
ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿಗೀಡಾಗಿರುವ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ 45 ತಾಲೂಕುಗಳನ್ನು ರಾಜ್ಯ ಸರಕಾರವು ‘ಪ್ರವಾಹ ಪೀಡಿತ ತಾಲೂಕು’ ಎಂದು ಘೋಷಿಸಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಕಳೆದ ಎರಡು ತಿಂಗಳಿಂದ ಈಚೆಗೆ ಎಂಟು ಜಿಲ್ಲೆಗಳಲ್ಲಿ ಭಾರಿ ಮಳೆ ಉಂಟಾಗಿದ್ದು, ಪ್ರವಾಹ, ಭೂಕುಸಿತದಿಂದಾಗಿ ಅಪಾರ ಬೆಳೆ, ಆಸ್ತಿ ಹಾಗೂ ಜೀವ ಹಾನಿ ಉಂಟಾಗಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಎನ್‌ಡಿಆರ್‌ಎಫ್ ಅಡಿ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿತ್ತು. ಮಳೆ ಹಾನಿಯಿಂದ ಉಂಟಾದ ನಷ್ಟ ಆಧರಿಸಿ, ಪ್ರವಾಹಪೀಡಿತ ತಾಲೂಕುಗಳು ಎಂದು ಘೋಷಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಭಾನುವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರಿಗೆ ಹಲವು ಅನುಕೂಲ: ರಾಜ್ಯ ಸರಕಾರವು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸಿರುವ 45ತಾಲೂಕಿನ ಸಂತ್ರಸ್ತರು ರಾಷ್ಟ್ರೀಕೃತ ಹಾಗೂ ಶೆಡ್ಯೂಲ್ಡ್ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲಗಳ ಮರುಪಾವತಿಗೆ ಹೆಚ್ಚಿನ ಕಾಲಾವಕಾ ಶ ಸಿಗಲಿದೆ. ಪ್ರವಾಹ, ಅನಾವೃಷ್ಟಿ, ಅಗ್ನಿ ಅವಘಡ ಸೇರಿದಂತೆ ಇತ್ಯಾದಿ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸಾಲ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಲು ಆರ್‌ಬಿಐ ನಿಯಮದಲ್ಲಿ ಅವಕಾಶ ಸಿಗಲಿದೆ.
ಜತೆಗೆ ಇಂತಹ ಸಂಧರ್ಭದಲ್ಲಿ ಸಂತ್ರಸ್ತರ ಅಲ್ಪಾವಧಿ ಬೆಳೆ ಸಾಲವು ದೀರ್ಘಾವಧಿ ಬೆಳೆ ಸಾಲವಾಗಿ ಮಾರ್ಪಡುತ್ತದೆ. ಅಲ್ಲದೆ, ಹೊಸ ಸಾಲವನ್ನು ತೆಗೆದುಕೊಳ್ಳಲು ಕೂಡ ಅವಕಾಶ ದೊರೆಯುತ್ತದೆ ಎಂದು ಸಚಿವರು ತಿಳಿಸಿದರು. ಬೆಂಗಳೂರಿನಲ್ಲಿ ಇತ್ತೀಚೆಗೆ ಈ ಬಗ್ಗೆ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಭೆ ನಡೆಸಲಾಗಿತ್ತು. ಜತೆಗೆ ಕೊಡಗಿನಲ್ಲಿ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಸಭೆ ಕೂಡ ನಡೆಸಲಾಗಿದೆ. ಎರಡೂ ಸಭೆಗಳಲ್ಲಿ ಪ್ರವಾಹಪೀಡಿತ ತಾಲೂಕುಗಳ ಸಂತ್ರಸ್ತರಿಗೆ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ನೆರವು ನೀಡಲು ತೀರ್ಮಾನಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.