  ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಹಾಗೂ ಮಾಜಿ ಸಚಿವ ಎನ್. ಮಹೇಶ್ ಸೋಮವಾರ ಪ್ರಕಟಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಎನ್. ಮಹೇಶ್, ಚುನಾವಣಾ ಪೂರ್ವದಲ್ಲಿ ಜೆಡಿಎಸ್ ನೊಂದಿಗೆ ಬಹುಜನ ಸಮಾಜ ಪಕ್ಷ ಮೈತ್ರಿ ಮಾಡಿ ಕೊಂಡಿದೆ. ಅದೇ ಮೈತ್ರಿ ಲೋಕಸಭೆ ಉಪ ಚುನಾವಣೆಗೂ ಮುಂದುವರೆದಿದೆ ಹೇಳಿದರು.

ಮಂಡ್ಯ, ಶಿವಮೊಗ್ಗ ಲೋಕಸಭೆ ಹಾಗೂ ರಾಮ ನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಬಿಎಸ್ಪಿ ಸಂಪೂರ್ಣ ಬೆಂಬಲ ನೀಡಲಿದೆ. ಉಳಿದಂತೆ ಬಳ್ಳಾರಿ ಲೋಕಸಭೆ ಹಾಗೂ ಜಮಖಂಡಿ ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷ ತಟಸ್ಥ ನಿಲುವು ಹೊಂದಿದ್ದೇವೆ. ಏಕೆಂದರೆ ಕಾಂಗ್ರೆಸ್ ಪಕ್ಷವನ್ನು ನಾವು ವಿರೋಧಿಸಿಕೊಂಡೇ ಚುನಾವಣೆ ಎದುರಿಸಿದ್ದೇವೆ. ಹೀಗಾಗಿ ಅವರಿಗೆ ಯಾವುದೇ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದರು.

ಪಕ್ಷ ಸಂಘಟನೆಗಾಗಿ ರಾಜೀನಾಮೆ: ಪ್ರಾಥಮಿಕ ಶಿಕ್ಷಣ ಇಲಾಖೆಯ ಸಚಿವನಾಗಿ 4 ತಿಂಗಳ ಅನುಭವದಲ್ಲಿ ಅದಕ್ಕಾಗಿಯೇ ದಿನದ 24 ಗಂಟೆಗಳ ಕಾಲ ಕೆಲಸ ಮಾಡಬೇಕು. ಆಗ ಮಾತ್ರ ಶಿಕ್ಷಣದಲ್ಲಿ ಸುಧಾರಣೆ ತರಲು ಸಾಧ್ಯ. ಆ ಕಡೆ ಹೆಚ್ಚು ಗಮನಹರಿಸಿದರೆ, ಮುಂದಿನ ಚುನಾವಣೆಗಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆಯ ಕೆಲಸ ಕಷ್ಟವಾಗುತ್ತದೆ. ನನಗೆ ಪಕ್ಷ ಮತ್ತು ಜವಾಬ್ದಾರಿ ಮುಖ್ಯವಾಗಿರುವ ಕಾರಣಕ್ಕಾಗಿ ರಾಜೀನಾಮೆ ನೀಡಿ ಹೊರ ಬಂದಿದೆ ಎಂದರು .

ಹೈಕಮಾಂಡ್ ನಿರ್ಧಾರದಂತೆ ಮೈತ್ರಿ: ಕಳೆದ ವಿಧಾನಸಭೆ ಚುನಾವಣೆಯಂತೆ ಉಪಚುನಾವಣೆಯಲ್ಲಿ ಹೈಕಮಾಂಡ್ ನಾಯಕರು ಮಾಡಿ ಜೆಡಿಎಸ್‌ನೊಂದಿಗೆ ಮೈತ್ರಿ ಬೆಳಸಿದ್ದರು. ಆದರೆ ಇದು ಮುಂದಿನ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಆಗುತ್ತದೆ ಅಥವಾ ಇಲ್ಲವೋ ಎಂಬುದು ನಮ್ಮ ನಾಯಕಿ ಮಾಯಾವತಿ ಹಾಗೂ ದೇವೇಗೌಡರ ನಿರ್ಧಾರದ ಅವಲಂಬಿತವಾಗಿ ರುತ್ತದೆ ಎಂದರು.

ಮೈತ್ರಿ ಸರ್ಕಾರ 5 ವರ್ಷ ಉಳಿಯಬೇಕು: ಮೈತ್ರಿ ಸರ್ಕಾರದಲ್ಲಿ ಸಚಿವನಾಗಿ 4 ತಿಂಗಳಲ್ಲಿ ಗಮನಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಡಳಿತ ಉತ್ತಮವಾಗಿದೆ. ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಹರಿಕಾರ, ಹಲವಾರು ಕನಸುಗಳನ್ನು ಕಟ್ಟಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಅವರ ಕನಸುಗಳು ನನಸು ಆಗಬೇಕಾದರೆ ಉಪಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಹೇಳಿದರು.

ಕುಮಾರಸ್ವಾಮಿ ಬಡವರ, ನಿರ್ಗತಿಕರ, ರೈತರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲು 5 ವರ್ಷದ ಆಡಳಿತ ಅವಶ್ಯಕವಾಗಿದೆ. ಆದ್ದರಿಂದ ಅದಕ್ಕೆ ಶಕ್ತಿ ತುಂಬಲು ಉಪಚುನಾವಣೆಯಲ್ಲಿ ಜಿಲ್ಲೆಯ ಜನತೆ ಪಕ್ಷದ ಅಭ್ಯರ್ಥಿ ಎಲ್.ಆರ್ .ಶಿವರಾಮೇಗೌಡರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಬಿಎಸ್ಪಿ ಮುಖಂಡರಾದ ಸಿದ್ದಯ್ಯ, ನರಸಿಂಹಮೂರ್ತಿ, ಪಾಪಯ್ಯ ಉಪಸ್ಥಿತರಿದ್ದರು.
 

click me!